ಸಾರಾಂಶ
ಸಿರಿಗೆರೆ: ಮನುಷ್ಯನಲ್ಲಿ ಅಹಂಕಾರ ಕಡಿಮೆಯಾಗಿ, ಭಕ್ತಿ ಇಮ್ಮಡಿಗೊಳ್ಳಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಸಿರಿಗೆರೆಯಲ್ಲಿ ಗುರುವಾರ ಸಂಜೆ ಗ್ರಾಮದೇವತೆ ಕಲ್ಲೇಶ್ವರಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿ, ರಥದ ಮೇಲಿಂದ ಆಶೀರ್ವಚನ ನೀಡಿದ ಶ್ರೀಗಳು ಜನರು ದೈವದೊಂದಿಗೆ ಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.ಗ್ರಾಮದ ರಥ ಬಹು ಎತ್ತರ ಇರಬೇಕೆಂಬ ಅಪೇಕ್ಷೆ ಭಕ್ತರಲ್ಲಿ ಸಹಜ. ಆದರೆ ಅದರಿಂದ ಅನಾಹುತಗಳೂ ಸಂಭವಿಸಿರುವುದು ಜನರಿಗೆ ತಿಳಿದೇ ಇದೆ. ಆದುದರಿಂದ ರಥ ಎತ್ತರದ್ದಿರಬೇಕೆಂಬ ಮನಸ್ಸಿಗಿಂತ ಭಕ್ತಿಯ ಸ್ತರವನ್ನು ಹೆಚ್ಚಿಸಿಕೊಳ್ಳಬೇಕು. ಎಲ್ಲೆಡೆ ನಡೆಯುವ ರಥೋತ್ಸವಗಳು ಸಮರಸದ ಪ್ರತೀಕಗಳಾಗಿವೆ. ಚುನಾವಣೆಯ ಸಂದರ್ಭದಲ್ಲಿ ಗ್ರಾಮಗಳಲ್ಲಿನ ಜನರು ರಾಜಕೀಯ ಕಾರಣಗಳಿಗೆ ತಮ್ಮಲ್ಲಿರುವ ಸೌಹಾರ್ದತೆಯನ್ನು ಹಾಳು ಮಾಡಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.
ದೇವರ ರಥಗಳಿಗಿಂತ ಹೆಚ್ಚು ಎತ್ತರ ಇರಬೇಕಾದುದು ಜನರ ಭಕ್ತಿ. ಕೆಲವೆಡೆ ಅತಿ ಎತ್ತರದ ರಥಗಳು ಅನಾಹುತಕ್ಕೆ ಅವಕಾಶ ಮಾಡಿಕೊಟ್ಟಿವೆ. ರಥ ಎತ್ತರದಲ್ಲಿರಬೇಕೆಂಬುದು ಅಹಂಕಾರದ ಪ್ರತೀಕ. ಆದ್ದರಿಂದ ಭಕ್ತಿಯೇ ಎತ್ತರದ ಸ್ಥಾನದಲ್ಲಿರಬೇಕು ಎಂದರು.ಧಾರ್ಮಿಕ ಕಾರ್ಯಗಳು ನಡೆಯುವ ಗ್ರಾಮಗಳಲ್ಲಿ ಜನರ ಮಧ್ಯೆ ಪ್ರೀತಿ-ವಿಶ್ವಾಸ-ಸೌಹಾರ್ದತೆಗಳು ಮೂಡಿವೆ. ಅವುಗಳ ಹಾಗೆಯೇ ಉಳಿಯಬೇಕು. ಗ್ರಾಮಗಳ ಎಲ್ಲ ಜನರೂ ಸೇರಿ ಹಬ್ಬಗಳನ್ನು ಸಡಗರದಿಂದ ಆಚರಿಸುವಂತಾಗಬೇಕು ಎಂದರು.
ಭರಮಸಾಗರ ಏತ ನೀರಾವರಿ ವ್ಯಾಪ್ತಿಯ ಕೆರೆಗಳಿಗೆ ನೀರು ಬಂದಾಗಿನಿಂದ ರೈತರು ಶ್ರಮವಹಿಸಿ ದುಡಿಯುತ್ತಿದ್ದಾರೆ. ಹಳ್ಳಿಗಳಲ್ಲಿಯೂ ಡ್ಯೂಪ್ಲೆಕ್ಸ್ ಮನೆಗಳನ್ನು ರೈತರು ನಿರ್ಮಿಸಿಕೊಳ್ಳುತ್ತಿದ್ದಾರೆ. ಇದು ತಮಗೆ ಅತೀವ ಸಂತೋಷ ತಂದಿದೆ. ಈ ಮುಂಗಾರಿನಲ್ಲಿ ಕೆರೆಗಳಲ್ಲಿ ಸಕಾಲದಲ್ಲಿ ತುಂಬಿಸಲು ಗಮನ ನೀಡಲಾಗುವುದು. ಸಾಸ್ವೆಹಳ್ಳಿ ಮತ್ತು ತುಂಗಾಭದ್ರೆಯ ನೀರನ್ನು ಆದಷ್ಟು ಬೇಗನೆ ಜಿಲ್ಲೆಯ ಕೆರೆಗಳಿಗೆ ತರಲು ಯತ್ನಿಸಲಾಗುವುದು ಎಂದರು.ಸಿರಿಗೆರೆಯಲ್ಲಿ ಶೇ.೧೦೦ ಮತದಾನ ಆಗಬೇಕು.
ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿರುವ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಸಿರಿಗೆರೆಯಲ್ಲಿ ಶೇ.೧೦೦ರಷ್ಟು ಮತದಾನ ಆಗಬೇಕು. ಆ ಬಗ್ಗೆ ಗ್ರಾಮದ ಜನರು ಆಸಕ್ತಿವಹಿಸಬೇಕು ಎಂದು ಶ್ರೀಗಳು ಈ ಸಂದರ್ಭದಲ್ಲಿ ಕಿವಿ ಮಾತು ಹೇಳಿದರು.ನೀವು ಯಾವುದೇ ಪಕ್ಷಕ್ಕೆ ಮತ ಹಾಕಿ. ಮತ ನೀಡುವುದು ನಿಮ್ಮ ಹಕ್ಕು ಆದರೆ ಮನೆಯಲ್ಲಿ ಕೂತಿರದೆ ಮತಗಟ್ಟೆಗೆ ಬಂದು ಮತ ಹಾಕಿ. ರಾಜ್ಯದಲ್ಲಿ ಸಿರಿಗೆರೆ ಒಂದು ಮಾದರಿ ಗ್ರಾಮ ಆಗಬೇಕು. ಎಲ್ಲರೂ ಮತದಾನ ಮಾಡಿ, ಶೇ.೧೦೦ ಮತ ಚಲಾಯಿಸಿ ಎಂದರು.