ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಿಧಾನಸಭೆ, ಲೋಕಸಭೆ ಚುನಾವಣೆಯಷ್ಟೇ ಗಂಭೀರವಾಗಿ ವಿಧಾನ ಪರಿಷತ್ ಚುನಾವಣೆಗಳ ಸ್ವೀಕರಿಸಬೇಕು. ಎಲ್ಲಿಯೂ ಉದಾಸೀನ ಮನೋಭಾವ ತಳೆಯುವುದು ಬೇಡವೆಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು.ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಪಕ್ಷದ ಬಲ ಇಲ್ಲದಿರುವುದರಿಂದ ವಿಧಾನಸಭೆಯಿಂದ ಕಳುಹಿಸಿದ ಎಲ್ಲಾ ಮಸೂದೆಗಳು ವಾಪಾಸ್ಸಾಗುತ್ತಿವೆ. ಪರಿಷತ್‍ನಲ್ಲಿ ನಮ್ಮ ಬಲ ಹೆಚ್ಚಾಗಬೇಕಾದರೆ ಈ ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಇದಕ್ಕಾಗಿ ಮುಖಂಡರು, ಕಾರ್ಯಕರ್ತರು ಚುನಾಯಿತ ಪ್ರತಿನಿಧಿಗಳು ಒಟ್ಟಾಗಿ ಕೆಲಸವನ್ನು ಮಾಡಬೇಕಿದೆ ಎಂದರು.
ಪಕ್ಷದ ಮುಖಂಡರು ತಮ್ಮ ವ್ಯಾಪ್ತಿಯಲ್ಲಿ ಬರುವ ಮತದಾರರ ಮನವೊಲಿಸಿ ಅಭ್ಯರ್ಥಿ ಗೆಲವಿಗೆ ಶ್ರಮಿಸಬೇಕು. ಸಾಧ್ಯವಾದಷ್ಟು ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡುವಂತೆ ಮನವಿ ಮಾಡಬೇಕು. ನಾಲ್ಕು ಜಿಲ್ಲೆಗಳಲ್ಲಿ ಕ್ಷೇತ್ರ ವಿಸ್ತರಿಸಿಕೊಂಡಿರುವುದರಿಂದ ಎಲ್ಲ ಕಡೆ ಅಭ್ಯರ್ಥಿ ಬರಲು ಆಗುವುದಿಲ್ಲ. ಮತದಾನಕ್ಕೆ ಕಡಿಮೆ ಅವಧಿ ಇದೆ. ಹಾಗಾಗಿ ಮುಖಂಡರು ಎಲ್ಲವನ್ನೂ ನಿಭಾಯಿಸಬೇಕು. ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕೆಂದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಪಕ್ಷದ ಮುಖಂಡರು ಅವರ ಗ್ರಾಮದಲ್ಲಿನ ಮತದಾರರನ್ನು ಕಂಡು ಮನವಿ ಮಾಡುವುದರ ಮೂಲಕ ಪಕ್ಷದ ಅಭ್ಯರ್ಥಿಗೆ ಮತ ಹಾಕಿಸಬೇಕಿದೆ. ಇದರೊಂದಿಗೆ ಮೊದಲನೇ ಸ್ಥಾನವನ್ನು ನೀಡುವಂತೆ ಕೇಳಬೇಕಿದೆ. ತಾಲೂಕುವಾರು ಸಭೆ ಕರೆದು ಮತದಾರ ಮನವೊಲಿಕೆ ಮಾಡಬೇಕು. ಈ ಚುನಾವಣೆಯ ಗೆಲುವಿನಿಂದ ಪರಿಷತ್‍ನಲ್ಲಿ ಪಕ್ಷದ ಬಲವನ್ನು ಹೆಚ್ಚಿಸಬೇಕು ಎಂದರು.
