ಕೇಂದ್ರ ಶ್ವೇತಪತ್ರದಲ್ಲಿ ಹುಳುಕು ಹುಡುಕುತ್ತಿರುವ ರಾಜ್ಯ ಸರ್ಕಾರ

| Published : Feb 10 2024, 01:50 AM IST / Updated: Feb 10 2024, 04:21 PM IST

ಕೇಂದ್ರ ಶ್ವೇತಪತ್ರದಲ್ಲಿ ಹುಳುಕು ಹುಡುಕುತ್ತಿರುವ ರಾಜ್ಯ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದಲ್ಲಿ ಮೋದಿ ಸರ್ಕಾರ ಪಾರದರ್ಶಕ ಆಡಳಿತ ನೀಡಿದ್ದು, ಇದೇ ಮೊದಲ ಬಾರಿಗೆ 10 ವರ್ಷಗಳ ಶ್ವೇತ ಪತ್ರವನ್ನು ಸದನದಲ್ಲಿ ಮಂಡಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಹುಳುಕನ್ನು ಹುಡುಕುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇಂದ್ರದಲ್ಲಿ ಮೋದಿ ಸರ್ಕಾರ ಪಾರದರ್ಶಕ ಆಡಳಿತ ನೀಡಿದ್ದು, ಇದೇ ಮೊದಲ ಬಾರಿಗೆ 10 ವರ್ಷಗಳ ಶ್ವೇತ ಪತ್ರವನ್ನು ಸದನದಲ್ಲಿ ಮಂಡಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಹುಳುಕನ್ನು ಹುಡುಕುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಮಹಿಳಾ ಮೋರ್ಚಾ ನೂತನ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ. ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್‌ನವರು ಹೈಡ್ರಾಮ ಮಾಡುತ್ತಿದ್ದಾರೆ. ಸಂಸದ ಸುರೇಶ್, ದೇಶ ವಿಭಜನೆಯ ಮಾತನಾಡಿದರೆ, ಅವರ ಸಹೋದರ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. 

ಭಾಗ್ಯದ ಹೆಸರಿನಲ್ಲಿ ಸರ್ಕಾರ ಖಜಾನೆ ಖಾಲಿ ಮಾಡಿ ಕುಳಿತಿದ್ದು, ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರವನ್ನು ಆರೋಪಿಸುತ್ತಿದ್ದಾರೆ ಎಂದರು.

ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.34 ಮೀಸಲಾತಿ ನೀಡಿ, ಮಹಿಳೆಯರಿಗೆ ಅವಕಾಶ ನೀಡಿದವರು ಪ್ರಧಾನಿ ಮೋದಿ ಅವರು. ಅಬ್ದುಲ್ ಕಲಾಂ ಅವರಿಗೆ ಭಾರತ ರತ್ನ ನೀಡಿದವರು, ಓರ್ವ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ್ದು ಬಿಜೆಪಿ. ಹಿಂದಿನಿಂದಲೂ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಗೌರವವನ್ನು ನೀಡುತ್ತಿದೆ. 

ತಮ್ಮ ಮಾತೃಹೃದಯದ ಮೂಲಕ ಎಲ್ಲರ ವಿಶ್ವಾಸ ಗಳಿಸಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು, ಪಕ್ಷದ ಬೆಳವಣಿಗೆಗೆ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವದ ಭಾರತದಲ್ಲಿ ನಾನು ಮೊದಲ ಬಾರಿಗೆ ಸಂಸದರಾದಾಗ ಪಾರ್ಲಿಮೆಂಟ್‍ನ ಅಧ್ಯಕ್ಷರಾಗಿ ಮೀರಾ ಕುಮಾರಿ, ವಿಪಕ್ಷೀಯ ನಾಯಕನಾಗಿ ಸುಷ್ಮಾ ಸ್ವರಾಜ್, ಆಡಳಿತ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಇದ್ದರು. ಮಹಿಳೆಯರು ಈ ದೇಶದಲ್ಲಿ ಎಲ್ಲ ರಂಗಗಳಲ್ಲಿ ಪ್ರಮುಖ ಪಾತ್ರ ವಹಿಸಿ ಆದರ್ಶ ಪ್ರಾಯರಾಗಿದ್ದಾರೆ ಎಂದರು.

ಈ ಬಾರಿ ಲೋಕಸಭೆಯಲ್ಲಿ ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ ಸಿಗಲಿದೆ ಎಂದು ಈಗಾಗಲೇ ಪ್ರಧಾನಿಯವರು, ಈ ದೇಶದ ಜನರು ಆತ್ಮವಿಶ್ವಾಸ ಹೊಂದಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಭಾಗ್ಯ ಕೊಡಲಿ, ಆದರೆ ಭಾಗ್ಯಲಕ್ಷ್ಮೀ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ತೆರಿಗೆ ವಿನಾಯಿತಿ, ಗರ್ಭೀಣಿ ಮಹಿಳೆಯರಿಗೆ 6 ತಿಂಗಳ ರಜೆ, ಮಹಿಳಾ ಸ್ವಾವಲಂಬನೆಗೆ ಆರ್ಥಿಕ ನೆರವು ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದು ಬಿಜೆಪಿ ಸರ್ಕಾರ ಎಂಬುವುದನ್ನು ಬಿಜೆಪಿ ಮಹಿಳಾ ಬಿಜೆಪಿ ಮೋರ್ಚಾ ಮನೆ ಮನೆಗೆ ತಲುಪಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಗಾಯತ್ರಿ ಮಲ್ಲಪ್ಪ ಅವರನ್ನು ಅಧಿಕೃತವಾಗಿ ಘೋಷಿಸಲಾಯಿತು. ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಅವರು ಗಾಯತ್ರಿ ಅವರಿಗೆ ಶಾಲು ಹೊದಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಪ ಸದಸ್ಯ ಡಿ.ಎಸ್.ಅರುಣ್, ಪ್ರಮುಖರಾದ ಎಸ್.ದತ್ತಾತ್ರಿ, ಎಂ.ಬಿ.ಹರಿಕೃಷ್ಣ, ಮಾಲತೇಶ್, ಎಂ. ಶಂಕರ್,ಮಂಗಳಾ ನಾಗೇಂದ್ರ, ಜ್ಯೋತಿ ರಘು, ಶಿವರಾಜ್ ಮತ್ತಿತರರು ಇದ್ದರು.

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಮಹಿಳಾ ಮೋರ್ಚಾದ ನೂತನ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಉದ್ಘಾಟಿಸಿದರು.