ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಸಮಾಜ ಬೇಡವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಪ್ರಪಂಚದ ಹಿಂದೂಗಳಿಗೆ ನೋವಾಗಿದ್ದು, ಖರ್ಗೆ ಸಮಸ್ತ ಹಿಂದೂಗಳ ಕ್ಷಮೆ ಕೇಳಬೇಕು. ಮುತ್ಸದ್ದಿ ರಾಜಕಾರಣಿ ಹೀಗೆ ಮಾತನಾಡಿದ್ರೆ ಹೇಗೆ ಎಂದು ಖರ್ಗೆ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.ಕುಂಭ ಮೇಳದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಭಾಷೆಯಲ್ಲಿ ಹೇಳಬೇಕೋ? 40 ಕೋಟಿಗೂ ಅಧಿಕ ಹಿಂದೂಗಳು ಭಾಗವಹಿಸುತ್ತಿದ್ದಾರೆ. ಇವರಿಗೆ ಇಷ್ಟವಾದ್ರೆ ಹೋಗಲಿ, ಇಲ್ಲಾ ಬಿಡಲಿ. ಕುಂಭ ಮೇಳಕ್ಕೆ ಹೋಗದೆ ಹಿಂದೂಗಳ ಭಾವನೆಗೆ ಧಕ್ಕೆ ತರೋಕೆ ಅಧಿಕಾರ ಕೊಟ್ಟವರಾರು ಎಂದು ಖರ್ಗೆ ಅವರನ್ನು ಪ್ರಶ್ನಿಸಿದರು.ಇವರಿಗೆ ಏನು ರೋಗ ಬಂದಿದೆ ಅರ್ಥ ಆಗುತ್ತಿಲ್ಲ. ಏನೇ ಅಂದ್ರೂ ಹಿಂದೂಗಳು ಸುಮ್ಮನಿರ್ತಾರೆ, ಶಾಂತವಾಗಿರೋದೆ ಅವರ ದೌರ್ಬಲ್ಯ ಎಂದುಕೊಂಡಿದ್ದಾರೆ. ಸೋನಿಯಾ, ರಾಹುಲ್ ವಿದೇಶಗಳಲ್ಲಿ ಕ್ರಿಶ್ಚಿಯನ್ ಪವಿತ್ರ ಜಾಗದಲ್ಲಿ ಪ್ರಾರ್ಥನೆ ಮಾಡಿ ಬರ್ತಾರೆ. ನಾವು ಟೀಕೆ ಮಾಡಲ್ಲ. ಅವರ ಧರ್ಮ ಅದು. ಮುಸ್ಲಿಮರು ಮಕ್ಕಾ ಮದೀನಾಗೆ ಹೋಗಿ ಬರ್ತಾರೆ. ಅದು ಅವರ ನಂಬಿಕೆ. ಹಿಂದೂಗಳಿಗೆ ಗಂಗಾ, ಯಮುನಾ, ತ್ರಿವೇಣಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಎನ್ನುವುದು ನಮ್ಮ ನಂಬಿಕೆ. ಖರ್ಗೆ ಇಷ್ಟು ಕೀಳಮಟ್ಟಕ್ಕೆ ಇಳಿಯಬಾರದಿತ್ತು. ಖರ್ಗೆ ತಕ್ಷಣ ಪ್ರಪಂಚದ ಹಿಂದೂಗಳ ಕ್ಷಮೆ ಕೇಳಲಿ. ದೇಶದಲ್ಲಿ ದಂಗೆಗಳಾದರೆ ಯಾರು ಜವಾಬ್ದಾರಿ?, ನಾನು ನೊಂದು ಹೇಳುತ್ತಿದ್ದೇನೆ, ಖರ್ಗೆ ಹೇಳಿಕೆಯಿಂದ ಪ್ರಪಂಚದ ಹಿಂದೂಗಳು ನೊಂದಿದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ನಾವು ಬದುಕಬೇಕಾ, ಸಾಯಬೇಕಾ?:ಹೊನ್ನಾವರದಲ್ಲಿ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಗಬ್ಬದ ಹಸು ಯಾರಿಗೆ ಬೇಕು ಅಂತಾ ಕೇಳ್ತಾರೋ ಅದರ ಮಾಂಸದ ಫೋಟೋವನ್ನು ವಾಟ್ಸಾಪ್ ಮೂಲಕ ಕಳಿಸ್ತಾರೆ. ಗಬ್ಬದ ಹಸು, ಗೋವನ್ನ ತಾಯಿ ಎನ್ನುತ್ತೇವೆ. ಇದು ಯಾವ ನ್ಯಾಯ? ಎಲ್ಲಿದ್ದೇವೆ?. ನಾವು ಬದುಕಬೇಕಾ ಸಾಯಬೇಕಾ? ತಿಳಿತಿಲ್ಲ ಎಂದು ಮರುಗಿದ ಈಶ್ವರಪ್ಪ, ಚಾಮರಾಜನಗರದಲ್ಲಿ ಕೆಚ್ಚಲು ಕೊಯ್ದ ಪ್ರಕರಣ, ಕತ್ತಿಯಿಂದ ಕಾಲಿಗೆ ಹೊಡಿತಾರೆ. ಸಿಎಂ, ಗೃಹ ಸಚಿವ, ಜಮೀರ್ ಹೊನ್ನಾವರಕ್ಕೆ ಹೋಗಿ ಬರಲಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಇಂತಹ ಎಷ್ಟು