ಸಾರಾಂಶ
ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ತನಿಖೆಗೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಒಂದು ಕ್ಷಣವೂ ವಿಳಂಬ ಮಾಡಿದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಕೊಪ್ಪಳ : ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ತನಿಖೆಗೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಒಂದು ಕ್ಷಣವೂ ವಿಳಂಬ ಮಾಡಿದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ನೈತಿಕ ಹೊಣೆಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದರು.
ಈ ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಅನುಮತಿ ನೀಡಿದಾಗ ಸ್ವಾಗತ ಮಾಡಿದ ನೀವು ಈಗ ನಿಮ್ಮ ವಿರುದ್ಧವೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಾಗ ಅದು ತಪ್ಪಾ? ಎಂದು ಪ್ರಶ್ನಿಸಿದರು.
ಹಾಗೊಂದು ವೇಳೆ ನೀವು ತಪ್ಪೇ ಮಾಡಿಲ್ಲ ಎನ್ನುವುದಾದರೆ ಯಾಕೆ ಹೆದರುತ್ತೀರಿ, ಕಾನೂನು ಪ್ರಕಾರ ಎದುರಿಸಿ, ನಿರ್ದೋಷಿಯಾದರೆ ಮತ್ತೆ ನೀವೇ ಮುಖ್ಯಮಂತ್ರಿಯಾಗಿ ಬನ್ನಿ. ಆದರೆ, ತಮ್ಮ ವಿರುದ್ಧ ಆರೋಪ ಬಂದು, ತನಿಖೆಗೆ ಅವಕಾಶ ನೀಡಿದ ಮೇಲೆಯೂ ಸಿಎಂ ಹುದ್ದೆಯಲ್ಲಿ ಮುಂದುವರೆಯಬಾರದು ಎಂದರು.
ಮುಡಾ ಹಗರಣ ಕನ್ನಡಿಯಂತೆ ಇದೆ. ಆದರೂ ಸಹ ನೀವು ಏನೂ ಆಗಿಯೇ ಇಲ್ಲ ಎನ್ನುತ್ತಿದ್ದೀರಿ. ಈ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿದ್ದು ಯಾಕೆ? ಡಿನೋಟಿಪಿಕೇಶನ್ ಅಷ್ಟು ಸುಲಭವಾಗಿ ಆಗುತ್ತಾ, ತಮ್ಮ ಪ್ರಭಾವ ಇಲ್ಲದೆ ಆಯಿತಾ?, ಅಷ್ಟಕ್ಕೂ ಭೂಮಿಯ ಬಗ್ಗೆ ಮತ್ತು ಅದರ ಮಾಲೀಕತ್ವದ ಬಗ್ಗೆಯೂ ಸಾಕಷ್ಟು ಆರೋಪಗಳು ಇವೆ. ಇಂಥ ಭೂಮಿಯನ್ನು ಹೇಗೆ ಗಿಫ್ಟ್ ನೀಡಿದರು. ಈ ಮಾಹಿತಿಯನ್ನು ತಾವು ಎರಡು ಚುನಾವಣೆಯಲ್ಲಿ ಯಾಕೆ ನೀಡಿಲ್ಲ ಎಂದರು.
ರಾಜ್ಯಪಾಲರು ನಿಯಮಾನುಸಾರ ಕ್ರಮಕೈಗೊಂಡಿದ್ದಾರೆ. ಅವರಿಗೆ ಇರುವ ಅಧಿಕಾರ ಬಳಕೆ ಮಾಡಿ, ನಿಯಮಾನುಸಾರವೇ ಅವಕಾಶ ನೀಡಿದ್ದಾರೆ. ಹೀಗಿರುವಾಗ ಅದರ ವಿರುದ್ಧ ಕಾಂಗ್ರೆಸ್ ನವರು ಈ ರೀತಿ ಮಾತನಾಡುವುದು ಸರಿಯಲ್ಲ.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದ ಪ್ರಕರಣದಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ನಿರ್ವಹಣೆಯಲ್ಲಿನ ದೋಷ ಕಂಡು ಬರುತ್ತಿದೆಯಾದರೂ ಅದ್ಯಾವುದು ಇಲ್ಲ ಎಂದು ಹೇಳುವುದು ಸರಿಯಲ್ಲ. ಏನೇ ಆಗಲಿ, ಈಗ ಗೇಟ್ ಅಳವಡಿಕೆ ಯಶಸ್ವಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಎಂಎಲ್‌ಸಿ ಹೇಮಲತಾ ನಾಯಕ, ಡಾ. ಬಸವರಾಜ ಕ್ಯಾವಟರ್, ಆರ್. ರುದ್ರಯ್ಯ, ಈಶಪ್ಪ ಹಿರೇಮನಿ, ಗಣೇಶ ಹೊರತಟ್ನಾಳ ಇದ್ದರು.