ಸಾರಾಂಶ
ಚಿರತೆ ದಾಳಿಗೆ 32 ಕುರಿಗಳ ಸಾವು
ಕನ್ನಡಪ್ರಭ ವಾರ್ತೆ ಮಧುಗಿರಿ
ಕುರಿ ದೊಡ್ಡಿಯ ಮೇಲೆ 5 ಚಿರತೆಗಳ ಗುಂಪು ದಾಳಿ ಮಾಡಿ 32 ಕುರಿಗಳನ್ನು ಕೊಂದು ಹಾಕಿದ ಘಟನೆ ತಾಲೂಕಿನ ಪುರವರ ಹೋಬಳಿಯ ದೊಡ್ಡ ಹೊಸಹಳ್ಳಿಯಲ್ಲಿ ನಡೆದಿದೆ.ದೊಡ್ಡಹೊಸಹಳ್ಳಿ ಗ್ರಾಮದ ನಿವಾಸಿ ಕುರಿಗಾಹಿ ರೈತ ಮಲ್ಲಣ್ಣ ಎಂಬಾತನಿಗೆ ಸೇರಿದ 32 ಕುರಿಗಳು ದಾಳಿಗೆ ಬಲಿಯಾಗಿವೆ. ಸೋಮವಾರ ತಡರಾತ್ರಿ ನಡೆದಿರುವ ಘಟನೆಯಲ್ಲಿ ಚಿರತೆಗಳು ಗುಂಪಾಗಿ ದಾಳಿ ಮಾಡಿದ ಪರಿಣಾಮ ಕುರಿಗಳ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕುರಿಗಳ ಅರಚಾಟ ಕೇಳಿ ಬಂದ ಸ್ಥಳಕ್ಕೆ ಬಂದ ಮಲ್ಲಣ್ಣ 5 ಚಿರತೆ ನೋಡಿ ಭಯ ಬಿದ್ದು ಸಹಾಯಕ್ಕಾಗಿ ಕೂಗಿ ಕೊಂಡಾಗ ಜನರು ಬಂದಿದ್ದು ಆಗ 5 ಚಿರತೆಗಳು 7 ಕುರಿಗಳನ್ನು ಬಾಯಿಯಲ್ಲಿ ಕಚ್ಚಿಕೊಂಡು ಕಾಡಿನತ್ತ ಓಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರೈತ ಮಲ್ಲಣ್ಣನ ಕುಟುಂಬಕ್ಕೆ ಕುರಿಗಳೇ ಜೀವನಾಧಾರವಾಗಿದ್ದು ಕುರಿಗಳನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ 32 ಕುರಿಗಳನ್ನು ಸಾವನ್ನಪ್ಪಿದ ಪರಿಣಾಮ ಮಲಣ್ಣನ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಮೃತಪಟ್ಟ ಕುರಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಗ್ರಾಪಂ ಸದಸ್ಯ ರವಿ,ಕೆಡಿಎಸ್‌ಎಸ್ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ಮತ್ತು ಗ್ರಾಮಸ್ಥರು ಮಲ್ಲಣ್ಣನ ರೈತ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎಚ್.ಎಂ.ಸುರೇಶ್, ಪಶುಸಂಗೋಪನೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿದ್ದನಗೌಡ, ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜ್, ಗ್ರಾಪಂ ಅಧ್ಯಕ್ಷ ದಿಲೀಪ್,ಸದಸ್ಯರಾದ ಡಿ.ಎ.ರವಿ, ರಾಜಶೇಖರ್, ರವೀಂದ್ರ, ಮುಖಂಡರಾದ ಈರಮಲ್ಲಪ್ಪ, ನರಸಿಂಹಮೂರ್ತಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.