ರೈತರು ಬಡ್ಡಿರಹಿತ ಸಾಲ ಸದ್ಬಳಕೆ ಮಾಡಿಕೊಳ್ಳಲಿ: ಸಚಿವ

| Published : Feb 10 2024, 01:45 AM IST

ರೈತರು ಬಡ್ಡಿರಹಿತ ಸಾಲ ಸದ್ಬಳಕೆ ಮಾಡಿಕೊಳ್ಳಲಿ: ಸಚಿವ
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲದ ಹೊಡೆತಕ್ಕೆ ಸಿಲುಕಿರುವ ರೈತರಿಗೆ ಬೇಸಿಗೆ ಬಿಸಿ ತಟ್ಟಿದ್ದು, ಇದರಿಂದ ಸುಧಾರಿಸಿಕೊಳ್ಳಲು ರೈತರಿಗೆ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ವಿತರಣೆ ಮಾಡಲಾಗುತ್ತಿದೆ.ಇದನ್ನು ಸದ್ಬಳಕೆ ಮಾಡಿಕೊಳ್ಳಿ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ರೈತರಿಗೆ ಶೂನ್ಯ ಬಡ್ಡಿ ಸಾಲ ವಿತರಣೆ ಮಾಡುತ್ತಿದ್ದು ಈ ಸಾಲವನ್ನು ಸತ್ಕಾರ್ಯಗಳಿಗೆ ಬಳಸಿಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ದಿಗೆ ಕಾರಣರಾಗುವಂತೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ಮನವಿ ಮಾಡಿದರು.

ತಾಲೂಕಿನ ಚಿಲಕಲನೇರ್ಪು ಹೋಬಳಿ ಟಿ.ಗೊಲ್ಲಹಳ್ಳಿ ವಿಎಸ್‌ಎಸ್‌ಎನ್ ಸಂಘದಿಂದ ರೈತರಿಗೆ ಕೆಸಿಸಿ ಸಾಲದ ಚೆಕ್‌ಗಳನ್ನು ಶಿಡ್ಲಘಟ್ಟ ಶಾಸಕ ಮೇಲೂರು ಬಿಎನ್ ರವಿಕುಮಾರರೊಂದಿಗೆ ವಿತರಿಸಿ ಮಾತನಾಡಿದರು.

ಬಡ್ಡಿರಹಿತ ಸಾಲ ಸದ್ಬಳಕೆಯಾಗಲಿ

ಬರಗಾಲದ ಹೊಡೆತಕ್ಕೆ ಸಿಲುಕಿರುವ ರೈತರಿಗೆ ಬೇಸಿಗೆ ಬಿಸಿ ತಟ್ಟಿದ್ದು, ಇದರಿಂದ ಸುಧಾರಿಸಿಕೊಳ್ಳಲು ರೈತರಿಗೆ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ವಿತರಣೆ ಮಾಡಲಾಗುತ್ತಿದೆ. ಈ ಸಂಘದಿಂದ ೭೦ ಅರ್ಹ ರೈತರಿಗೆ ಸುಮಾರು ೧ ಕೋಟಿ ೧೫ ಲಕ್ಷ ರೂಗಳ ಸಾಲವನ್ನು ವಿತರಿಸುತ್ತಿದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು. ತಮ್ಮೆಲ್ಲರ ಆಶೀರ್ವಾದದಿಂದ ಈ ಬಾರಿ ಗೆದ್ದು ಶಾಸಕನಾಗಿ, ಸಚಿವನಾಗಿದ್ದೇನೆ ಹಾಗಾಗಿ ಈ ಕ್ಷೇತ್ರದ ಅಭಿವೃದ್ಧಿ ಮತ್ತು ಜಿಲ್ಲೆಯ ಅಭಿವೃದ್ಧಿ ನನ್ನ ಹೆಗಲ ಮೇಲಿದ್ದು ಸರ್ಕಾರದಿಂದ ಸಾಕಷ್ಟು ಅನುದಾನಗಳನ್ನು ತಂದು ಅಭಿವೃದ್ಧಿ ಮಾಡುತ್ತೇನೆಂದು ಭರವಸೆ ನೀಡಿದರು.

