ಸಾರಾಂಶ
ಶಿವಮೊಗ್ಗ: ಮಾನಸಿಕ ಒತ್ತಡ ಪ್ರತಿ ಹಂತದಲ್ಲೂ ಇದೆ. ಯಾವುದೇ ಇಲಾಖೆಗಳು ಹಾಗೂ ಅಧಿಕಾರಿಗಳು ಇದರಿಂದ ಹೊರತಾಗಿಲ್ಲ. ಹಾಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಕಾರ್ಯಾಗಾರ ಅತ್ಯವಶ್ಯಕವಾಗಿದೆ ಎಂದು ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಜೆ ಮರುಳಸಿದ್ದಾರಾಧ್ಯ ಹೇಳಿದರು.ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಾನಸಿಕ ಆರೋಗ್ಯದ ಕುರಿತು ನಗರದ ಪೊಲೀಸ್ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತಂದಿರುವ ಕಾನೂನನ್ನು ಹಾಗೂ ಯೋಜನೆಗಳನ್ನು ನಾವೆಲ್ಲ ತಿಳಿದುಕೊಳ್ಳಬೇಕು. ಸರ್ಕಾರವು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಜಾರಿಗೆ ತಂದಿದೆ. ಈ ಪ್ರಾಧಿಕಾರ ಸರ್ವೋಚ್ಚ ನಾಯ್ಯಾಧೀಶರ ಅಧೀನದಲ್ಲಿ ಕೆಲಸ ಮಾಡುತ್ತದೆ. ಸುಮಾರು ೧೦ ವಿವಿಧ ಕಾನೂನು ಹಾಗೂ ಯೋಜನೆಗಳನ್ನು ಇದು ಒಳಗೊಂಡಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು, ಮಾನಸಿಕ ಅಸ್ವಸ್ಥರಿಗಾಗಿಯೇ ಕಾನೂನು ಸೇವೆಗಳು, ವಕೀಲರ ಸಮಿತಿ, ಹಕ್ಕುಬಾಧ್ಯತೆ ಹಾಗೂ ಸರ್ಕಾರಿ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡುತ್ತದೆ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್.ಎಂ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸದಾ ಕೆಲಸದ ಒತ್ತಡದಲ್ಲಿರುವ ಆರಕ್ಷಕರಿಗಾಗಿ ಮಾನಸಿಕ ಆರೋಗ್ಯ ಕಾರ್ಯಾಗಾರ ಏರ್ಪಡಿಸಿರುವುದು ಬಹಳ ಅರ್ಥಪೂರ್ಣವಾಗಿದೆ. ನಮ್ಮ ಮಾನಸಿಕ ಆರೋಗ್ಯ, ಮಾನಸಿಕ ಕಾನೂನು ಹಾಗೂ ಆ ಕಾನೂನು ಹೇಗೆ ಅನುಷ್ಠಾನಕ್ಕೆ ತರಬೇಕೆಂದು ಈ ವೇದಿಕೆ ತಿಳಿಸಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇತ್ತೀಚೆಗೆ ಕಾನೂನು ಮತ್ತು ಸುವ್ಯವಸ್ಥೆ ಬದಲಾಗಿದೆ. ಈ ಬದಲಾವಣೆ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಯಾಗಬೇಕು ಎಂದರು.ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ ಮಾತನಾಡಿದರು.ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರ್ಯಪ್ಪ, ಡಿಎಚ್‌ಒ ಡಾ.ನಟರಾಜ್, ಸಿಮ್ಸ್‌ನ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ರಾಮ್ ಪ್ರಸಾದ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ್.ಎಸ್.ಕೆ, ಮನೋತಜ್ಞ ಡಾ.ಎಚ್.ಎಲ್.ಪ್ರಮೋದ್ ಪಾಲ್ಗೊಂಡಿದ್ದರು.