ಚಿಕ್ಕಮಗಳೂರುಮಧ್ಯಮ ವರ್ಗದ ಮಕ್ಕಳಿಗೆ ಜಾತಿ ತಾರತಮ್ಯ ಮಾಡದೇ ಸರ್ವತೋಮುಖ ಶಿಕ್ಷಣಕ್ಕೆ ಆದ್ಯತೆ ನೀಡಿದವರು ಬಾಲ ಗಂಗಾಧರನಾಥ ಶ್ರೀಗಳು. ಇಲ್ಲಿ ವಿದ್ಯಾಭ್ಯಾಸ ಪೂರೈಸಿದ ಅನೇಕರು ಜಗತ್ತಿನಾದ್ಯಂತ ಉನ್ನತ ಹುದ್ದೆ ಅಲಂಕರಿಸಿರುವುದು ಹೆಮ್ಮೆಯಿದೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ನುಡಿದರು.
- ಬಿಜಿಎಸ್ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಧ್ಯಮ ವರ್ಗದ ಮಕ್ಕಳಿಗೆ ಜಾತಿ ತಾರತಮ್ಯ ಮಾಡದೇ ಸರ್ವತೋಮುಖ ಶಿಕ್ಷಣಕ್ಕೆ ಆದ್ಯತೆ ನೀಡಿದವರು ಬಾಲ ಗಂಗಾಧರನಾಥ ಶ್ರೀಗಳು. ಇಲ್ಲಿ ವಿದ್ಯಾಭ್ಯಾಸ ಪೂರೈಸಿದ ಅನೇಕರು ಜಗತ್ತಿನಾದ್ಯಂತ ಉನ್ನತ ಹುದ್ದೆ ಅಲಂಕರಿಸಿರುವುದು ಹೆಮ್ಮೆಯಿದೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ನುಡಿದರು.
ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಭಾನುವಾರ ಹಿರಿಯ ವಿದ್ಯಾರ್ಥಿಗಳ ಸಮಾವೇಶದ ಉದ್ಘಾಟನೆ ಹಾಗೂ ಹಿರಿಯ ವಿದ್ಯಾರ್ಥಿಗಳ ನೂತನ ವಿಜ್ಞಾತಂ ಭವನದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಶ್ರೀಗಳು ಆರ್ಶೀವಚನ ನೀಡಿದರು.ಬಡತನದ ಬೇಗೆಯಲ್ಲಿ ಜೀವನ ದೂಡುತ್ತಿದ್ದ ಹಿಂದುಳಿದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕಲ್ಪಿಸಿಕೊಡಬೇಕೆಂಬ ಕನಸು ಶ್ರಿಗಳಾ ದಾಗಿತ್ತು. ನಾಡಿನಾದ್ಯಂತ ವಿದ್ಯಾಸಂಸ್ಥೆ ಸ್ಥಾಪಿಸಿ, ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದವರು. ಇಲ್ಲಿ ವ್ಯಾಸಂಗ ಪೂರೈಸಿದ ಅನೇಕ ವಿದ್ಯಾರ್ಥಿಗಳು ಉದ್ಯಮಿ, ಸೈನಿಕ, ರಾಜಕೀಯ ಸೇರಿದಂತೆ ಸರ್ಕಾರಿ ವೃತ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.