ವಿಶ್ವಕರ್ಮ ಸಮಾಜದ ಹಿತ ಕಾಯುವುದು ನಮ್ಮ ಜವಾಬ್ದಾರಿ

| Published : Sep 18 2024, 01:56 AM IST

ಸಾರಾಂಶ

ಪ್ರಜ್ಞಾವಂತ ಸಮಾಜವಾಗಿರುವ ವಿಶ್ವಕರ್ಮ ಸಮಾಜ ಬಾಂಧವರು ಪಾರಂಪರಿಕವಾಗಿ ತಮ್ಮ ಕಸುಬನ್ನು ಇಂದಿಗೂ ಮುಂದುವರಿಸುತ್ತಾ ಬಂದಿದ್ದು, ನಿಮ್ಮ ಸಮಾಜದ ಹಿತ ಕಾಯುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ಈಗಾಗಲೇ ನಗರದ ಹೃದಯ ಭಾಗದಲ್ಲಿ ನಿಮಗೆ ಹೈಟೆಕ್ ಸಮುದಾಯ ಭವನ ನಿರ್ಮಿಸಿ ಕೊಟ್ಟಿದ್ದು ಈ ಸಮುದಾಯ ಭವನ ನಿರ್ಮಾಣಕ್ಕೆ ಇನ್ನೂ ಐದು ಲಕ್ಷಗಳ ಅವಶ್ಯಕತೆ ಇದೆ ಎಂದು ತಾವು ಮಾಡಿರುವ ಮನವಿಯನ್ನು ಪರಿಗಣಿಸಿ ಶೀಘ್ರದಲ್ಲಿ 5 ಲಕ್ಷ ನೀಡುವುದಾಗಿ ಶಾಸಕ ಶಿವಲಿಂಗೇಗೌಡ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪಂಚಶೀಲ ತತ್ವಗಳ ಆದರ್ಶದೊಂದಿಗೆ ವಿಶ್ವಸಂಸ್ಥೆಯಲ್ಲಿ ನಮ್ಮದು ಜಾತ್ಯತೀತ ರಾಷ್ಟ್ರ ಎಂದು ನಾವು ಘೋಷಣೆ ಮಾಡಿಕೊಂಡಿದ್ದು,ಸ್ವಾರ್ಥ ಸಾಧನೆಗಾಗಿ ರಾಜಕಾರಣಿಗಳು ಪ್ರಸ್ತುತ ನಡೆದುಕೊಳ್ಳುತ್ತಿರುವ ರೀತಿ ನೀತಿಯಿಂದ ಮುಂದೆ ನಮ್ಮ ಅಖಂಡತೆಗೆ ಧಕ್ಕೆ ಉಂಟಾಗುವ ಅಪಾಯವಿದೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಜನಪ್ರತಿನಿಧಿಗಳ ಕರ್ತವ್ಯ ಅದನ್ನು ರಾಜಕಾರಣಿಗಳು ಮರೆಯಬಾರದು ಎಂದರು.

ಭರವಸೆ: ಪ್ರಜ್ಞಾವಂತ ಸಮಾಜವಾಗಿರುವ ವಿಶ್ವಕರ್ಮ ಸಮಾಜ ಬಾಂಧವರು ಪಾರಂಪರಿಕವಾಗಿ ತಮ್ಮ ಕಸುಬನ್ನು ಇಂದಿಗೂ ಮುಂದುವರಿಸುತ್ತಾ ಬಂದಿದ್ದು, ನಿಮ್ಮ ಸಮಾಜದ ಹಿತ ಕಾಯುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ಈಗಾಗಲೇ ನಗರದ ಹೃದಯ ಭಾಗದಲ್ಲಿ ನಿಮಗೆ ಹೈಟೆಕ್ ಸಮುದಾಯ ಭವನ ನಿರ್ಮಿಸಿ ಕೊಟ್ಟಿದ್ದು ಈ ಸಮುದಾಯ ಭವನ ನಿರ್ಮಾಣಕ್ಕೆ ಇನ್ನೂ ಐದು ಲಕ್ಷಗಳ ಅವಶ್ಯಕತೆ ಇದೆ ಎಂದು ತಾವು ಮಾಡಿರುವ ಮನವಿಯನ್ನು ಪರಿಗಣಿಸಿ ಶೀಘ್ರದಲ್ಲಿ 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಯುಗಯುಗಾಂತರದ ಇತಿಹಾಸ ಹೊಂದಿರುವ ವಿಶ್ವಕರ್ಮ ಸಮಾಜ ಪ್ರಸ್ತುತ ಸಾಗುತ್ತಿರುವ ನಾಗರಿಕ ಸಮಾಜದ ಬೆಳವಣಿಗೆಗೂ ಕೂಡ ಅಪಾರವಾದ ಕೊಡುಗೆ ನೀಡುತ್ತಾ ಇರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ,ಕೆ ಯೋಗೀಶಚಾರ್ ಮಾತನಾಡಿ, ಶಾಸಕ ಕೆಎಂ ಶಿವಲಿಂಗೇಗೌಡರ ಸಹಕಾರದಿಂದ ಹೈಟೆಕ್ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಸಮುದಾಯ ಭವನಕ್ಕೆ ಸಂಪರ್ಕ ಕಲ್ಪಿಸುವ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂಭಾಗದ ವೃತ್ತವನ್ನು ವಿಶ್ವಕರ್ಮ ವೃತ್ತ ಎಂದು ನಾಮಕರಣ ಮಾಡುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಸಮಾರಂಭದಲ್ಲಿ ಗ್ರೇಡ್ ಟು ತಹಸೀಲ್ದಾರ್‌ ಪಾಲಾಕ್ಷ, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ್, ತಾಲೂಕು ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಸುರೇಂದ್ರಚಾರ್, ಸಮಾಜದ ಮುಖಂಡರಾದ ತಿಮ್ಮಾಚಾರ್ ಮತ್ತಿತರರು ಉಪಸ್ಥಿತರಿದ್ದರು.