ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ರೋಶನಾರದಲ್ಲಿರುವ ವೀರಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮಾಧಿ ಸ್ಥಳದಲ್ಲಿ ಮಂಗಳವಾರ ಅವರ 126 ನೇ ಜನ್ಮದಿನ ಆಚರಿಸಲಾಯಿತು.ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪುತ್ರ, ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಸೊಸೆ ಮೀನಾ ಕಾರ್ಯಪ್ಪ, ಪುತ್ರಿ ನಳಿನಿ ಕಾರ್ಯಪ್ಪ, ನಿವೃತ್ತ ಕರ್ನಲ್ ಬಿ.ಜಿ.ವಿ. ಕುಮಾರ್, ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ ಸಿ.ಎಸ್. ಗುರುದತ್, ಪ್ರಾಂಶುಪಾಲೆ ಸುಮಿತ್ರಾ, ಆಡಳಿತಾಧಿಕಾರಿ ರವಿ , ಎನ್‌ಸಿಸಿ ಕೆಡೆಟ್ಗಳು, ಪೊಲೀಸರೂ ಸೇರಿದಂತೆ ಗಣ್ಯರು ಕಾರ್ಯಪ್ಪ ಸಮಾಧಿ ಸ್ಥಳಕ್ಕೆ ಪುಪ್ಪಾರ್ಚನೆ ಮೂಲಕ ಗೌರವ ಸಮರ್ಪಿಸಿದರು.
ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ತನ್ನ ತಂದೆಗೆ ದೇಶವೇ ಸದಾ ಮೊದಲಾಗಿತ್ತು. ಕುಟುಂಬ, ಗೆಳೆಯರು ನಂತರದ ಸ್ಥಾನದಲ್ಲಿದ್ದರು. ಅವರು ಸೇನಾ ಜೀವನದಲ್ಲಿ ತೋರಿದ ಪ್ರಾಮಾಣಿಕತೆ, ಶಿಸ್ತಿನ ಗುಣಗಳೇ ಪ್ರತೀಯೋರ್ವ ಭಾರತೀಯನಿಗೂ ಮಾರ್ಗದರ್ಶಿಯಾಗಿರಬೇಕಾಗಿದೆ ಎಂದರು. ಉತ್ತಮ ಮನುಷ್ಯನಾಗಿ ಜೀವಿಸುವ ನಿಟ್ಟಿನಲ್ಲಿ ಪ್ರತೀಯೋರ್ವರೂ ಗಮನ ಕೇಂದ್ರೀಕರಿಸಿಕೊಳ್ಳಬೇಕು. ಆಗ ಅಂಥವರಿಂದ ದೇಶಕ್ಕೂ ಒಳಿತಾಗುತ್ತದೆ ಎಂದು ನಂದಾ ಕಾಯ೯ಪ್ಪ ಅಭಿಪ್ರಾಯಪಟ್ಟರು.ತನ್ನ ತಂದೆಯವರು ನಿಧನರಾದ ಸಂದರ್ಭ ಮಡಿಕೇರಿಯ ಅವರ ಪ್ರೀತಿಯ ಸ್ಥಳ ರೋಶನಾರದಲ್ಲಿ ನಡೆದ ಅಂತ್ಯಕ್ರಿಯೆ ಸಂದರ್ಭ ಅಂದಿನ ಸೇನಾಪಡೆ, ವಾಯುಪಡೆ, ನೌಕಾಪಡೆಗಳ ಮುಖ್ಯಸ್ಥರು ಇಲ್ಲಿಗೆ ಬಂದು ಅಂತಿಮ ಗೌರವ ನಮನ ಸಲ್ಲಿಸಿದ ಕ್ಷಣಗಳನ್ನು ನಂದಾ ಕಾರ್ಯಪ್ಪ ಸ್ಮರಿಸಿದರು.
ಫೀ.ಮಾ.ಕಾರ್ಯಪ್ಪ ಜನ್ಮದಿನ ಪ್ರಯುಕ್ತ ಕುರಿತು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ‘ಪಶ್ಚಿಮಘಟ್ಟ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಪಾತ್ರ’ ಎಂಬ ವಿಚಾರದ ಕುರಿತ ಪ್ರಬಂಧಕ್ಕಾಗಿ ಗೋಣಿಕೊಪ್ಪ ನ್ಯಾಷನಲ್ ಅಕಾಡೆಮಿ ಶಾಲಾ ವಿದ್ಯಾರ್ಥಿ ಬಿ.ಎ.ಆದಿಲ್‌ಗೆ ನಳಿನಿ ಕಾರ್ಯಪ್ಪ ಅತ್ಯುತ್ತಮ ಪ್ರಬಂಧಕ್ಕಾಗಿ ನೀಡಲಾಗುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಟ್ರೋಫಿ ವಿತರಿಸಲಾಯಿತು.
ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿನಿ ದಿಯಾ ಚೋಂದಮ್ಮ ದ್ವಿತೀಯ ಸ್ಥಾನ ಮತ್ತು ನಾಪೋಕ್ಲು ಅಂಕುರ್ ಶಾಲಾ ವಿದ್ಯಾರ್ಥಿನಿ ಪಿ.ಎಂ. ಉಮ್ ಅಬಿಬಾ ತೃತೀಯ ಸ್ಥಾನ ಪಡೆದರು.ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಶಿಕ್ಷಕಿಯರಾದ ಅಲೆಮಾಡ ಚಿತ್ರಾ ನಂಜಪ್ಪ, ಪ್ರತಿಮಾ ಶೇಟ್ ಮಾರ್ಗದರ್ಶನದಲ್ಲಿ ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ದೇಶಭಕ್ತಿಗೀತೆ, ಭಜನೆಗಳನ್ನು ಹಾಡಿದದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತಾಗಿ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಸಮರ್ಥ್ ಚಂಗಪ್ಪ ಮಾತನಾಡಿದರು. ವಿದ್ಯಾರ್ಥಿಗಳು ಕಾರ್ಯಪ್ಪ ಜೀವನ ಮತ್ತು ಸೇನೆಯ ಸಂಬಂಧಿತ ಧ್ಯೇಯವಾಕ್ಯಗಳನ್ನು ಪ್ರಸ್ತುತಪಡಿಸಿದರು.