ಇತಿಹಾಸ ತಿಳಿಸುವ ಕಾರ್ಯಕ್ರಮ ನಿರಂತರವಾಗಿರಲಿ: ಸಚಿವ ಸತೀಶ್ ಜಾರಕಿಹೊಳಿ

| Published : Jul 29 2024, 12:54 AM IST

ಸಾರಾಂಶ

ಇತಿಹಾಸವನ್ನು ತಿಳಿಯದೇ ಏನನ್ನೂ ಮಾಡಲಾಗದು. ಮಹನೀಯರ ಇತಿಹಾಸವನ್ನು ಅರಿತು ಅವರಂತೆ ನಡೆಯಬೇಕು. ಪ್ರತಿಯೊಂದು ಮನೆ ಮನೆಯಲ್ಲೂ ಅಂಬೇಡ್ಕರ್ ವಿಚಾರವಾದಿಗಳು ಹುಟ್ಟಬೇಕು. ಇದಕ್ಕೂ ಮುನ್ನ ಮಹಾನ್ ನಾಯಕರ ಇತಿಹಾಸವನ್ನು ತಿಳಿದು ಮೈಗೂಡಿಸಿಕೊಳ್ಳುವುದೇ ಸಾಧನೆಯಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದಲ್ಲಿ ಪರಿವರ್ತನೆ, ಬದಲಾವಣೆಗಾಗಿ ಮಹಾನ್ ನಾಯಕರ ಹೋರಾಟ, ಇತಿಹಾಸವನ್ನು ತಿಳಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ತಾಲೂಕಿನ ಕಾಗೆಮಂಟಿ ಬೋರೇಗುಡ್ಡದ ಚಾರ್ವಾಕ ವೈಚಾರಿಕ ಮಹಾ ಮನೆ ಸಂಸ್ಥೆಯಿಂದ ಮಹಾ ಮನೆಯಲ್ಲಿ ನಡೆದ ದಮನಿತರ ಬಂಗಾರದ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಇತಿಹಾಸದಲ್ಲಿ ಮುಚ್ಚಿ ಹೋಗಿರುವ ವಿಷಯಗಳು ಇಂದು ಮರೆಯಾಗುತ್ತಿವೆ. ಅವುಗಳನ್ನು ನಾಟಕಗಳು, ಹಾಡುಗಳು, ಪುಸ್ತಕಗಳ ಮುಖಾಂತರ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿರುವುದು ಶ್ಲಾಘನೀಯ ಎಂದರು.

ಇತಿಹಾಸವನ್ನು ತಿಳಿಯದೇ ಏನನ್ನೂ ಮಾಡಲಾಗದು. ಮಹನೀಯರ ಇತಿಹಾಸವನ್ನು ಅರಿತು ಅವರಂತೆ ನಡೆಯಬೇಕು.

ಪ್ರತಿಯೊಂದು ಮನೆ ಮನೆಯಲ್ಲೂ ಅಂಬೇಡ್ಕರ್ ವಿಚಾರವಾದಿಗಳು ಹುಟ್ಟಬೇಕು. ಇದಕ್ಕೂ ಮುನ್ನ ಮಹಾನ್ ನಾಯಕರ ಇತಿಹಾಸವನ್ನು ತಿಳಿದು ಮೈಗೂಡಿಸಿಕೊಳ್ಳುವುದೇ ಸಾಧನೆಯಾಗಬೇಕು ಎಂದರು.

ಎಲ್ಲರಿಗೂ ಹಕ್ಕು ಸಿಗುಬೇಕು ಎಂದು ಮೊದಲ ಬಾರಿಗೆ ಹೋರಾಟ ಮಾಡಿದ ಬುದ್ಧ ದೇಶವನ್ನು ತೊರೆಯಬೇಕಾಯಿತು. ಅದೇ ರೀತಿ ಬಸವಣ್ಣ ಕೂಡ 12ನೇ ಶತಮಾನದಲ್ಲಿ ಸಮಾನತೆಗಾಗಿ ಹೋರಾಟ ಮಾಡಿ ತಮ್ಮ ಸ್ಥಾನ ಕಳೆದುಕೊಳ್ಳಬೇಕಾಯಿತು. ಇದೇ ರೀತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೂ ಸಾಕಷ್ಟು ನೋವು, ಅನ್ಯಾಯವೂ ಆಗಿದೆ ಎಂದರು.

ಪ್ರಸ್ತುತ ಜನರು ಮೂಢನಂಬಿಕೆ, ಸುಳ್ಳನ್ನು ಹೆಚ್ಚು ನಂಬುತ್ತಾರೆ. ನಿಜ ಹೇಳಿದರೆ ಕಲ್ಲು ಹೊಡೆಯುತ್ತಾರೆ. ಇದಕ್ಕೆ ಯುಪಿಯಲ್ಲಿ ಇತ್ತೀಚೆಗೆ ಬಾಬಾ ನಡೆಸಿದ ಕಾರ್ಯಕ್ರಮದಲ್ಲಿ 100 ಜನ ಅಸುನೀಗಿದನ್ನು ಉದಾಹರಣೆ ನೀಡಿದ ಸಚಿವರು, ಈ ರೀತಿಯ ಅನೇಕ ಘಟನೆ ನೋಡಿದ್ದೇವೆ ಎಂದರು.

