ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ : ಖಾಸಗಿ ವೈದ್ಯರ ಮುಷ್ಕರ: ಓಪಿಡಿ ಬಂದ್, ರೋಗಿಗಳ ಪರದಾಟ

| Published : Aug 18 2024, 01:57 AM IST / Updated: Aug 18 2024, 09:44 AM IST

ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ : ಖಾಸಗಿ ವೈದ್ಯರ ಮುಷ್ಕರ: ಓಪಿಡಿ ಬಂದ್, ರೋಗಿಗಳ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಆಯುಷ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಿದರು.

  ಶಹಾಪುರ : ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಆಯುಷ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆ.6 ಗಂಟೆಯವರೆಗೆ ತಾಲೂಕಿನಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ನಿಲ್ಲಿಸುವ ಮೂಲಕ ವೈದ್ಯರು ಮೌನ ಪ್ರತಿಭಟನೆ ನಡೆಸಿದರು.

ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಖಾಸಗಿ ಆಸ್ಪತ್ರೆಗಳು ಸೇವೆ ನಿಲ್ಲಿಸುವ ಮೂಲಕ ಬೆಂಬಲ ಸೂಚಿಸಿವೆ.

ಈ ವೇಳೆ ಐಎಂಎನ ತಾಲೂಕಾಧ್ಯಕ್ಷ ಡಾ. ಸುಧತ್ ದರ್ಶನಾಪುರ ಮಾತನಾಡಿ, ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಘಟನೆ ಅಮಾನವೀಯವಾದದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಈ ರೀತಿ ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಸ್ವಾತಂತ್ರ್ಯ ಬಂದು 78 ವರ್ಷವಾದರೂ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಆಯುಷ್ ಫೆಡರೇಶನ್ ಆಫ್ ಇಂಡಿಯಾದ ತಾಲೂಕು ಅಧ್ಯಕ್ಷ ಡಾ. ಬಸವರಾಜ್ ಇಜೇರಿ ಮಾತನಾಡಿ, ವೈದ್ಯರಿಗೆ ರಕ್ಷಣೆ ಸಿಗುತ್ತಿಲ್ಲ. ಕನಿಷ್ಠ ಗೌರವ ಸಿಗುತ್ತಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಪುರಾವೆಗಳನ್ನು ನಾಶಪಡಿಸುವ ಸಂಚು ನಡೆದಿದೆ. ಜೀವವನ್ನು ಉಳಿಸುವ ಕೆಲಸ ಮಾಡುವ ವೈದ್ಯರಿಗೆ ಜೀವ, ಮಾನವನ್ನೇ ಕಳೆಯುವ ಕೆಲಸ ಮಾಡಲಾಗುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ತನಕ ನಮ್ಮ‌ ಹೋರಾಟ ನಿಲ್ಲಲ್ಲ. ನೊಂದ ಕುಟುಂಬಕ್ಕೆ ಎಲ್ಲಾ ರೀತಿಯ ನೆರವಿನ ಜೊತೆಗೆ ಅವರಿಗೆ ಬೆಂಬಲ ನೀಡಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಐಎಂಎನ ತಾಲೂಕ ಕಾರ್ಯದರ್ಶಿ ಡಾ. ಬಸವರಾಜ್ ಮುಂಬೈ, ಡಾ. ಎಸ್. ಆರ್. ಸಿನ್ನೂರ, ಡಾ. ಚಂದ್ರಶೇಖರ್ ಸುಬೇದಾರ್, ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಡಾ. ಮಲ್ಲಿಕಾರ್ಜುನ್ ಯಕ್ಷಿಂತಿ, ಡಾ. ಶಂಭುಲಿಂಗ ಮನಗೂಳಿ, ಡಾ ಬಸವರಾಜ್ ಎಲ್ಹೇರಿ, ಡಾ. ರವಿ ಪಡೆಕನೂರ್ ಸೇರಿದಂತೆ ಎಲ್ಲಾ ಖಾಸಗಿ ವೈದ್ಯರು ಪ್ರತಿಭಟನೆ ಪಾಲ್ಗೊಂಡಿದ್ದರು.