ಕನ್ನಡಪ್ರಭ ವಾರ್ತೆ ಅರಸೀಕೆರೆಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಲಾಳನಕೆರೆ ಯೋಗೀಶ್, ‘ನನಗೆ 10 ಲಕ್ಷ ರು. ನೀಡಿದ್ದೇನೆ’ ಎಂಬ ಹೇಳಿಕೆಗೆ ಸಂಬಂಧಿಸಿ ಮೇ 31ರಂದು ಲಾಳನಕೆರೆ ಮಾರಿಕಾಂಬಾ ದೇವಿ ದೇವಸ್ಥಾನದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಆಣೆ ಪ್ರಮಾಣ ಮಾಡುವಂತೆ ಸವಾಲು ಹಾಕಿದರು. ಆರೋಪ ಸಾಬೀತುಪಡಿಸಲು ವಿಫಲವಾದರೆ ತಮ್ಮ ವಿರುದ್ಧದ ಹೇಳಿಕೆ ಸುಳ್ಳು ಎಂದು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗೀಶ್, ಮೇ 20ರಂದು ಕೆಲವು ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡಿದ ಆಡಿಯೋದಲ್ಲಿ ಎನ್. ಆರ್. ಸಂತೋಷ್ ತಮ್ಮ ವಿರುದ್ಧ ಅವಹೇಳನಕಾರಿ ಹಾಗೂ ಏಕವಚನ ಪದಗಳನ್ನು ಬಳಸಿರುವುದಾಗಿ ಆರೋಪಿಸಿದರು. ‘ನನಗೆ 10 ಲಕ್ಷ ರು. ನೀಡಿದ್ದಾರೆ ’ ಎಂಬುದಾಗಿ ಮಾತನಾಡಿರುವುದು ಸಂಪೂರ್ಣ ಸುಳ್ಳು. ದೇವಿಯ ಸನ್ನಿಧಿಯಲ್ಲಿ ಸತ್ಯಾಸತ್ಯತೆ ಬಹಿರಂಗವಾಗಬೇಕು ಎಂದು ಹೇಳಿದರು.
ಈ ಹಿಂದೆ ಲಾಳನಕೆರೆ ಗ್ರಾಮದ ಮಾರಿಕಾಂಬಾ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಸರ್ಕಾರದಿಂದ 10 ಲಕ್ಷ ರು. ಅನುದಾನ ತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರೂ, ಆ ಅನುದಾನ ಮಂಜೂರಾಗಿರಲಿಲ್ಲ. ಬಳಿಕ ಉದ್ಯಮಿ ಕೆವಿಎನ್ ಶಿವು ಅವರು 4 ಲಕ್ಷ ರು. ದೇಣಿಗೆ ನೀಡಿದ್ದು, ಅದನ್ನು ಹೊರತುಪಡಿಸಿ ದೇವಸ್ಥಾನಕ್ಕೆ ಬೇರೆ ಯಾವುದೇ ಹಣ ಬಂದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿಯೇ ಸ್ಪಷ್ಟಪಡಿಸಿದೆ ಎಂದು ಯೋಗೀಶ್ ತಿಳಿಸಿದರು.ಕಾಂಗ್ರೆಸ್ ಪರ ಗುರುತಿಸಿಕೊಂಡಿರುವ ಮಿಥುನ್ ಎಂಬ ಯುವಕ ನಡೆಸಿದ ದೂರವಾಣಿ ಸಂಭಾಷಣೆಯ ವೇಳೆ, ‘ಯೋಗೀಶ್‌ಗೆ 10 ಲಕ್ಷ ರು. ಕೊಟ್ಟಿದ್ದೇನೆ, ಹಣ ಕೊಡದಿದ್ದರೆ ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿ ಹೊಡೆಯಿರಿ’ ಎಂದು ಎನ್. ಆರ್. ಸಂತೋಷ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ ಎಂದು ಹೇಳಿದರು. ಸಂತೋಷ್ ಹಾಗೂ ಮಿಥುನ್ ಇಬ್ಬರೂ ದೇವಿಯ ಮುಂದೆ ಆಣೆ ಪ್ರಮಾಣ ಮಾಡಲಿ. ಅವರು ಸತ್ಯ ಎಂದು ಪ್ರಮಾಣ ಮಾಡಿದರೆ ನನ್ನ ಆಸ್ತಿಯನ್ನೇ ಮಾರಾಟ ಮಾಡಿ ಗ್ರಾಮಕ್ಕೆ 10 ಲಕ್ಷ ರು. ನೀಡುತ್ತೇನೆ. ಅವರು ಪ್ರಮಾಣ ಮಾಡಲು ಹಿಂದೇಟು ಹಾಕಿದರೆ, ನನ್ನ ವಿರುದ್ಧದ ಆರೋಪ ಸುಳ್ಳು ಎಂದು ಜನತೆ ಅರ್ಥಮಾಡಿಕೊಳ್ಳಬೇಕು ಎಂದು ಯೋಗೀಶ್ ಸವಾಲು ಹಾಕಿದರು.ತಮ್ಮ ವಿರುದ್ಧ ಮಾನಹಾನಿ ಮಾಡುವ ರೀತಿಯಲ್ಲಿ ಆರೋಪ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಎನ್. ಆರ್. ಸಂತೋಷ್ ಹಾಗೂ ಮಿಥುನ್ ವಿರುದ್ಧ ಪೊಲೀಸ್ ದೂರು ದಾಖಲಿಸಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಒಮ್ಮೆ ಬಿಜೆಪಿ, ಮತ್ತೊಮ್ಮೆ ಜೆಡಿಎಸ್, ಇನ್ನೊಮ್ಮೆ ಯತ್ನಾಳ್ ತಂಡದಲ್ಲಿ ಗುರುತಿಸಿಕೊಂಡಿರುವ ಎನ್.ಆರ್. ಸಂತೋಷ್ ರಾಜಕೀಯವಾಗಿ ಸ್ಥಿರ ನಿಲುವು ಹೊಂದಿಲ್ಲ. ವಾಸ್ತವ ಅರಿಯದೆ ಸಾರ್ವಜನಿಕವಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.ಮೇ 31ರಂದು ನಡೆಯಲಿರುವ ಆಣೆ ಪ್ರಮಾಣದ ಬೆಳವಣಿಗೆಗಳನ್ನು ಆಧರಿಸಿ ವಿಷಯವನ್ನು ಜೆಡಿಎಸ್ ರಾಜ್ಯ ಹಾಗೂ ಜಿಲ್ಲಾ ನಾಯಕತ್ವದ ಗಮನಕ್ಕೂ ತರಲಾಗುವುದು ಎಂದು ಯೋಗೀಶ್ ಹೇಳಿದರು.ಫೋಟೋ:ಪತ್ರಿಕಾಗೋಷ್ಠಿಯಲ್ಲಿ ಜಡಿಎಸ್ ಮುಖಂಡ ಎನ್ ಆರ್ ಸಂತೋಷ್ ವಿರುದ್ಧ ಲಾಳನಕೆರೆ ಯೋಗೀಶ್ ಆಕ್ರೋಶ ಹೊರಹಾಕಿದರು.