ಸಾರಾಂಶ
ರಾಜ್ಯ ಸರ್ಕಾರವು ರೈತರ ಜಮೀನು ಕಿತ್ತುಕೊಂಡು ಬೀದಿಪಾಲು ಮಾಡುತ್ತಿದೆ. ದರಕಾಸ್ತು ಸಮಿತಿಯಿಂದ ಅನುಮೋದನೆಗೊಂಡು ಸರ್ಕಾರದ ದರಕಾಸ್ತು ಮುಖಾಂತರ ರೈತರಿಗೆ ಜಮೀನು ಮಂಜೂರು ಮಾಡಿದ್ದು ಅದನ್ನು ಉಳಿಮೆ ಮಾಡಲಾಗುತ್ತಿದೆ. ಈಗ ಅದೇ ಜಮೀನುಗಳನ್ನು ತೆರವು ಮಾಡಿಸಲಾಗುತ್ತಿದೆ ಎಂಬುದು ರೈತರ ಆರೋಪ.
ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ಹರಟಿ, ಅಬ್ಬಣಿ, ಕೋಟಿಗಾನಹಳ್ಳಿ, ಹೆಚ್.ಮಲ್ಲಂಡಹಳ್ಳಿ, ಶಿಳ್ಳಂಗೆರೆ ಗ್ರಾಮಗಳ ೧೭೭ ಎಕರೆ ರೈತರು ಅನುಭವದಲ್ಲಿದ್ದ ಜಮೀನನ್ನು ಅರಣ್ಯ ಇಲಾಖೆಯು ತೆರವುಗೊಳಿಸುತ್ತಿದ್ದು, ಈ ಗ್ರಾಮಗಳ ರೈತರು ಸುಮಾರು ೧೦೦-೧೨೦ ವರ್ಷದಿಂದ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಏಕಾಏಕಿ ಅರಣ್ಯ ಇಲಾಖೆ ಜೆಸಿಬಿಗಳನ್ನು ತಂದು ಮಾವಿನ ಮರ, ಪಾಲಿ ಹೌಸ್, ಕೋಳಿ ಫಾರಂ, ಪಂಪು ಮೋಟಾರ್ ಹಾಗೂ ಬೆಳೆಯನ್ನು ನಾಶಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಖಂಡಿಸಿದರು.ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಮಾತನಾಡಿ, ರಾಜ್ಯ ಸರ್ಕಾರವು ರೈತರ ಜಮೀನು ಕಿತ್ತುಕೊಂಡು ಬೀದಿಪಾಲು ಮಾಡುತ್ತಿದೆ. ದರಕಾಸ್ತು ಸಮಿತಿಯಿಂದ ಅನುಮೋದನೆಗೊಂಡು ಸರ್ಕಾರದ ದರಕಾಸ್ತು ಮುಖಾಂತರ ರೈತರಿಗೆ ಜಮೀನು ಮಂಜೂರು ಮಾಡಿದ್ದು ಅದನ್ನು ಉಳಿಮೆ ಮಾಡಲಾಗುತ್ತಿದೆ. ಈಗ ಅದೇ ಜಮೀನುಗಳನ್ನು ತೆರವು ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು.ಶಾಸಕ, ಸಂಸದರ ಮೌನ
ಈ ಬಗ್ಗೆ ಕೋಲಾರ ಜಿಲ್ಲೆಯ ಶಾಸಕರುಗಳಾಗಲಿ, ಸಂಸದರಾಗಲಿ, ಎಂಎಲ್ಸಿಗಳಾಗಲಿ ಸದನದಲ್ಲಿ ಮಾತನಾಡುತ್ತಿಲ್ಲ. ಆದರೆ ಚುನಾವಣೆ ಬಂದಾಗ ಜನರಿಗೆ ಆಮಿಷ ತೋರಿಸಿ ಯಾಮಾರಿಸುತ್ತಾರೆ ಎಂದು ಟೀಕಿಸಿದರು. ಅರಣ್ಯ ಇಲಾಖೆಯ ಕಾಡಿನಲ್ಲಿ ಪ್ರಾಣಿಗಳಿಗೆ ಸರಿಯಾಗಿ ನೀರಿನ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಇದರಿಂದಾಗಿ ಜಿಂಕೆಗಳು, ಕಾಡುಹಂದಿಗಳು, ನವಿಲುಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವುದನ್ನು ಬಿಟ್ಟು, ರೈತರ ಜಮೀನುಗಳನ್ನು ತೆರವುಗೊಳಿಸುತ್ತಿದ್ದಾರೆ ಇದು ಖಂಡನೀಯ ಎಂದರು.ನಮ್ಮ ಕೋಲಾರ ರೈತ ಸಂಘದ ಜಿಲ್ಲಾ ಸಂಚಾಲಕ ಅಬ್ಬಣಿ ಮುನೇಗೌಡ, ರೈತರಾದ ಕೃಷ್ಣೇಗೌಡ, ಗೋಪಾಲ್, ನಾಗರಾಜ್, ಪ್ರಕಾಶ್, ವೆಂಕಟೇಶ್‌ಗೌಡ, ವೆಂಕಟರಾಮಪ್ಪ, ಮುನಿಯಪ್ಪ, ನಾಗರಾಜ್ ಇದ್ದರು.