ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳು: ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌

| Published : May 18 2024, 12:31 AM IST

ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳು: ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸೌಧದಲ್ಲಿ ರಾಜಾರೋಷವಾಗಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆಗಳು, ರಾಮೇಶ್ವರ ಬಾಂಬ್‌ ಪ್ರಕರಣಗಳಿಂದ ರಾಜ್ಯದ ಗೃಹ ಸಚಿವರು ಇದ್ದಾರೋ ಇಲ್ಲವೋ ಎಂಬಂತಾಗಿದೆ

ಕನ್ನಡಪ್ರಭ ವಾರ್ತೆ ಬೀದರ್‌

ರಾಜ್ಯದಲ್ಲಿ ನೇಹಾ ಕೊಲೆ, ಅಂಜಲಿ ಅಂಬಿಗರ ಹತ್ಯೆ, ದಲಿತ ಯುವಕನ ಹತ್ಯೆ, ಆಳಂದನಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಯುವಕನ ಮರ್ಮಾಂಗಕ್ಕೆ ಶಾಕ್ ಕೊಟ್ಟ ಘಟನೆಗಳನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದೆ ಇಲ್ಲದಂತಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ತಿಳಿಸಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸೌಧದಲ್ಲಿ ರಾಜಾರೋಷವಾಗಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆಗಳು, ರಾಮೇಶ್ವರ ಬಾಂಬ್‌ ಪ್ರಕರಣಗಳಿಂದ ರಾಜ್ಯದ ಗೃಹ ಸಚಿವರು ಇದ್ದಾರೋ ಇಲ್ಲವೋ ಎಂಬಂತಾಗಿದೆ ಒಂದು ವೇಳೆ ಅವರು ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ಬಿಎಚ್ಇಎಲ್‌, ಬಿಇಎಲ್‌, ರೈಲ್ವೆ ಬೋಗಿ ಕಾರ್ಖಾನೆ ಸೇರಿ ನವರತ್ನ ಉದ್ಯಮವನ್ನು ನಮ್ಮ ಶ್ಯಾಮಾ ಪ್ರಸಾದ ಮುಖರ್ಜಿ ಸ್ಥಾಪನೆ ಮಾಡಿದ್ದು ಎಂದರು.

ತುಮಕೂರಿನಲ್ಲಿ ಹೆಲಿಕ್ಯಾಪ್ಟರ್‌ ಕಾರ್ಖಾನೆ, ತೇಜಸ್‌ ಲಘು ವಿಮಾನ ತಯಾರಿಕೆ, ಅತಿ ಹೆಚ್ಚು ರಾಕೆಟ್‌ ಉಡಾವಣೆ ಮಾಡಿದ ಇಸ್ರೋ ಕಂಪನಿ ಹೆಸರುವಾಸಿಯಾಗಿದೆ. ಜಿಲ್ಲೆಯ ಸಂಸದರು ಕೂಡ ಔರಾದ್ ತಾಲೂಕಿನಲ್ಲಿ ವಿಶ್ವದಲ್ಲಿಯೇ ಸುಮಾರು 13 ಸಾವಿರ ಕೋಟಿ ರು. ವೆಚ್ಚದ ಸೋಲಾರ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದ್ದಾರೆ ಇಲ್ಲಿನ ಸಾವಿರಾರು ಯುವಕರಿಗೆ ಉದ್ಯೋಗ ಲಭಿಸುತ್ತದೆ. ಆದರೆ ರಾಜ್ಯ ಸರ್ಕಾರ ಜಮೀನು ನೀಡದೆ ಕೇವಲ ಕೇಂದ್ರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಳೆದ 11 ತಿಂಗಳಿನಿಂದ ಅಭಿವೃದ್ಧಿ ಕೆಲಸಗಳೆ ನಡೆಯುತ್ತಿಲ್ಲ ಶಾಸಕರ ಅನುದಾನವಾಗಿ ನಯಾ ಪೈಸೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ದಂಗೆ ಏಳುವ ಮೂಲಕ ಸರ್ಕಾರ ಪತನವಾಗುವ ಸಂಭವ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಮು ಸಲಗರ, ಈಶ್ವರಸಿಂಗ ಠಾಕೂರ, ಬಾಬು ವಾಲಿ, ಪೀರಪ್ಪ ಯರನಳ್ಳಿ, ಬಾಬುರಾವ ಕಾರಬಾರಿ, ಬಸವರಾಜ ಪವಾರ, ಮಾಧವ ಹಸೂರೆ, ಅರಹಂತ ಸಾವಳೆ, ಲಿಂಗರಾಜ ಬಿರಾದಾರ ಇದ್ದರು.