ಮಾಜಿ ಸಚಿವ ಹೆಚ್.ಅಂಜನೇಯ ಮಾತನಾಡಿ, ಪ್ರೌಢಶಾಲೆಯಿಂದ ಮೇಲ್ಪಟ್ಟ ಎಲ್ಲಾ ಶಿಕ್ಷಕರು ಮತದಾನದ ಹಕ್ಕು ಪಡೆದಿದ್ದಾರೆ. ತಾಲೂಕು ಮಟ್ಟದಲ್ಲಿ ಸಭೆ ಯನ್ನು ನಡೆಸುವುದರ ಮೂಲಕ 10 ಜನ ಮತದಾರರಿಗೆ ಒಬ್ಬರಂತೆ ನೇಮಕ ಮಾಡಿ ಅವರನ್ನು ಭೇಟಿ ಮಾಡಿ ಮನವೊಲಿಸಿ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಬೇಕಿದೆ. ರಾಜ್ಯ ಸರ್ಕಾರ ವಿವಿಧ ರೀತೀಯ ಸೌಲಭ್ಯಗಳನ್ನು ನೀಡಿದ್ದು ಮುಂದಿನ ದಿನದಲ್ಲಿ ಇನ್ನೂ ಹಲವಾರು ಸೌಲಭ್ಯಗಳ ವಿಸ್ತರಣೆ ಮಾಡಲಿದೆ. ಪರಿಷತ್ ನಲ್ಲಿ ನಮ್ಮ ಬಲ ಕಡಿಮೆ ಇದ್ದು ಗೆಲ್ಲವುದರ ಮೂಲಕ ಮ ಬಲ ಹೆಚ್ಚಿಸಬೇಕು ಎಂದು ವಿನಂತಿಸಿದರು.ಆಗ್ನೇಯ ಶಿಕ್ಷಕರ ಕ್ಷೇತ್ರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ನಮ್ಮ ಪಕ್ಷ ಶಿಕ್ಷಕರ ಪರವಾಗಿದೆ, ಅವರಿಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಶಿಕ್ಷಕರ ಹಲವಾರು ಸಮಸ್ಯೆಗಳಿವೆ ಅದನ್ನು ಮುಂದಿನ ದಿನಮಾನದಲ್ಲಿ ಪರಿಹಾರ ಮಾಡಲಾಗುವುದು. ಈಗ ಸರ್ಕಾರಿ ನೌಕರರಿಗೆ 7ನೇ ವೇತನವನ್ನು ನೀಡಲು ಮುಂದಾಗಿದೆ. ಆದರೆ ನೀತಿ ಸಂಹಿತೆ ಇರುವುದರಿಂದ ತಡವಾಗಿದೆ ಇದು ಮುಗಿದ ನಂತರ ಸರ್ಕಾರ ಪ್ರಕಟ ಮಾಡಲಿದೆ. ಇದರೊಂದಿಗೆ ಶಿಕ್ಷಕರ ನೇಮಕಾತಿ ನಡೆಯಲಿದೆ ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ರಘುಮೂರ್ತಿ, ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಮುರಳಿಧರ ಹಾಲಪ್ಪ, ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ್, ನೇರ್ಲಗುಂಟೆ ರಾಮಪ್ಪ,ಜಿ.ಎಸ್.ಮಂಜುನಾಥ್, ಯೋಗೀಶ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಎನ್.ಡಿ.ಕುಮಾರ್, ಬಿ.ಟಿ.ಜಗದೀಶ್, ಸಂಪತ್ ಕುಮಾರ್, ಮೈಲಾರಪ್ಪ, ಕುಮಾರಗೌಡ, ಲಕ್ಷ್ಮೀಕಾಂತ, ಗೀತಾ ನಂದಿನಿ ಗೌಡ, ಉಲ್ಲಾಸ್, ಚೋಟು ಮುದಾಸಿರ್, ಪ್ರಕಾಶ್ ರಾಮನಾಯ್ಕ್ ಇದ್ದರು.