ಸಾರಾಂಶ
ಜಿಲ್ಲಾ ಬಾಲಭವನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ವೀರೇಂದ್ರ ಪಪ್ಪಿ ಹೇಳಿಕೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶಾಸಕರ ಅನುದಾನದಲ್ಲಿ 20 ಲಕ್ಷ ರು. ಹಿರಿಯ ನಾಗರೀಕರಿಗಾಗಿಯೇ ಮೀಸಲು ಇರಿಸಿರುವುದಾಗಿ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಹೇಳಿದರು.ನಗರದ ಜಿಲ್ಲಾ ಬಾಲಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ನಾಗರೀಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿ ಯಶಸ್ವಿ ವ್ಯಕ್ತಿಗಳ ಹಿಂದೆ ಅವರ ಪೋಷಕರ ತ್ಯಾಗ ಇದೆ. ಮಕ್ಕಳ ಏಳಿಗೆಗಾಗಿ ಪೋಷಕರು ತಮ್ಮ ಯೌವ್ವನ ಮುಡುಪಾಗಿಡುತ್ತಾರೆ. ಆದರೆ ಬೆಳೆದು ದೊಡ್ಡವರಾದ ಮಕ್ಕಳು ವಯಸ್ಸಾದ ಪೋಷಕರನ್ನು ಎಷ್ಟರಮಟ್ಟಿಗೆ ನೋಡಿಕೊಳ್ಳುತ್ತಾರೆ ಎನ್ನುವುದು ಇಂದಿನ ಸಮಾಜದಲ್ಲಿ ಯಕ್ಷ ಪ್ರಶ್ನೆಯಾಗಿದೆ.
ಪ್ರತಿ ಜಿಲ್ಲೆಯಲ್ಲಿ 3 ವೃದ್ಧಾಶ್ರಮಗಳನ್ನು ಸ್ಥಾಪಿಸಲಾಗಿದೆ. ಹಿರಿಯರಿಗಾಗಿ 1090 ಸಹಾಯವಾಣಿ ತೆರಯಲಾಗಿದೆ. ಆರೋಗ್ಯ ಸಮಸ್ಯೆ ಹಾಗೂ ಕಾನೂನು ನೆರವು, ಆಪ್ತ ಸಮಾಲೋಚನೆ ಪಡೆಯಲು ಹಿರಿಯ ನಾಗರೀಕರು ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರದಲ್ಲೂ ಹಿರಿಯ ನಾಗರೀಕರಿಗೆ ರಿಯಾಯಿತಿ ನೀಡಲಾಗಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ 60 ರಿಂದ 65 ವರ್ಷದವರಿಗೆ 800 ರು.ಹಾಗೂ 65 ವರ್ಷ ಮೇಲ್ಪಟ್ಟವರಿಗೆ 1200 ರು.ನೀಡಲಾಗುತ್ತಿದೆ. ಇದರೊಂದಿಗೆ 2007ರಲ್ಲಿ ಹಿರಿಯ ನಾಗರೀಕರ ರಕ್ಷಣಾ ಕಾಯ್ದೆಯನ್ನು ಸಹ ಜಾರಿ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಹಿರಿಯ ನಾಗರೀಕರ ಅವಹಾಲುಗಳನ್ನು ಆಲಿಸಲು ನ್ಯಾಯ ಮಂಡಳಿ ಸ್ಥಾಪಿಸಲಾಗಿದೆ ಎಂದರು.ವಿಜ್ಞಾನ ಎಷ್ಟೇ ಮುಂದುವರಿದರೂ ಇಂದಿಗೂ ಕೃತಕವಾಗಿ ಕಣ್ಣು ತಯಾರಿಸುವುದು ಸಾಧ್ಯವಾಗಿಲ್ಲ. ನಮ್ಮ ಕಣ್ಣುಗಳ ರಕ್ಷಣೆ ನಮ್ಮದೇ ಜವಾಬ್ದಾರಿಯಾಗಿದೆ. ಕೆಸಿ.ವಿರೇಂದ್ರ ಪಪ್ಪಿ ಅಭಿಮಾನಿ ಬಳಗ ಹಾಗೂ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಕ್ಷೇತ್ರದ 10 ಪಂಚಾಯಿತಿಗಳಲ್ಲಿ ಹಿರಿಯ ನಾಗರೀಕರು ಸೇರಿದಂತೆ ಎಲ್ಲಾ ವರ್ಗದವರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಸಲಾಗಿದೆ. 4,830 ಜನರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಗಿದೆ. 213 ಜನರನ್ನು ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಗೆ ಕರೆದೊಯ್ದು ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಿಸಿ ಸುರಕ್ಷಿತವಾಗಿ ಮರಳಿ ಅವರ ಮನೆಗಳಿಗೆ ತಲುಪಿಸಲಾಗಿದೆ. 861 ಜನರಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಪಂಚಾಯಿತಿಗಳಲ್ಲಿಯೂ ಉಚಿತ ಕಣ್ಣಿನ ಶಿಬಿರ ಆಯೋಜಿಸಲಾಗುವುದು. ಇದರೊಂದಿಗೆ ಸರ್ಕಾರದ ವತಿಯಿಂದ ಆಯೋಜಿಸಲಾದ ಶಿಬಿರದಲ್ಲೂ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಹಿರಿಯ ನಾಗರೀಕರು ಮಾಡಿಸಿಕೊಳ್ಳುವಂತೆ ಶಾಸಕರು ಸಲಹೆ ನೀಡಿದರು.
ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ.ಪ್ರದೀಪ್ ಮಾತನಾಡಿ, ನೇತ್ರದಾನ ಮಹಾದಾನ ಎನ್ನುವುದಕ್ಕಿಂತಲೂ ದೃಷ್ಠಿದಾನ ಮಹಾದಾನ. ಪ್ರತಿಯೊಬ್ಬರು ದೃಷ್ಠಿದಾನ ಮಾಡಬಹುದು. ಕಣ್ಣಿನ ತೊಂದರೆ ಇರುವ ತಮ್ಮ ನೆರೆ-ಹೊರೆಯ ಹಿರಿಯ ನಾಗರೀಕರನ್ನು ನೇತ್ರ ತಪಾಸಣಾ ಶಿಬಿರಗಳಿಗೆ ಕರೆದುಕೊಂಡು ಬರುವ ಮೂಲಕ ತಾವು ಸಹ ದೃಷ್ಠಿದಾನ ಮಾಡಬಹುದು. ಕಣ್ಣಿನ ತೊಂದರೆ ಇರುವವರು ಜಿಲ್ಲಾಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ.ಆರ್ ಬಣಕಾರ್ ಮಾತನಾಡಿ, ಮುಪ್ಪು ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬರಲಿದೆ. ವಯಸ್ಸಾದಂತೆ ನಮ್ಮ ದೇಹವು ಅನೇಕ ಸಮಸ್ಯೆಗಳಿಗೆ ಒಳಗಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಕಣ್ಣುಗಳು ಅತೀ ಅವಶ್ಯಕ. ಇಲಾಖೆ ವತಿಯಿಂದ ಇದೇ ಪ್ರಥಮ ಬಾರಿಗೆ ನೇತ್ರ ತಪಾಸಣೆ ಶಿಬಿರ ಏರ್ಪಡಿಸಿ ಶಸ್ತ್ರಚಿಕಿತ್ಸೆಗೆ ಅವಕಾಶ ಕಲ್ಪಿಸಿದ್ದು ಹಿರಿಯ ನಾಗರೀಕರ ಅನುಕೂಲಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, 2024-25ನೇ ಸಾಲಿನಲ್ಲಿ ಹಿರಿಯ ನಾಗರೀಕರ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ವಿಶೇಷ ಅಭಿಯಾನ ಯೋಜನೆ ಘೋಷಿಸಿದ್ದು ಮಾರ್ಗಸೂಚಿಯನ್ವಯ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿ ನೀಡಿ ಸರ್ಕಾರ ಆದೇಶಿಸಿದೆ. ಅದರಂತೆ ಆರೋಗ್ಯ ಇಲಾಖೆಯೊಂದಿಗೆ ಸಮನ್ವಯಿಸಿ ಎಲ್ಲಾ ತಾಲೂಕುಗಳಲ್ಲಿಯೂ ಹಿರಿಯ ನಾಗರೀಕರಿಗೆ ಪ್ರತಿ ವರ್ಷ 02 ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಬೇಕಾಗಿರುತ್ತದೆ. ಆದ್ದರಿಂದ ಪ್ರಥಮ ಹಂತದಲ್ಲಿ ಜಿಲ್ಲೆಯ 6 ತಾಲೂಕುಗಳಲ್ಲಿ ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ಚಿಕಿತ್ಸೆಗಾಗಿ ಪೂರ್ವಭಾವಿ ಶಿಬಿರಗಳನ್ನು ಇದೇ ಜ.3 ರಿಂದ 10 ರವರಗೆ ಆಯೋಜಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಪಾಪಯ್ಯ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ನಾಗರಾಜ್, ತಾಲೂಕು ಪಂಚಾಯ್ತಿ ಇಒ ವೈ.ರವಿಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ ಸೇರಿ ಹಿರಿಯ ನಾಗರೀಕರು ಹಾಜರಿದ್ದರು.