ಶ್ರೀಗಳು ರಾಮನಗರ ಭಾಗದಲ್ಲಿ ಪ್ರವಾಸಕ್ಕೆ ತೆರಳಿದ ವೇಳೆ ಮರದ ಸಮೀಪ ಧಣಿವು ಆರಿಸಿಕೊಳ್ಳಲು ಕುಳಿತ್ತಿದ್ದರು. ಅದೇ ದಾರಿಯಲ್ಲಿ ಸಾಗುತ್ತಿದ್ದ ದೃಷ್ಟಿಹೀನ ಮಕ್ಕಳನ್ನು ಕರೆದು ವಿಚಾರಿಸಿದಾಗ ಮಕ್ಕಳು ಅಂಧರಾದ ನಮಗೇ ಹೆತ್ತವರು ದೂರ ತಳ್ಳಿದ್ದು, ಆತ್ಮಹತ್ಯೆ ತೆರಳುತ್ತಿದ್ದೇವೆ ಎಂದಾಗ ಶ್ರೀಗಳು ಕಣ್ಣೀರಿಟ್ಟಿದ್ದರು. ಅಂದೇ ತೀರ್ಮಾನ ಕೈಗೊಂಡು ತಂಗಿದ್ಧ ಜಾಗವನ್ನು ದಾನದ ರೂಪದಲ್ಲಿ ಪಡೆದು ಮಕ್ಕಳಿಗೆ ವಿದ್ಯಾಸಂಸ್ಥೆ, ಆಶ್ರಯ ತಾಣ ಮಾಡಿಕೊಟ್ಟವರು ಎಂದರು.ಹಿರಿಯ ವಿದ್ಯಾರ್ಥಿಗಳ ನೆನಪಿನಾರ್ಥ ಕಾಲೇಜು ಆವರಣದಲ್ಲೇ ವಿಜ್ಞಾತಂ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಈ ಕಟ್ಟಡದಲ್ಲಿ ಸುಮಾರು 25 ಕ್ಕೂ ಹೆಚ್ಚು ಕೊಠಡಿಗಳನ್ನು ನಿರ್ಮಿಸುವ ಉದ್ದೇಶವಿದೆ. ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ಗುರಿಯಿದೆ. ಹಳೇ ವಿದ್ಯಾರ್ಥಿಗಳು ಕಟ್ಟಡದ ಅಭಿವೃದ್ಧಿಗೆ ಸಲಹೆ ಮತ್ತು ಸಹಕಾರ ನೀಡಬೇಕು ಎಂದು ಕೋರಿದರು.ಪ್ರತಿ ವರ್ಷ ವಿದ್ಯಾರ್ಥಿಗಳ ಸಮಾವೇಶದಲ್ಲಿ ಹಿರಿಯ ವಿದ್ಯಾರ್ಥಿಗಳು ಕುಟುಂಬ ಸಮೇತ ಭಾಗವಹಿಸಿ ಇತರೆಡೆ ವಾಸ್ತವ್ಯ ಹೂಡದೇ, ಕಾಲೇಜು ಭವನದ ಕೊಠಡಿಯಲ್ಲೇ ತಂಗುವ ಮೂಲಕ ತಮ್ಮ ಮಕ್ಕಳಿಗೆ ಕಾಲೇಜನ್ನು ಪರಿಚಯಿಸಬಹುದು. ಅಲ್ಲದೇ ಒಂದು ಕೊಠಡಿ ನಿರ್ಮಾಣಕ್ಕೆ ಪೂರ್ಣ ಸಹಕರಿಸಿದರೆ ಆ ಕುಟುಂಬದ ಪೂರ್ವಿಕರ ಭಾವಚಿತ್ರ ಹಾಕಿ ನಾಮಾಂಕಿತ ಗೊಳಿಸಲಾಗುವುದು ಎಂದರು.ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ವಿದ್ಯಾರ್ಥಿ ಬದುಕು ಚಿನ್ನದ ಬದುಕು, ಸಾರ್ವಕಾಲಿಕ ಸತ್ಯ. ಕಾಲೇಜಿನ ಆ ಕ್ಷಣದ ಸ್ನೇಹ್ನತ್ವ, ಬಾಂಧವ್ಯ ಹಾಗೂ ಪರಸ್ಪರ ಒಡನಾಟ ಖುಷಿಯಿತ್ತು. ಇಂದಿನ ಕಾಲ ಮಾನದ ವಿದ್ಯಾರ್ಥಿಗಳಲ್ಲಿ ನಶಿಸುತ್ತಿವೆ. ಇದೀಗ ಕೇವಲ ವ್ಯವಹಾರಿಕ ಜ್ಞಾನ ಬೆಳೆದು, ಸಂಬಂಧಗಳ ಕೊಂಡಿ ಕಳಚುತ್ತಿವೆ ಎಂದು ಹೇಳಿದರು.ಎಐಟಿ ಕಾಲೇಜು ನಿರ್ದೇಶಕ ಡಾ. ಸಿ.ಕೆ. ಸುಬ್ಬರಾಯ ಮಾತನಾಡಿ, ಇಂದಿನ ಹಿರಿಯ ವಿದ್ಯಾರ್ಥಿಗಳ ಬ್ಯಾಚ್‌ನಲ್ಲಿ ತಾವು ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿರುವುದು ಹೆಮ್ಮೆಯಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಶ್ರೀಗಳು ವಿದ್ಯಾ ಸಂಸ್ಥೆ ಸ್ಥಾಪಿಸಿ, ಸಮಗ್ರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ವಿದ್ಯಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.