ಖರೀದಿ ಕೇಂದ್ರಕ್ಕಾಗಿ ಇಂದು ಲಕ್ಷ್ಮೇಶ್ವರ ಬಂದ್

| Published : Nov 20 2025, 01:00 AM IST

ಖರೀದಿ ಕೇಂದ್ರಕ್ಕಾಗಿ ಇಂದು ಲಕ್ಷ್ಮೇಶ್ವರ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಗೋವಿನಜೋಳದ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕೆಂದು ಕಳೆದ 5 ದಿನಗಳಿಂದ ರೈತಪರ ಹೋರಾಟಗಾರರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಲಕ್ಷ್ಮೇಶ್ವರ: ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ರೈತಪರ ಹೋರಾಟಗಾರರು ಗುರುವಾರ ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ.ಗೋವಿನಜೋಳದ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕೆಂದು ಕಳೆದ 5 ದಿನಗಳಿಂದ ರೈತಪರ ಹೋರಾಟಗಾರರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಿಧ ಗ್ರಾಮಗಳ ರೈತರು ಟ್ರ್ಯಾಕ್ಟರ್ ಮೂಲಕ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೂ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂಬುದು ರೈತರ ಆರೋಪ. ಹಾಗಾಗಿ ಗುರುವಾರ ಲಕ್ಷ್ಮೇಶ್ವರ ಪಟ್ಟಣ ಬಂದ್‌ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಹೋರಾಟ ವೇದಿಕೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಆದರಳ್ಳಿ ಗವಿಮಠದ ಡಾ. ಕುಮಾರ ಮಹಾರಾಜ ಸ್ವಾಮಿಗಳು ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಶ್ರೀಗಳ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಪಿ ಮತ್ತು ಸಕ್ಕರೆ ಅಂಶ ಏರಿಳಿತವಾಗುತ್ತಿದೆ. ಇಷ್ಟಾದರೂ ಕುಮಾರ ಸ್ವಾಮಿಗಳು ಆಹಾರ ಸೇವನೆಗೆ ಒಪ್ಪುತ್ತಿಲ್ಲ. ರೈತರು ಬೇಡಿಕೆ ಈಡೇರುವ ವರೆಗೂ ಹನಿ ನೀರು ಕುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇಷ್ಟಾದರೂ ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಕ್ಕೆ ಮುಂದಾಗುತ್ತಿಲ್ಲ.

ಸ್ವಾಮಿಗಳ ಬೆಂಬಲ: ಬುಧವಾರ ಪ್ರತಿಭಟನಾ ಸ್ಥಳಕ್ಕೆ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಬಳಿಕ ಮಾತನಾಡಿದ ಅವರು, ಮೆಕ್ಕೆಜೋಳದ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತರು ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ರಾಜಕೀಯ ಮುಖಂಡರು ತಮ್ಮ ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲದೇ ಹೋದಲ್ಲಿ ರೈತರು ತಾವು ಬೆಳೆದ ಗೋವಿನಜೋಳವನ್ನು ತೆಗೆದುಕೊಂಡು ಶಾಸಕ, ಸಂಸದರು ಮನೆ ಮುಂದೆ ಸುರಿದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಉತ್ತರ ಕರ್ನಾಟಕದ ರೈತರು ಹೇಡಿಗಳಲ್ಲ. ಅವರು ಮನಸ್ಸು ಮಾಡಿದರೆ ನಿಮ್ಮನ್ನು ಬೀದಿಗಳಲ್ಲಿ ಅಲೆಯುವಂತೆ ಮಾಡುವ ಶಕ್ತಿ ಹೊಂದಿದ್ದಾರೆ. ಚುನಾವಣೆಯಲ್ಲಿ ರಾಜಕೀಯ ಮುಖಂಡರು ನೀಡುವ ಪೊಳ್ಳು ಆಶ್ವಾಸನೆಗಳಿಗೆ ಮರುಳಾಗಿ ವೋಟು ನೀಡಿ ಆರಿಸಿ ತರುವ ಕಾರ್ಯ ಮಾಡುತ್ತಿರುವ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಮುಂಬರುವ ಚುನಾವಣೆಯಲ್ಲಿ ಅವರಿಗೆ ಬುದ್ಧಿ ಕಲಿಸುವ ಕಾರ್ಯವನ್ನು ಮಾಡುತ್ತಾರೆ ಎಂದರು.

