ನಗರದ ಕ್ರಿಕೆಟ್ ಪ್ರತಿಭೆಗಳು ಐಪಿಎಲ್, ಭಾರತೀಯ ಕ್ರಿಕೆಟ್ ತಂಡದ ಪ್ರವೇಶಿಸಿ ಪ್ರತಿಭೆ ಬೆಳಗುವಂತಾಗಲಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾರೈಸಿದರು.
ಕನ್ನಡಪ್ರಭ ವಾರ್ತೆ ತುಮಕೂರುಕ್ರೀಡಾ ಕ್ಷೇತ್ರಕ್ಕೆ ತುಮಕೂರು ನಗರದ ಕ್ರೀಡಾಸಂಸ್ಥೆಗಳು ಹೆಚ್ಚಿನ ಕೊಡುಗೆ ನೀಡುತ್ತಾ ಬಂದಿವೆ. ನಗರದ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿ ಕೀರ್ತಿ ತಂದಿದ್ದಾರೆ. ನಗರದಲ್ಲಿ ಕ್ರಿಕೆಟ್ ಕೂಡಾ ಪ್ರವರ್ಧಮಾನವಾಗಿ ಬೆಳವಣಿಗೆಯಾಗುತ್ತಿದೆ. ನಗರದ ಕ್ರಿಕೆಟ್ ಪ್ರತಿಭೆಗಳು ಐಪಿಎಲ್, ಭಾರತೀಯ ಕ್ರಿಕೆಟ್ ತಂಡದ ಪ್ರವೇಶಿಸಿ ಪ್ರತಿಭೆ ಬೆಳಗುವಂತಾಗಲಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾರೈಸಿದರು.ಡಾ.ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ಈ ತಿಂಗಳ ೨೫ರಿಂದ ನಾಲ್ಕು ದಿನಗಳ ಕಾಲ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಹೆಸರಾಂತ ವೈದ್ಯ ದಿ.ಡಾ.ಸಿ.ಜಯರಾಮರಾವ್ ಸ್ಮರಣಾರ್ಥ ಡಾ.ಪುನೀತ್ ರಾಜ್ ಕಪ್‌ನ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ಕಪ್‌ಗಳನ್ನು ಅನಾವರಣ ಮಾಡಿದರು.ನಗರದ ಅರ್ಬನ್ ರೆಸಾರ್ಟ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವಿವಿಧ ಕ್ರೀಡೆಗಳ ಸುಸಜ್ಜಿತ ಮೈದಾನ ಸಿದ್ಧಪಡಿಸಿದ್ದು, ಇಲ್ಲಿ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ವಿವಿಧ ಹಂತದ ಕ್ರೀಡಾ ಪಂದ್ಯಾವಳಿಗಳನ್ನು ಸಂಘಸಂಸ್ಥೆಗಳು ಆಯೋಜನೆ ಮಾಡುತ್ತಾ ಕ್ರೀಡೆ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ತುಮಕೂರು ಬಳಿ ಅಂತಾರಾಷ್ಟೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ದೊರೆಯುತ್ತದೆ. ಯುವಜನರು ಮೊಬೈಲ್ ಬಿಟ್ಟು ಮೈದಾನಕ್ಕೆ ಬರಬೇಕು, ಕ್ರೀಡಾಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವಂತಾಗಬೇಕು ಎಂದು ಶಾಸಕ ಜ್ಯೋತಿಗಣೇಶ್ ಆಶಿಸಿದರು.ಸ್ಫೂರ್ತಿ ಡೆವಲಪರ್ಸ್ ಮಾಲೀಕ ಎಸ್.ಪಿ.ಚಿದಾನಂದ್ ಮಾತನಾಡಿ, ನಗರದಲ್ಲಿ ಕ್ರಿಕೆಟ್ ಆಟಗಾರರ ದೊಡ್ಡ ಬಳಗವೇ ಇದೆ. ಇವರಲ್ಲಿ ಹುದುಗಿರುವ ಕ್ರೀಡಾ ಪ್ರತಿಭೆಯನ್ನು ಕ್ರೀಡಾ ಸಂಸ್ಥೆಗಳು ಬೆಳಕಿಗೆ ತಂದು ಅವರ ಕ್ರೀಡಾ ಭವಿಷ್ಯ ಬೆಳಗಬೇಕು. ನಮ್ಮೂರಿನ ಕ್ರಿಕೆಟ್ ಪಟುಗಳು ಭಾರತ ತಂಡದಲ್ಲಿ ಆಡುವಂತಹ ಸಾಮರ್ಥ್ಯ, ಅವಕಾಶ ಗಳಿಸಿಕೊಳ್ಳಬೇಕು ಎಂದು ಹೇಳಿದರು.ಯುವ ನಾಯಕ, ಪಿ.ಎನ್.ಕೆ ಸಂಸ್ಥೆಯ ಪಿ.ಎನ್.ಕೃಷ್ಣಮೂರ್ತಿ ಮಾತನಾಡಿ, ನಾನು ಒಬ್ಬ ಕ್ರಿಕೆಟ್ ಆಟಗಾರನಾಗಿ ಕ್ರೀಡಾ ಪ್ರೇಮ ಬೆಳೆಸಿಕೊಂಡು ಕ್ರೀಡಾ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುತ್ತೇನೆ. ಇಲ್ಲಿನ ಕ್ರಿಕೆಟ್ ಸಂಸ್ಥೆಗಳು ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಪ್ರೋತ್ಸಾಹಿಸಲಿ ಎಂದು ಹೇಳಿದರು. ಕೆಎಸ್‌ಸಿಎ ತುಮಕೂರು ವಲಯ ಸಂಚಾಲಕ ಸಿ.ಆರ್.ಹರೀಶ್, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ, ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ್ ಮಾತನಾಡಿದರು. ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್‌ನ ಚಕ್ರವರ್ತಿ ಪ್ರಕಾಶ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಂಕರ್, ಮುಖಂಡರಾದ ರಂಜನ್, ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.ಡಾ.ಜಯರಾಮರಾವ್ ಸ್ಮರಣಾರ್ಥ ಡಾ.ಪುನೀತ್ ರಾಜ್ ಕಪ್‌ಗಾಗಿ ಈ ತಿಂಗಳ 25ರಿಂದ 28ರವರೆಗೆ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹೊನಲುಬೆಳಕಿನ ಪಂದ್ಯಾವಳಿಗಾಗಿ ಕ್ರೀಡಾಂಗಣ ಸಿದ್ಧಪಡಿಸಲಾಗಿದೆ. ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ವಿವಿಧ ಜಿಲ್ಲೆಗಳ 16 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದು ಎಚ್.ಎನ್.ದೀಪಕ್ ಹೇಳಿದರು. ಎಲ್ಲಾ ತಂಡಗಳ ನಾಯಕರು ಹಾಗೂ ವ್ಯವಸ್ಥಾಪಕರು ಸಮಾರಂಭದಲ್ಲಿ ಹಾಜರಿದ್ದರು.