ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ

| Published : Feb 10 2024, 01:50 AM IST

ಸಾರಾಂಶ

2023-24 ನೇ ಸಾಲಿನ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದಡಿ ಜಿಲ್ಲೆಯ 480 ವಿದ್ಯಾರ್ಥಿಗಳಿಗೆ ಪ್ರವಾಸ ಅವಕಾಶ ಕಲ್ಪಿಸಲಾಯಿತು. ಮಡಿಕೇರಿ ತಾಲೂಕಿನ 100, ವಿರಾಜಪೇಟೆ ತಾಲೂಕಿನ 140, ಸೋಮವಾರಪೇಟೆ ತಾಲೂಕಿನ 200 ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಇಲಾಕೆ ಅವಕಾಶ ಕಲ್ಪಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರವಾಸೋದ್ಯಮ ಇಲಾಖೆಯಿಂದ 2023-24 ನೇ ಸಾಲಿನ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದಡಿ ಜಿಲ್ಲೆಯ 480 ವಿದ್ಯಾರ್ಥಿಗಳಿಗೆ ಪ್ರವಾಸ ಅವಕಾಶ ಕಲ್ಪಿಸಲಾಯಿತು.

ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಾಗೂ ಮೊರಾರ್ಜಿ ದೇಸಾಯಿ ಹಾಗೂ ಕ್ರೈಸ್ ವಸತಿ ಶಾಲೆಗಳಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ) ಮತ್ತು ಸರ್ಕಾರಿ ಪ್ರೌಢಶಾಲೆಗಳಲ್ಲಿನ ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಇತರ ವರ್ಗದ (ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ) ಮಡಿಕೇರಿ ತಾಲೂಕಿನ 100, ವಿರಾಜಪೇಟೆ ತಾಲೂಕಿನ 140, ಸೋಮವಾರಪೇಟೆ ತಾಲೂಕಿನ 200 ಒಟ್ಟು 480 ವಿದ್ಯಾರ್ಥಿಗಳಿಗೆ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಪ್ರವಾಸ ಕೈಗೊಂಡರು.

ನಗರದ ಗಾಂಧಿ ಮೈದಾನದಲ್ಲಿ ಮಡಿಕೇರಿ ತಾಲೂಕಿನ ವಿದ್ಯಾರ್ಥಿಗಳಿಗೆ ಬೀಳ್ಕೋಟ್ಟು ಶುಭ ಕೋರಲಾಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಎಂ.ಚಂದ್ರಕಾಂತ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಅನಿತಾ ಭಾಸ್ಕರ್, ಶಿಕ್ಷಣಾಧಿಕಾರಿ ಎಂ.ಮಹಾದೇವ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಗುರುರಾಜು, ಶಿಕ್ಷಣ ಸಂಯೋಜಕರಾದ ಹರೀಶ್, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಜತೀನ್ ಬೋಪಣ್ಣ ಮತ್ತಿತರರು ಇದ್ದರು.

ಮೈಸೂರು, ಚಿತ್ರದುರ್ಗ, ಹಂಪಿ, ಬೇಲೂರು-ಹಳೇಬಿಡು, ಶ್ರವಣಬೆಳಗೋಳ ಮತ್ತಿತರ ಪ್ರವಾಸ ಕೇಂದ್ರಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಅನಿತಾ ಭಾಸ್ಕರ್ ತಿಳಿಸಿದ್ದಾರೆ.

ಇಂಟರ್ನ್‌ಶಿಪ್‌ ತರಬೇತಿಗೆ ಅರ್ಜಿ ಆಹ್ವಾನ:

ಮಡಿಕೇರಿ ನಗರಸಭೆ ಕಚೇರಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ‘ದಿ ಅರ್ಬನ್ ಇಂಟರ್ನಶಿಪ್ ಲರ್ನಿಂಗ್ ಪ್ರೋಗ್ರಾಮ್ (ಟಿಯುಎಲ್‌ಐಪಿ) ಕಾರ್ಯಕ್ರಮದಡಿ ಮಡಿಕೇರಿ ನಗರಸಭೆ ವತಿಯಿಂದ ಡೇ-ನಲ್ಮ್ ಅಭಿಯಾನ ಮತ್ತು ಪಿಎಂ ಸ್ವನಿಧಿ ಯೋಜನೆಯಡಿ 8 ರಿಂದ 12 ವಾರಗಳ ಅವಧಿಯ ಇಂಟರ್ನಶಿಪ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮೊ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಗರ ಕಲಿಕ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ 2023-24 ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿದ್ದು, ಡೇ-ನಲ್ಮ್ ಅಭಿಯಾನದ ಉಪಘಟಕಗಳು ಮತ್ತು ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡಿ ಜ್ಞಾನ ಮತ್ತು ಕೌಶಲ್ಯ ವೃದ್ದಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುವುದು ತರಬೇತಿ ಉದ್ದೇಶವಾಗಿದೆ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ಸರ್ಕಾರದ ನಿಯಮಾನುಸಾರ ಸ್ಟೈಫಂಡ್‌ ಪಾವತಿಸಲಾಗುವುದು. ಆಸಕ್ತರು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ 7 ದಿನಗಳ ಒಳಗೆ ಅರ್ಜಿಯನ್ನು ನಗರಸಭೆ ಮಡಿಕೇರಿ ಡೇ-ನಲ್ಮ್ ಶಾಖೆಗೆ ಸಲ್ಲಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗೆ ನಗರಸಭೆ ಮಡಿಕೇರಿ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.