ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ: ಇಂದು ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ

| Published : Nov 15 2025, 02:45 AM IST

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ: ಇಂದು ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕ್ಷೇತ್ರ ಧರ್ಮಸ್ಥಳದ ಬೆಳಕಿನ ಹಬ್ಬ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ 5 ದಿನಗಳ ಲಕ್ಷದೀಪೋತ್ಸವ ಸಂಭ್ರಮ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನರಂಜನಾ ಚಟುವಟಿಕೆಗಳ ಮೂಲಕ ಶನಿವಾರ ಪ್ರಾರಂಭವಾಗಲಿದೆ.

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಬೆಳಕಿನ ಹಬ್ಬ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ 5 ದಿನಗಳ ಲಕ್ಷದೀಪೋತ್ಸವ ಸಂಭ್ರಮ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನರಂಜನಾ ಚಟುವಟಿಕೆಗಳ ಮೂಲಕ ಶನಿವಾರ ಪ್ರಾರಂಭವಾಗಲಿದೆ.

ಕ್ಷೇತ್ರದ ಸನಿಹ ಇರುವ ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ಮೈದಾನದಲ್ಲಿ ಸಿದ್ಧವಾಗಿರುವ ಲಕ್ಷದೀಪೋತ್ಸವ ರಾಜ್ಯ ಮಟ್ಟದ ವಸ್ತುಪ್ರದರ್ಶನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತಿಯಲ್ಲಿ ಶಾಸಕ ಹರೀಶ ಪೂಂಜ ಶನಿವಾರ ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನ ಮಳಿಗೆಗಳಲ್ಲಿ ವಿವಿಧ ರೀತಿಯ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವಿದ್ದು ಆರೇಳು ದಿನಗಳ ಕಾಲ ಅದನ್ನು ವೀಕ್ಷಿಸಬಹುದಾಗಿದೆ ಮತ್ತು ತಮಗೆ ಪ್ರಿಯವಾದ ವಸ್ತುಗಳನ್ನು ಖರೀದಿಸಬಹುದಾಗಿದೆ. ಪ್ರದರ್ಶಿನಿಯ ಒಂದು ಭಾಗದಲ್ಲಿ ವೇದಿಕೆ ಸಿದ್ಧಮಾಡಲಾಗಿದ್ದು ಅಲ್ಲಿ 5 ದಿನಗಳ ಕಾಲ ಪ್ರತಿಭಾನ್ವಿತರಿಂದ, ಸಾಧಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ವಸ್ತು ಪ್ರದರ್ಶನ ಮಂಟಪದಲ್ಲಿ ಇಂದು:

ಸಂಜೆ 6 ಗಂಟೆಯಿಂದ ಶ್ರೀ ಸರ್ವೇಶ ದೇವಸ್ಥಳಿ ಉಜಿರೆ ಮತ್ತು ಸಹ ಕಲಾವಿದರಿಂದ ಭಕ್ತಿ ರಸಾಂಜಲಿ, 7 ರಿಂದ ಬೆಂಗಳೂರಿನ ಮೇಘನಾ ವರದರಾಜು ಅವರಿಂದ ನೃತ್ಯ ನಿವೇದನಮ್, 8 ಗಂಟೆಯಿಂದ ಕಿನ್ನಿಗೋಳಿಯ ಲೋಲಾಕ್ಷ ಮತ್ತು ಬಳಗದವರಿಂದ ಜಾದೂ ಪ್ರದರ್ಶನ, 8.50 ಕ್ಕೆ ಕಾರ್ಕಳದ ಶ್ರೀ ನೃತ್ಯಾಲಯದ ವಿದ್ವಾನ್ ಸುಬ್ರಹ್ಮಣ್ಯ ನಾವಡ ಇವರಿಂದ ನೃತ್ಯರೂಪಕ, ಬಳಿಕ ಕೊನೆಯಲ್ಲಿ ಎಸ್.ಡಿ.ಎಂ.ಕಾಲೇಜು ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪಾದಯಾತ್ರೆ:

ಶಿವಪಂಚಾಕ್ಷರಿ ಜಪ ಹಾಗೂ ಭಕ್ತಿ ಭಜನೆಯ ಮೂಲಕ ಉಜಿರೆ ಶ್ರೀ ಜನಾರ್ದನ ಸ್ವಾಮೀ ದೇವಳದಿಂದ ಧರ್ಮಸ್ಥಳದವರೆಗೆ ಸಾವಿರಾರು ಭಕ್ತ ಸಂದೋಹವು ಶನಿವಾರ ಸಂಜೆ 3 ಗಂಟೆಯಿಂದ 13 ನೇ ವರ್ಷದ ಪಾದಯಾತ್ರೆ ನಡೆಸಲಿದೆ. ಉಜಿರೆ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ದೀಪ ಬೆಳಗಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪಾದಯಾತ್ರೆಯಲ್ಲಿ 10 ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಂಜೆ 6 ಗಂಟೆಯ ಸುಮಾರಿಗೆ ಪಾದಯಾತ್ರೆಯು ಧರ್ಮಸ್ಥಳ ಪ್ರವೇಶಿಸಲಿದೆ. ಬಳಿಕ ಯಾತ್ರಿಕರು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿ ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಶೀರ್ವಾದ ಪಡೆಯಲಿದೆ.

ವಸ್ತು ಪ್ರದರ್ಶನ ಮಂಟಪದಲ್ಲಿ ನಾಳೆ

ಸಂಜೆ 6 ಗಂಟೆಯಿಂದ ಧಾರವಾಡದ ಡಾ. ವಿಜಯ ಕುಮಾರ್ ಪಾಟೀಲ್ ಇವರಿಂದ ಭಜನ್ ಸಂಧ್ಯಾ, 7 ಗಂಟೆಯಿಂದ ವಿದುಷಿ ನಿಶಾ ಪ್ರಸಾದ್ ಮಣೂರು ಇವರಿಂದ ನೃತ್ಯಾಂಜಲಿ, 8 ಗಂಟೆಯಿಂದ ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ ಸಹೋದರಿಯರಿಂದ ಯುಗಳ ನೃತ್ಯ, 9 ಗಂಟೆಯಿಂದ ಬೆಂಗಳೂರು ಮಹಿಮಾ ಎನ್. ಮರಾಠೆ ಇವರಿಂದ ಶಾಸ್ತ್ರೀಯ ಸಮೂಹ ನೃತ್ಯ ಬಳಿ, ವಿದುಷಿ ವಿದ್ಯಾ ಮನೋಜ್ ಕಲಾನಿಕೇತನ ಕಲ್ಲಡ್ಕ ಇವರಿಂದ ನೃತ್ಯ ವಲ್ಲರಿ ಇರಲಿದೆ.