ಸಾರಾಂಶ
ತಮ್ಮ ಪಕ್ಷದವರು ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನೇ ತಿಳಿದುಕೊಂಡಿಲ್ಲ. ಇಂತಹ ವ್ಯಕ್ತಿಯನ್ನು ಈ ದೇಶದ ಪ್ರಧಾನಿ ಮಾಡಬೇಕೆಂದು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಚುನಾವಣೆಯಲ್ಲಿ ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ಅತೀ ದೊಡ್ಡ ಪಕ್ಷ ಕೇವಲ 281 ಅಭ್ಯರ್ಥಿಗಳನ್ನು ಕಣಕ್ಕಿಸಿದೆ ಎಂದು
ಕನ್ನಡಪ್ರಭ ವಾರ್ತೆ ಮದ್ದೂರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೊದಲು ತಮ್ಮ ಪಕ್ಷದವರು ಯಾವ್ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನು ತಿಳಿದು ಆ ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.ತಾಲೂಕಿನ ಕೆಸ್ತೂರು ಗ್ರಾಮದ ಬಳಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿ, ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ವಿಲೀನವಾಗುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ರಾಹುಲ್ ಗಾಂಧಿ ಅವರಿಗೆ ರಾಜ್ಯದ ಮುಖ್ಯಮಂತ್ರಿ ಯಾರು, ಕೆಪಿಸಿಸಿ ಅಧ್ಯಕ್ಷರು ಯಾರು ಅಂತಾನೇ ಗೊತ್ತಿಲ್ಲ. ಅಂತವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ತಮ್ಮ ಪಕ್ಷದವರು ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನೇ ತಿಳಿದುಕೊಂಡಿಲ್ಲ. ಇಂತಹ ವ್ಯಕ್ತಿಯನ್ನು ಈ ದೇಶದ ಪ್ರಧಾನಿ ಮಾಡಬೇಕೆಂದು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಚುನಾವಣೆಯಲ್ಲಿ ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ಅತೀ ದೊಡ್ಡ ಪಕ್ಷ ಕೇವಲ 281 ಅಭ್ಯರ್ಥಿಗಳನ್ನು ಕಣಕ್ಕಿಸಿದೆ ಎಂದು ಲೇವಡಿ ಮಾಡಿದರು.ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಮಾಗಡಿ ಬಾಲಕೃಷ್ಣ ಅವರೇ ಹೇಳಿದ್ದಾರೆ. ಅವರ ಗ್ಯಾರಂಟಿಗಳಿಗೆ ಯಾವುದೇ ವಾರಂಟಿ ಇಲ್ಲ. ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ಇನ್ನೂ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿಗಳು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.
ಚಿತ್ರ ನಟ ದರ್ಶನ್ ಪ್ರಚಾರ ಕುರಿತು ಹೇಳಿಕೆ ನೀಡಿ, ಪ್ರಜಾಪ್ರಭುತ್ವದಲ್ಲಿ ಯಾರು ಯಾರಿಗೂ ಬೇಕಾದರೂ ಚುನಾವಣಾ ಪ್ರಚಾರ ಮಾಡಬಹುದು. ಈ ಬಗ್ಗೆ ಹೆಚ್ಚೇನೂ ನಾನು ಮಾತನಾಡುವುದಿಲ್ಲ. ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಗೊಂಡಿದ್ದು ಅವರು ಪ್ರಚಾರಕ್ಕೆ ಬರುವುದನ್ನು ರಾಜ್ಯದ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.