ಗ್ಯಾಂಗ್‌ಗಳಿವೆ ನೋಡಿ. ಜಮೀರ್ ಜಾತಿವಾದ ಮಾಡಲ್ಲ ಅಂತಾರೆ, ಖರ್ಗೆ ಕುಂಭ ಮೇಳದ ಬಗ್ಗೆ ಮಾತಾಡ್ತಾರೆ. ಹಿಂದೂ ಸಮಾಜ ಅಪಮಾನ ಮಾಡುವ, ಗೋ ಹತ್ಯೆ ಮಾಡುವ ಗೂಂಡಾಗಳ ಬಗ್ಗೆ ಆತಂಕವಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೇರುಸಲೆಂಗೆ ಹೋದರೆ ಬಡವರ ಹೊಟ್ಟೆ ತುಂಬುತ್ತಾ? ಮೆಕ್ಕಾಗೆ ಹೋದರೆ ಬಡವರ ಹೊಟ್ಟೆ ತುಂಬುತ್ತಾ?, ಧೈರ್ಯ ಇದ್ರೆ ಈ ಬಗ್ಗೆ ಮಾತನಾಡಲಿ ಎಂದು ಖರ್ಗೆಗೆ ಸವಾಲು ಹಾಕಿದರು.ಯು.ಟಿ.ಖಾದರ್ ಕುಂಭಮೇಳದಲ್ಲಿ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈಗ ಖರ್ಗೆ ಖಾದರ್ ಅವರನ್ನ ಕಾಂಗ್ರೆಸ್ ಪಕ್ಷದಿಂದ ಡಿಸ್ಮಿಸ್ ಮಾಡಲಿ. ಖರ್ಗೆ ಖಾದರ್ ಅವರನ್ನು ಪ್ರಶ್ನಿಸಲಿ. ಖಾದರ್ ಕುಂಭ ಮೇಳಕ್ಕೆ ಹೋದರೆ ಬಡವರ ಹೊಟ್ಟೆ ತುಂಬುತ್ತಾ ಎಂದು ಖರ್ಗೆ ಪ್ರಶ್ನಿಸಲಿ. ತಾಕತ್ತಿದ್ದರೆ ಕುಂಭ ಮೇಳಕ್ಕೆ ಹೋದ ಕಾಂಗ್ರೆಸ್ಸಿಗರನ್ನೆಲ್ಲ ಸಸ್ಪೆಂಡ್ ಮಾಡಲಿ. ನಾನು ಕೆಟ್ಟ ಪದ ಬಳಕೆ ಮಾಡ್ತಿದ್ದೆ, ಖರ್ಗೆ ಅನ್ನೋ ಕಾರಣಕ್ಕೆ ಸುಮ್ಮನಿದ್ದೇನೆ ಎಂದು ಹೇಳಿದರು.
ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರದ ಕುರಿತು ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಸಾಲದ ಬಡ್ಡಿಯಿಂದ ಜನ ಸಾಯುತ್ತಿದ್ದಾರೆ. ರೈತರು, ಕಾಂಟ್ರಾಕ್ಟರ್, ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ನಡೆದುಕೊಳ್ಳುತ್ತಿದೆ. ಇಷ್ಟು ಕೆಟ್ಟ ಸರ್ಕಾರ ಹಿಂದೆ ಎಂದೂ ಬಂದಿರಲಿಲ್ಲ ಎಂದು ಹರಿಹಾಯ್ದರು.--------------
ಕೋಟ್ಸಿಎಂ ಮನೆಯವರು ನಿರಾಳವಾಗಿದ್ದಾರೆ ಎಂಬುದನ್ನು ಕೇಳಿ ಸಂತಸವಾಗಿದೆ. ಹೆಣ್ಣು ಮಗಳು ಮುಗ್ದಳು, ನಮಗೂ ನಿರಾಳ ತಂದಿದೆ. ಮಹಾತ್ಮಾಗಾಂಧಿ ಬದುಕಿದ್ದರೆ ಈ ಕಾಂಗ್ರೆಸ್ ಸರ್ಕಾರದ ಸ್ಥಿತಿ ನೋಡಿ ನೇಣು ಹಾಕಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಸಿಕ್ಕ ಬಳಿಕ ಕಾಂಗ್ರೆಸ್ ವಿಸರ್ಜನೆಗೆ ಹೇಳಿದ್ದರು. ಸ್ವಾತಂತ್ರ್ಯ ಬಂದ ತಕ್ಷಣವೇ ಮೊದಲ ನಿರ್ಣಯವೇ ಗೋ ಹತ್ಯೆ ಬಂದ್ ಮಾಡಿಸುತ್ತೇವೆ ಎನ್ನುವುದೇ ಆಗಿತ್ತು. ಈಗ ಗಾಂಧಿಜೀ ಬದುಕಿದ್ರೆ ಏನ್ ಮಾಡ್ತಿದ್ರು. ಹಸುಗಳ ಕೆಚ್ಚಲು ಕಟ್ ಮಾಡಿದ್ರೆ ಗಾಂಧಿಜಿ ಏನ್ ಮಾಡ್ತಿದ್ರು. ಅಂಬೇಡ್ಕರ್, ಗಾಂಧಿಜಿ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ. ಅಂಬೇಡ್ಕರ್, ಗಾಂಧಿಜೀ ಹೆಸರು ಹೇಳಿ ಲೂಟಿ ಮಾಡ್ತಿದೆ.
- ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