ಈ ವೇಳೆ ಕುಂದಗೋಳದ ಬಸವಣ್ಣ ದೇವರು ಪ್ರತಿಭಟನೆ ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಆದ್ರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು, ಬಸಣ್ಣ ಬೆಂಡಿಗೇರಿ, ಮಂಜುನಾಥ ಮಾಗಡಿ, ಪೂರ್ಣಾಜಿ ಕರಾಟೆ, ಟಾಕಪ್ಪ ಸಾತಪೂತೆ, ಚನ್ನಪ್ಪ ಜಗಲಿ, ನಾಗರಾಜ ಚಿಂಚಲಿ, ಚನ್ನಪ್ಪ ಷಣ್ಮುಖಿ, ಶಿಗ್ಲಿಯ ರಾಮಣ್ಣ ಲಮಾಣಿ, ಎಸ್.ಪಿ. ಬಳಿಗಾರ, ಡಿ.ವೈ. ಹುನಗುಂದ, ಈರಣ್ಣ ಪವಾಡದ, ನೀಲಪ್ಪ ಶೆರಸೂರಿ, ಶಿವಾನಂದ ದೇಸಾಯಿ, ಬಸಣ್ಣ ಹಂಜಿ, ಬಸವರಾಜ ಹಿರೇಮನಿ, ಬಸವರಾಜ ಮೇಲ್ಮುರಿ, ನೀಲಪ್ಪ ಕರ್ಜಕ್ಕಣ್ಣವರ, ರಮೇಶ ಹಂಗನಕಟ್ಟಿ, ಪ್ರಕಾಶ ಕೊಂಚಿಗೇರಿಮಠ, ಶೇಖಣ್ಙ ಕಾಳೆ, ದಾದಾಪೀರ್ ಮುಚ್ಚಾಲೆ, ಉಮೇಶ ನಾಯ್ಕ್, ಮೋಹನ್ ನಂದೆಣ್ಣನವರ, ತಿಪ್ಪಣ್ಣ ಸಂಶಿ, ಶರಣು ಗೋಡಿ ಸೇರಿದಂತೆ ವಿವಿಧ ಗ್ರಾಮಗಳ ರೈತ ಪ್ರತಿನಿಧಿಗಳು ಆಗಮಿಸಿದ್ದರು.ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ...

ಗುರುವಾರ ರೈತರು ಕರೆ ನೀಡಿರುವ ಲಕ್ಷ್ಮೇಶ್ವರ ಬಂದ್‌ಗೆ ಲಕ್ಷ್ಮೇಶ್ವರ ತಾಲೂಕು ವಕೀಲರ ಸಂಘ, ಪಟ್ಟಣದ ಬಜಾರ ವ್ಯಾಪಾರಸ್ಥರ ಸಂಘ, ಗೋಸಾವಿ ಸಮಾಜ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕನ್ನಡಪರ ಸಂಘಟನೆಗಳು, ಬೀದಿಬದಿ ವ್ಯಾಪಾರಸ್ಥರ ಸಂಘ, ಅಂಜುಮನ್ ಕಮಿಟಿ, ದ್ವಿಚಕ್ರ ಮತ್ತು ಟ್ರ್ಯಾಕ್ಟರ್ ದುರಸ್ತಿ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ರೈತಪರ ಸಂಘಟನೆಗಳು. ಕರವೇ ಸಂಘಟನೆಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ರೈತರು ಬೆಂಬಲ ಸೂಚಿಸಿದ್ದಾರೆ.