ವಿದ್ಯಾರ್ಥಿ ಹಾಗೂ ವೈಯಕ್ತಿಕ ಜೀವನದಲ್ಲಿ ನಾವುಗಳು ಮಾತೃ, ಪಿತೃ ಹಾಗೂ ಆಚಾರ್ಯ ದೇವೋಭವ ಎಂಬ ಅಂಶ ವಿರಬೇಕು. ವಿದ್ಯೆ ಕಲಿಸಿದ ಶಿಕ್ಷಕರು ಹಾಗೂ ಜೀವನದ ಪಾಠ ಬೋಧಿಸಿದ ಪಾಲಕರನ್ನು ಪ್ರತಿನಿತ್ಯ ಸ್ಮರಿಸುವ, ಗೌರವಿಸುವ ಗುಣ ಬೆಳೆಸಿಕೊಂಡರೆ ಮಾತ್ರ ಗೆಲುವಿನ ಯಶಸ್ಸನ್ನು ಮುಡಿಗೇರಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.ಹಿರಿಯ ವಿದ್ಯಾರ್ಥಿ ಥಾಮಸ್ ಮಾತನಾಡಿ, ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ನಾವುಗಳು ಓಡಾಡಿದ ಕ್ಷಣಗಳನ್ನು ಕಾಲೇಜಿನಲ್ಲಿಂದು ಪುನರುಜ್ಜೀವನಗೊಂಡಿದೆ. ಇಲ್ಲಿನ ವಾತಾವರಣ ಅತ್ಯಂತ ರೋಮಾಂಚನಕಾರಿ. ಅಂದಿನ ವೇಳೆಯಲ್ಲಿ ಸಮವಸ್ತ್ರ ಧರಿಸುವುದು ತಿಳಿದಿರಲಿಲ್ಲ. ಮಾತಿನ ಚಾಕ್ಯತೆ ತಿಳಿದಿರಲಿಲ್ಲ. 18-22 ವಯಸ್ಸಿನಲ್ಲಿ ನಾವುಗಳು ಯಾವುದೇ ತಂತ್ರಜ್ಞಾನವಿಲ್ಲದ ಕಾಲದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದೇವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಗಳ ಸಂಘದ ಕಾರ್ಯದರ್ಶಿ ಡಾ. ಜಿ.ಎಂ.ಸತ್ಯನಾರಾಯಣ್, ಹಳೇ ವಿದ್ಯಾರ್ಥಿಗಳಾದ ಶುಭ, ಅಶ್ಚಿನಿ, ಅರುಣ್, ಶಿವ ಕುಮಾರ್, ಅಜಿತ್‌ಕುಮಾರ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಗಾರೆಡ್ಡಿ ಹಾಗೂ ಎಐಟಿ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
14 ಕೆಸಿಕೆಎಂ 1ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಭಾನುವಾರ ನಡೆದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ವನ್ನು ಶ್ರೀ ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು. ಎ.ಎನ್. ಮಹೇಶ್, ಡಾ. ಸುಬ್ಬರಾಯ, ಡಾ. ಸಿ.ಟಿ. ಜಯದೇವ್ ಇದ್ದರು.