ಸಾರಾಂಶ
ಮಂಗಳೂರು: ಸಹಕಾರ ಕ್ಷೇತ್ರವು ಇಲಾಖೆಗಳ ಹಸ್ತಕ್ಷೇಪದಿಂದ ಹೊರಬಂದು ಸ್ವಯಂಪ್ರೇರಿತವಾಗಿ ಮುನ್ನಡೆಯಬೇಕಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಆಶಿಸಿದ್ದಾರೆ.ನಗರದ ಉರ್ವಸ್ಟೋರ್ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಮಂಗಳೂರು ಹಾಗೂ ದ.ಕ. ಜಿಲ್ಲೆಯ ಎಲ್ಲ ಸೌಹಾರ್ದ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ, ರಾಜ್ಯ ಸಹಕಾರ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಸಹಯೋಗದಲ್ಲಿ ಆಯೋಜಿಸಿದ 76ನೇ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಸಂಘಗಳು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾದಾಗ ಸರ್ಕಾರ ಹಲವಾರು ತಿದ್ದುಪಡಿಗಳ ಮೂಲಕ ಬಿಗಿ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತದೆ. ಸಹಕಾರಿ ಸಂಘಗಳು ಸರ್ಕಾರದ ಹಿಡಿತದಿಂದ ಮುಕ್ತವಾದರೆ ಸ್ವಯಂಪ್ರೇರಿತವಾಗಿ ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವ್ಯಾಪ್ತಿಯ ಎರಡು ಜಿಲ್ಲೆಗಳಲ್ಲಿ ಕೃಷಿ ಕ್ಷೇತ್ರದ ಸಾಲ ಕಳೆದ 29 ವರ್ಷಗಳಿಂದ ಶೇ.100ರಷ್ಟು ಮರುಪಾವತಿಯಾಗುತ್ತಿದೆ. ಇದು ನಮಗೆ ಹೆಮ್ಮೆಯ ವಿಷಯ ಎಂದು ರಾಜೇಂದ್ರ ಕುಮಾರ್ ಹೇಳಿದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಹಕಾರ ಕ್ಷೇತ್ರವೆಂದರೆ ವಿಶೇಷವಾದ ಕ್ಷೇತ್ರ. ಆತ್ಮನಿರ್ಭರ ಭಾರತದ ಚಿಂತನೆಗಳನ್ನು ಈ ಕ್ಷೇತ್ರದಲ್ಲಿ ಅಳವಡಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ದೆಹಲಿಯಲ್ಲಿ ಉಸಿರಾಡಲು ಕಷ್ಟಕರ ಪರಿಸ್ಥಿತಿ ಇದೆ. ಮಂಗಳೂರಿನಲ್ಲಿ ಆ ಪರಿಸ್ಥಿತಿ ಬಾರದಂತೆ ಸೌಹಾರ್ದ ಸಹಕಾರಿ ಸಂಘಗಳು ತಮ್ಮ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ ಕೆಲಸಕ್ಕೆ ಮುಂದಾಗಬೇಕು. ಸಹಕಾರ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದು ಕೂಡ ಸಹಕಾರಿಯಾಗಲಿದೆ. ಸರ್ಕಾರದ ಹಸ್ತಕ್ಷೇಪ ಕಡಿಮೆಯಾದರೆ ಸಹಕಾರ ಕ್ಷೇತ್ರ ಗಟ್ಟಿಯಾಗಿ ಬೇರೂರಲಿದೆ ಎಂದು ಹೇಳಿದರು. ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು.ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷ ಎ.ಸುರೇಶ್ ರೈ ಹಾಗೂ ಮೆಸ್ಕಾಂ ಅಧ್ಯಕ್ಷರಾಗಿ ನೇಮಕಗೊಂಡ, ಬೆಳ್ತಂಗಡಿಯ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಮಂಜುನಾಥ ಎಸ್.ಕೆ, ಭಾರತಿ ಜಿ.ಭಟ್, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ಎಚ್.ಎನ್. ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ ಎಂಬ ವಿಷಯದಲ್ಲಿ ಸಹಕಾರ ತರಬೇತಿ ಕೇಂದ್ರದ ಉಪನ್ಯಾಸಕಿ ಬಿಂದು ನಾಯರ್ ಉಪನ್ಯಾಸ ನೀಡಿದರು.ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷ ಎ.ಸುರೇಶ್ ರೈ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ದೇವಿಪ್ರಸಾದ್ ಸ್ವಾಗತಿಸಿದರು. ಉಪಾಧ್ಯಕ್ಷ ಸಂಜೀವ ಅಡ್ಯಾರ್ ವಂದಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯ ನಿರ್ವಹನಾಧಿಕಾರಿ ಎಸ್.ವಿ. ಹಿರೇಮಠ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಗೌರವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚೇತನ್ ಕೊಟ್ಟಾರಿ ಸಹಕರಿಸಿದರು. ಲೋಕೇಶ್ ಪೆರ್ಲಂಪಾಡಿ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))