ಸಹಕಾರ ಕ್ಷೇತ್ರ ಭ್ರಷ್ಟರಿಂದ ಮುಕ್ತವಾಗಲಿ: ಶಾಸಕ ದೇಶಪಾಂಡೆ

| Published : Oct 29 2024, 12:50 AM IST

ಸಾರಾಂಶ

ರೈತರಿಗೆ ಸಾಲ ನೀಡಲು ಲಂಚ, ರೈತರ ಸಾಲ ಮರುನವೀಕರಣ ಮಾಡಲು ಪರ್ಸೆಂಟೇಸ್‌ ವ್ಯವಹಾರ ನಡೆಸುವ ಮೂಲಕ ತಾಲೂಕಿನಲ್ಲಿ ಸಹಕಾರಿ ರಂಗವನ್ನು ಅತಿ ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು, ಇಂತಹ ಕೀಳುಮಟ್ಟದ ಭ್ರಷ್ಟಾಚಾರವನ್ನು ನಾನು ಎಂದೂ ನೋಡಲಿಲ್ಲ.

ಹಳಿಯಾಳ: ಸಹಕಾರಿ ಕ್ಷೇತ್ರವನ್ನು ದುರ್ಬಳಕೆ ಮಾಡಿದ ಭ್ರಷ್ಟರು ಮುಂದೆ ಆರಿಸಿ ಬಂದರೆ ಬಡವರ, ರೈತರ, ಮಹಿಳೆಯರ ಸ್ಥಿತಿಯು ಆಯೋಮಯವಾಗಲಿದೆ. ಅದಕ್ಕಾಗಿ ಅಂಥವರ ಕೈಯಿಂದ ಸಹಕಾರಿ ರಂಗವನ್ನು ಮುಕ್ತಗೊಳಿಸಬೇಕಾದರೆ ತಾಲೂಕಿನ ಎಲ್ಲ 11 ಸಹಕಾರಿ ಸಂಘಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿದರು.

ಮುಂಬರಲಿರುವ ಸಹಕಾರಿ ಸಂಘಗಳ ಚುನಾವಣೆಯ ಹಿನ್ನೆಲೆ ಸೋಮವಾರ ಪಟ್ಟಣದ ಕಿಲ್ಲಾಕೋಟೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾರ್ಯಕರ್ತರು ಮುಂಬರುವ ಸಹಕಾರಿ ಸಂಘಗಳ ಚುನಾವಣೆಯನ್ನು ಗೆಲ್ಲುವ ಗುರಿಯೊಂದಿಗೆ ಕಾರ್ಯತತ್ಪರಾಗಬೇಕೆಂದರು.

ಭ್ರಷ್ಟರು ಬರಬಾರದು: ರೈತರಿಗೆ ಸಾಲ ನೀಡಲು ಲಂಚ, ರೈತರ ಸಾಲ ಮರುನವೀಕರಣ ಮಾಡಲು ಪರ್ಸೆಂಟೇಸ್‌ ವ್ಯವಹಾರ ನಡೆಸುವ ಮೂಲಕ ತಾಲೂಕಿನಲ್ಲಿ ಸಹಕಾರಿ ರಂಗವನ್ನು ಅತಿ ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು, ಇಂತಹ ಕೀಳುಮಟ್ಟದ ಭ್ರಷ್ಟಾಚಾರವನ್ನು ನಾನು ಎಂದೂ ನೋಡಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಯಾವತ್ತೂ ಸಹಕಾರಿ ರಂಗದ ಚುನಾವಣೆಯಲ್ಲಿ ಕೈ ಹಾಕಲಿಲ್ಲ. ಆದರೆ ತಾಲೂಕಿನ ಸಹಕಾರಿ ರಂಗದಲ್ಲಿ ಕೇಳಿಬರುತ್ತಿರುವ ವ್ಯಾಪಾಕ ಭ್ರಷ್ಟಾಚಾರ, ಮನಸೋ ಇಚ್ಛೆ ಆಡಳಿತ, ಬಡವರ, ರೈತರ ಶೋಷಣೆಯ ಬಗ್ಗೆ ಬಂದ ದೂರುಗಳನ್ನು ಕೇಳಿಕೊಂಡು ಇದನ್ನು ಕೊನೆಗಾಣಿಸುವ ತೀರ್ಮಾನ ಮಾಡೋಣ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ, ಕಾಂಗ್ರೆಸ್ ಮುಖಂಡರಾದ ಎಚ್.ಬಿ. ಪರಶುರಾಮ, ಉಮೇಶ ಬೊಳಶೆಟ್ಟಿ, ದೇಮಾಣಿ ಶಿರೋಜಿ, ಪ್ರಕಾಶ ಪಾಕ್ರೆ, ರಾಮಕೃಷ್ಣ ಗುನಗಾ ಮೊದಲಾದವರು ಮಾತನಾಡಿದರು. ಸಭೆಯಲ್ಲಿ ಗುಂಡೋಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜ್ಞಾನೇಶ್ವರ ಸಕ್ಕಪ್ಪನವರ ಅವರು ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾದರು.

ಮುಖಂಡರಾದ ಬಿ.ಡಿ. ಚೌಗಲೆ, ಅಜರ ಬಸರಿಕಟ್ಟಿ, ಕೈತಾನ ಬಾರಬೋಜ, ಅಲಿಂ ಬಸರಿಕಟ್ಟಿ, ಸಂತೋಷ ರೇಣಕೆ, ನಂದಾ ಕೊರ್ವೆಕರ, ಸಂಜು ಮಿಶಾಳೆ, ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸತ್ಯಜಿತ ಗಿರಿ, ರವಿ ತೋರಣಗಟ್ಟಿ, ಫಯಾಜ ಶೇಖ್, ಮೌಲಾಲಿ ಅಂಜಗಾಂವಕರ, ಶಂಕರ ಬೆಳಗಾಂವಕರ ಇದ್ದರು.