ರಾಜಕಾಲುವೆ ಮುಚ್ಚಬೇಡಿ

ನಮ್ಮ ಪೂರ್ವಜರು ಬರಗಾಲ ಇದ್ದ ಕಾರಣ ಈ ಭಾಗದಲ್ಲಿ ಯಥೇಚ್ಛವಾಗಿ ಕೆರೆಗಳು ಅಭಿವೃದ್ಧಿ ಮಾಡಿದ್ದಾರೆ. ಅಲ್ಲದೆ ಪಾಪಗ್ನಿ, ಕುಶಲಾವತಿ ನದಿಗಳಿಗೆ ಒಡ್ಡುಗಳನ್ನು (ಚೆಕ್‌ಡ್ಯಾಂಗಳನ್ನು) ನಿರ್ಮಿಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಆಗಿನಿಂದಲೇ ರೂಪುರೇಷೆಗಳನ್ನು ತಯಾರಿಸಿದ್ದಾರೆ ಆದ್ದರಿಂದ ತಾವೆಲ್ಲರೂ ಯಾವುದೇ ಕಾರಣಕ್ಕೂ ರಾಜಕಾಲುವೆಗಳನ್ನು ಮುಚ್ಚದೆ ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಮುಂದಾಗಬೇಕೆಂದರು .

ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಚಿಲಕಲನೇರ್ಪು ಹೋಬಳಿಯು ೧೫ ವರ್ಷಗಳಿಂದ ಅಭಿವೃದ್ದಿಯಲ್ಲಿ ತೀರಾ ಕುಂಠಿತವಾಗಿತ್ತು. ರಸ್ತೆಗಳು ತೀರ ಹದಗೆಟ್ಟಿವೆ, ಸುಮಾರು ೭೫ ಕಿ.ಮೀ ಗಳಷ್ಟು ರಸ್ತೆ ಕಾಮಗಾರಿಗಳು ಅಭಿವೃದ್ಧಿ ನಡೆಯಬೇಕಾಗಿದೆ. ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸರ್ಕಾರದ ಭಾಗವಾಗಿರುವುದರಿಂದ ಈ ಭಾಗಕ್ಕೆ ಹೆಚ್ಚಿನ ಅನುದಾನ ಕೊಟ್ಟು ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಾಲವನ್ನು ಪಡೆದಿರುವ ರೈತರು ಸಾಲವನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿ ಉತ್ತಮ ಜೀವನ ನಡೆಸಬೇಕೆಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಾಗಿರೆಡ್ಡಿ, ಚಿಲಕಲನೇರ್ಪು ಗ್ರಾ.ಪಂ ಅಧ್ಯಕ್ಷ ಅರ್.ಟಿ ಪ್ರಸಾದ್, ಟಿ. ಗೊಲ್ಲಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಎಸ್.ವಿ ನಲ್ಲಪ್ಪರೆಡ್ಡಿ, ಕಾರ್ಯದರ್ಶಿ ಜೆಸಿ ಶಿವರಾಮ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಪಿ.ಶ್ರೀನಿವಾಸ್, ನಿರ್ದೆಶಕ ಟಿ.ಶ್ರೀನಿವಾಸರೆಡ್ಡಿ, ಮುಖಂಡರಾದ ನಡಂಪಲ್ಲಿ ಶ್ರೀನಿವಾಸ್, ನಾರಾಯಣರೆಡ್ಡಿ, ತುಳವನೂರು ರವಿ, ಕೆವಿ ಚೌಡಪ್ಪ, ಪ್ರಭಾಕರ್, ತುಳವನೂರು ಮಂಜುನಾಥರೆಡ್ಡಿ ಸೇರಿದಂತೆ ಟಿ ಗೊಲ್ಲಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮತಿತ್ತರರು ಉಪಸ್ಥಿತರಿದ್ದರು.