ಜನರನ್ನು ಜಾಗೃತಗೊಳಿಸಲು ಸಂಸ್ಥೆಯವರು ಒಳ್ಳೆಯ ನಾಟಕ ಪ್ರದರ್ಶನ ಮಾಡಿದ್ದಾರೆ. ಜಾತಿ, ಧರ್ಮ, ಭಾಷೆಗಳಿಂದ ಹೊಡೆದಾಟಗಳು ನಡೆಯುತ್ತಿವೆ. ಇದನ್ನು ಸರಿ ಮಾಡಲು ಮಹಾನ್ ನಾಯಕರೇ ಬೇಕು ಎಂಬುದನ್ನು ನಾಟಕದ ಮೂಲಕ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಟ್ಟು ಹೋಗಿರುವ ಸಮಾಜ ಸರಿ ಮಾಡಲು ಮಹಾನ್ ನಾಯಕರ ಇತಿಹಾಸ ತಿಳಿಯದಿದ್ದರೆ ಯಾವುದೇ ಹೋರಾಟ ಯಶಸ್ವಿಯಾಗುವುದಿಲ್ಲ. ಇಂತಹ ಕಾರ್ಯಕ್ರಮಗಳು ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ನಡೆಯಬೇಕು. ಮತ್ತೆ ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿಯಂತಹ ನಾಯಕರು ಹುಟ್ಟಬೇಕು ಎಂದರು.

ಧಮನಿತರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿಕೊಂಡು ಚಾರ್ವಾಕ ವೈಚಾರಿಕ ಸಂಸ್ಥೆ ಪ್ರಯೋಗಶೀಲ ಪ್ರಯತ್ನ ಮಾಡುತ್ತಿದೆ. ಅವರ ಜೊತೆಗೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕು. ಸಂಸ್ಥೆ ಅಭಿವೃದ್ಧಿಗೆ ವೈಯಕ್ತಿಕವಾಗಿ ನಮ್ಮ ಸಹಕಾರ ಇರುತ್ತದೆ. ಜೊತೆಗೆ ಸ್ಥಳೀಯ ಶಾಸಕರು, ಸರ್ಕಾರದ ವತಿಯಿಂದ ಅಗತ್ಯವಾಗಿ ಸೌಲಭ್ಯಗಳನ್ನು ಕೊಡಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಇದೇ ವೇಳೆ ಮನುಸ್ಮೃತಿ- ಭಾರತ ಸಂವಿಧಾನ ನಾಟಕ ಪ್ರದರ್ಶನ ನಡೆಯಿತು. ಬಳಿಕ ಕೃತಿ ಬಿಡಗುಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಮಾರ್, ಯತೀಂದ್ರ ಸಿದ್ದರಾಮಯ್ಯ, ಚಾರ್ವಾಕ ಸಂಸ್ಥೆ ಮಾಚಹಳ್ಳಿ ಗಿರೀಶ್, ಮಾಚಹಳ್ಳಿ ಪರಮೇಶ್, ನಿವೃತ್ತ ಎಂಜಿನಿಯರ್ ಚಂದ್ರಹಾಸ, ರಾಮಚಂದ್ರಪ್ಪ, ಬೌದ್ಧ ಬಿಕ್ಕು ಮನೋರಕ್ಕಿತ ಬಂತೇಜಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಡ ಅಧ್ಯಕ್ಷ ನಹೀಂ, ಮುಖಂಡರಾದ ದೇವರಾಜ್ ಕೊಪ್ಪ ಇತರರು ಇದ್ದರು. 4 ವರ್ಷಗಳ ಕಾಲ ಸಿದ್ದರಾಮಯ್ಯ ಮುಖ್ಯಮಂತ್ರಿ: ಸತೀಶ್ ಜಾರಕಿಹೊಳಿ

ಮಂಡ್ಯ: ಸಿದ್ದರಾಮಯ್ಯ ಅವರು ಉಳಿದ ನಾಲ್ಕು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತಾರೆ. ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆ ನಮ್ಮ ಮುಂದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ನೋಡೋಣ. ಮೊದಲು ತನಿಖೆಯಾಗಲಿ ಎಂದು ವಾಲ್ಮೀಕಿ ಹಗರಣದ ಕುರಿತಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿ ಯಾರು ಬದಲಾವಣೆ ಮಾಡುತ್ತೇನೆ ಎಂದವರು. ಈಗ ಯಾರು ಚರ್ಚೆ ಮಾಡುತ್ತಿದ್ದಾರೆ. ಮುಂದೆ ಅವಕಾಶ ಸಿಕ್ಕರೆ ಮಾತನಾಡೋಣ. ಸದ್ಯಕ್ಕೆ ದಲಿತ ಮುಖ್ಯಮಂತ್ರಿ ಹುದ್ದೆ ಅಥವಾ ಬೇರೆ ಯಾವುದೇ ವಿಚಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದರು. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಅದಕ್ಕೆ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.