ಪೌರ ಕಾರ್ಮಿಕರ ಕುಟುಂಬಗಳಿಗೆ ಸೌಲಭ್ಯಗಳು ತಲುಪಲಿ: ಹರೀಶ್

| Published : Sep 29 2025, 01:04 AM IST

ಸಾರಾಂಶ

ಪೌರ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳು ಸೋರಿಕೆ ಇಲ್ಲದೇ ಶೀಘ್ರ ತಲುಪಬೇಕು ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದ್ದಾರೆ.

- ಹರಿಹರ ಗುರುಭವನದಲ್ಲಿ ಪೌರಕಾರ್ಮಿಕರ ದಿನ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹರಿಹರ

ಪೌರ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳು ಸೋರಿಕೆ ಇಲ್ಲದೇ ಶೀಘ್ರ ತಲುಪಬೇಕು ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ನಗರದ ಗುರುಭವನದಲ್ಲಿ ಶುಕ್ರವಾರ ನಡೆದ ಪೌರಕಾರ್ಮಿಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಕಾರ್ಮಿಕರು ಆದ್ಯತೆ ನೀಡಬೇಕು. ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೇರೆ ಸರ್ಕಾರಿ ನೌಕರರಿಗೆ ಹೋಲಿಸಿದರೆ, ಪೌರ ಕಾರ್ಮಿಕರ ಕೆಲಸ ವಿಭಿನ್ನವಾಗಿದೆ. ಗ್ರಾಮ, ಪಟ್ಟಣ, ನಗರಗಳಲ್ಲಿ ಜನರು ಏಳುವ ಮುನ್ನವೇ ಸ್ವಚ್ಚತೆಯ ಕಾಯಕ ಮಾಡುತ್ತಾರೆ ಎಂದರು.

ಮುಖ್ಯ ಅತಿಥಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಸರ್ಕಾರದ ಎಲ್ಲ ಸೌಲಭ್ಯಗಳು ಪೌರಕಾರ್ಮಿಕರಿಗೆ ತಲುಪುವಂತೆ ಕ್ರಮ ಕೈಗೊಳ್ಳಲು ಬದ್ಧ. ನಿವಾಸಿಗಳು ಉತ್ತಮ ಆರೋಗ್ಯ ಹೊಂದಿರಲು ಪೌರ ಕಾರ್ಮಿಕರ ಶ್ರಮವೇ ಕಾರಣ ಎಂದರು.

ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಪೌರಕಾರ್ಮಿಕರಿಗೆ ಹೆಲ್ತ್ ಕಾರ್ಡ್ ವಿತರಿಸಲು ₹೫.೮೭ ಲಕ್ಷ ಅನುದಾನವನ್ನು ನಗರಸಭೆಯಿಂದ ಮೀಸಲಿಡಲಾಗಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ವಸತಿರಹಿತ ಪೌರ ಕಾರ್ಮಿಕರಿಗೆ ನಿವೇಶನ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಪೌರಾಯುಕ್ತ ಎಂ.ಪಿ.ನಾಗಣ್ಣ, ಎಇಇ ನವೀನ್ ಕುಮಾರ್, ನಗರಸಭಾ ಸದಸ್ಯರಾದ ಶಂಕರ್ ಖಟಾವ್‌ಕರ್, ಕೆ.ಜಿ.ಸಿದ್ದೇಶ್, ಆಟೋ ಹನುಮಂತಪ್ಪ, ಕರ್ನಾಟಕ ಪೌರ ಸೇವಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್ ಎಚ್., ಹರಿಹರ ಶಾಖೆ ಅಧ್ಯಕ್ಷ ಪರಸಪ್ಪ, ಉಪಾಧ್ಯಕ್ಷೆ ಸೌಭಾಗ್ಯಮ್ಮ, ಪ್ರಧಾನ ಕಾರ್ಯದರ್ಶಿ ರಾಮಕುಮಾರ್ ಕೊಂಡಜ್ಜಿ, ಪದಾಧಿಕಾರಿಗಳು ಹಾಗೂ ಇತರರಿದ್ದರು.

- - -

-26HRR.03:

ಪೌರಕಾರ್ಮಿಕರ ದಿನ ಕಾರ್ಯಕ್ರಮವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು.