ನೀರು ಹಂಚಿಕೆ ಸಮಸ್ಯೆ ಶೀಘ್ರ ಇತ್ಯರ್ಥ ಆಗಲಿ: ಕ್ಯಾ.ರಾಜಾರಾವ್

| Published : Dec 22 2024, 01:32 AM IST

ನೀರು ಹಂಚಿಕೆ ಸಮಸ್ಯೆ ಶೀಘ್ರ ಇತ್ಯರ್ಥ ಆಗಲಿ: ಕ್ಯಾ.ರಾಜಾರಾವ್
Share this Article
  • FB
  • TW
  • Linkdin
  • Email

ಸಾರಾಂಶ

ನದಿ ನೀರು ಹಂಚಿಕೆಯನ್ನು ವೈಜ್ಞಾನಿಕವಾಗಿ ಮಾಡಬೇಕು. ತಮಿಳುನಾಡಿನವರು ನಮ್ಮ ಡ್ಯಾಂ ಗಳಲ್ಲಿ ನೀರು ಕಂಡಾಕ್ಷಣ ಕೇಳುವುದನ್ನು ಬಿಡಬೇಕು. ಕೋರ್ಟ್ ಹೇಳಿದ್ದಕ್ಕೆ ನೀರು ಬಿಡುತ್ತ ಹೋದರೆ ನಮಗೆ ಮಾರ್ಚ್ ತಿಂಗಳಲ್ಲಿ ಮಳೆಯಾಗದಿದ್ದರೆ ಕುಡಿವ ನೀರಿಗೆ ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್ ನಲ್ಲಿ ಕೂಡಲೇ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಒತ್ತಾಯಿಸಿದರು.

ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರಧಾನ ವೇದಿಕೆಯಲ್ಲಿ ಶನಿವಾರ ನಡೆದ ನೆಲ-ಜಲ ಸಾಕ್ಷರತೆ: ಅವಲೋಕನ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನದಿ ನೀರು ಹಂಚಿಕೆಯನ್ನು ವೈಜ್ಞಾನಿಕವಾಗಿ ಮಾಡಬೇಕು. ತಮಿಳುನಾಡಿನವರು ನಮ್ಮ ಡ್ಯಾಂ ಗಳಲ್ಲಿ ನೀರು ಕಂಡಾಕ್ಷಣ ಕೇಳುವುದನ್ನು ಬಿಡಬೇಕು. ಕೋರ್ಟ್ ಹೇಳಿದ್ದಕ್ಕೆ ನೀರು ಬಿಡುತ್ತ ಹೋದರೆ ನಮಗೆ ಮಾರ್ಚ್ ತಿಂಗಳಲ್ಲಿ ಮಳೆಯಾಗದಿದ್ದರೆ ಕುಡಿವ ನೀರಿಗೆ ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಕಬ್ಬು ಬೆಳೆಯಲು ಇಂತಿಷ್ಟು ಎಕರೆ ಪ್ರದೇಶ ಎಂದು ನಿಗದಿಪಡಿಸಲಾಗಿದೆ. ಆದರೆ ಬೆಂಗಳೂರಿನಂಥ ನಗರಕ್ಕೆ ಬೆಲ್ಲ, ಸಕ್ಕರೆ ಪೂರೈಕೆಸಲು ಮಂಡ್ಯದಲ್ಲಿ ಕಬ್ಬು ಬೆಳೆಯಲೇ ಬೇಕು. ಕಬ್ಬಿಗೆ ಬೇಡಿಕೆ ಹೆಚ್ಚಾಗಿ ಕಬ್ಬು ಬೆಳೆಯುವ ಪ್ರದೇಶವೂ ವಿಸ್ತರಿಸಿದೆ. ಇನ್ನು ರೈತರು ಹನಿ ನೀರಾವರಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಿ ಸಹಕರಿಸಬೇಕು ಎಂದರು.

ಈಗಾಗಲೇ ನಾವು 16 ಏತ ನೀರಾವರಿ ಯೋಜನೆ ನಿಲ್ಲಿಸಿದ್ದೇವೆ. ವಾಸ್ತವದಲ್ಲಿ ರಾಜ್ಯದಲ್ಲಿ ನೀರಿನ ಕೊರತೆ ಇಲ್ಲ. ಆದರೆ ಅಂತರ್ಜಲಮಟ್ಟ ಕಡಿಮೆ ಆಗುತ್ತಿದೆ. ಅದನ್ನು ಮೇಲೆತ್ತಲು ಪ್ರಯತ್ನಿಸಬೇಕು. ರಾಜ್ಯದಲ್ಲಿ 7 ನದಿಗಳಿವೆ. ಈ ಪೈಕಿ 2 ನದಿ ಹೊರತುಪಡಿಸಿ ಉಳಿದ ನದಿಗಳು ಅಂತಾರಾಜ್ಯದೊಡನೆ ಸಂಬಂಧ ಹೊಂದಿವೆ ಎಂದು ಅವರು ವಿವರಿಸಿದರು.

ಕಳೆದ ಹನ್ನೊಂದು ವರ್ಷದಿಂದ ಕೃಷ್ಣ ಯೋಜನೆ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಆದ್ಯತೆ ಮೇಲೆ ಕೂಡಲೇ ಗೆಟೆಟ್ ನೋಟಿಫಿಕೇಷನ್ ಹೊರಡಿಸಬೇಕು. ಕೆರೆ ತುಂಬಿಸುವ ಯೋಜನೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕೃಷ್ಣ ಮತ್ತು ಮಹಾದಾಯಿ ಕುರಿತು ಹಿರಿಯ ವಿಷಯ ತಜ್ಞ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿ, ಕೃಷ್ಣ ನದಿ ನೀರು ಬಳಕೆ ಕುರಿತ ಯೋಜನೆ ಮಾತಿನಲ್ಲೇ ಉಳಿಕೊಂಡಿದೆ. 1.12 ಚ.ಕಿ.ಮೀ ವ್ಯಾಪ್ತಿಯ ಜಲಾನಯನ ಪ್ರದೇಶವನ್ನು ಕೃಷ್ಣ ಹೊಂದಿದೆ. 55 ಲಕ್ಷ ಚ.ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಯಲ್ಲಿ 35 ಲಕ್ಷಕ್ಕೆ ಕೃಷ್ಣ ನದಿಯಿಂದಲೇ ನೀರು ಪೂರೈಸಬಹುದು ಎಂದು ಅವರು ಹೇಳಿದರು.

1956ರಲ್ಲಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳು ನೀರಾವರಿ ಸೌಲಭ್ಯಕ್ಕಾಗಿ ದೊಡ್ಡ ಸಭೆ ನಡೆಸಿದರು. ನಾಗಾರ್ಜುನ ಮತ್ತು ಕೊಯ್ನ ಯೋಜನೆಯ ಪ್ರಸ್ತಾಪ ಮುಂದಿಟ್ಟು ವಿಜಯಪುರ, ಧಾರವಾಡ ಮುಂತಾದ ಜಿಲ್ಲೆಗಳನ್ನು ಸೇರಿಸಿಕೊಂಡಿದ್ದವು. ಕರ್ನಾಟಕ ರಾಜ್ಯ ಉದಯವಾಗಿ ಈ ಎಲ್ಲಾ ಜಿಲ್ಲೆಗಳು ಕರ್ನಾಟಕ ವ್ಯಾಪ್ತಿಯೊಳಗೆ ಸೇರಿದ ಮೇಲೆ ನಮ್ಮ ರಾಜ್ಯ ವ್ಯಾಪ್ತಿಯಲ್ಲಿ ಕಾಲುವೆ ತೋಡಲು 2 ಕೋಟಿ ವೆಚ್ಚ ಭರಿಸುವಂತೆ ಇಟ್ಟ ಪ್ರಸ್ತಾಪವನ್ನು ನಮ್ಮ ಸರ್ಕಾರ ಒಪ್ಪಿಕೊಳ್ಳಲಿಲ್ಲ. ಅಂದಿನಿಂದಲೂ ಕೃಷ್ಣ ಯೋಜನೆ ಹಾಗೆಯೇ ಉಳಿದಿದೆ ಎಂದರು.

ಈಗ ಸುಮಾರು 70 ವರ್ಷದಿಂದ ನೀರಾವರಿ ಆಗಿಲ್ಲ. ನಾವು ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟೆ ಕಟ್ಟಿದೆವು. ಆದರೆ ಪೂರ್ಣ ಪ್ರಮಾಣದಲ್ಲಿ ನೀರು ಬಳಕೆ ಮಾಡಿಕೊಳ್ಳುತ್ತಿಲ್ಲ. 524 ಮೀ. ಎತ್ತರದ ವರೆಗೆ ನೀರು ಬಳಸಿಕೊಳ್ಳುವುದಕ್ಕೆ ಮಹಾರಾಷ್ಟ್ರ ಅಡ್ಡಿಪಡಿಸಿದ್ದರಿಂದ ಆಲಮಟ್ಟಿ ಡ್ಯಾಂಗೆ 519 ಮೀ. ಎತ್ತರದಲ್ಲಿ ಗೇಟ್‌ ಅಳವಡಿಸಿದೆವು. ಈಗಲೂ ಸುಮಾರು 177 ಟಿಎಂಸಿ ಕೃಷ್ಣಾನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎಂದರು.

ಇನ್ನು ಮಹಾದಾಯಿ ಯೋಜನೆ 40 ವರ್ಷದಿಂದ ತ್ರಿಶಂಕು ಸ್ಥಿತಿಯಲ್ಲಿದೆ. ಪರಿಸರ ಇಲಾಖೆ ಇದಕ್ಕೆ ಅನುಮತಿ ನೀಡಿಲ್ಲ ಎಂದರು.

ಕಾವೇರಿ ಅಚ್ಚುಕಟ್ಟಿನ ಕೆರೆಕಟ್ಟೆಗಳ ಸ್ಥಿತಿಗತಿ ಕುರಿತು ಡಾ.ಎಂ.ಎನ್. ತಿಮ್ಮೇಗೌಡ ವಿಷಯ ಮಂಡಿಸಿ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ 12 ಡ್ಯಾಂ ಇದೆ. 7 ಜಿಲ್ಲೆಯಲ್ಲಿ 1600 ಕೆರೆ ಇದ್ದು, ಇವುಗಳ ಸಂಗ್ರಹ ಸಾಮರ್ಥ್ಯ 47 ಟಿಎಂಸಿ ಆಗಿದೆ. ಈ ಕೆರೆಗಳಲ್ಲಿ ನೀರು ಸಂಗ್ರಹಿಸಬಹುದಾಗಿದ್ದರೂ ಅವು ದುಸ್ಥಿತಿಯಲ್ಲಿವೆ ಎಂದು ಹೇಳಿದರು.

ತೆರೆದ ಬಾವಿ, ಕೊಳವೆ ಬಾವಿ ಹೆಚ್ಚಾದ ಮೇಲೆ ಕೆರೆ ಈ ರೀತಿ ದುಸ್ಥಿತಿ ತಲುಪುತ್ತಿವೆ. ಮಣ್ಣಿನ ಸವಕಳಿಯಿಂದ ಕೆರೆಗಳಲ್ಲಿ ಹೂಳು ತುಂಬುತ್ತಿದೆ. ಮಳೆಗಾಲದಲ್ಲಿ ಹೆಚ್ಚುವರಿ ನೀರನ್ನು ಕೆರೆಗೆ ತುಂಬಿಸಿಕೊಳ್ಳಬೇಕು. ಕೆರೆಗಳನ್ನು ಉಳಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಓಂಪ್ರಕಾಶ್ ದಡ್ಡೆ ನಿರ್ವಹಿಸಿದರು. ಬಿ.ಟಿ. ನಾಗೇಶ್ ಸ್ವಾಗತಿಸಿದರು. ಬಿ.ಎನ್. ವಾಸರೆ ನಿರೂಪಿಸಿದರು. ಬಿ.ಎಚ್. ಸತೀಶ್ ಗೌಡ ವಂದಿಸಿದರು.

‘ಮಣ್ಣು ಮಾಣಿಕ್ಯ, ನೀರು ಅಮೃತ. ನಾವು ಈಗ ಸಾವಯವ ಕೃಷಿ, ಜೈವಿಕ ಕೃಷಿ ಪ್ರೋತ್ಸಾಹಿಸುತ್ತಿದ್ದೇವೆ. ನೀರಿನ ಅವೈಜ್ಞಾನಿಕ ಪದ್ಧತಿ ಬಳಕೆ ಬಿಡಬೇಕು. ಈ ಬಗ್ಗೆ ನಾವು ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು. ನಾವು ಸತ್ತರೆ ಮಣ್ಣಿಗೆ ಹೋಗುತ್ತೇವೆ. ಮಣ್ಣೇ ಸತ್ತರೆ ಎಲ್ಲಿಗೆ?’

- ಡಾ.ಎ.ಬಿ. ಪಾಟೀಲ್, ಕೃಷಿ ತಜ್ಞರು

‘ಕಾವೇರಿ ಜಲಾನಯನ ಪ್ರದೇಶದಲ್ಲಿ ಕಬ್ಬು ಬೆಳೆಯಲು ಇಂತಿಷ್ಟು ಎಕರೆ ಪ್ರದೇಶ ಎಂದು ನಿಗದಿಪಡಿಸಲಾಗಿದೆ. ಆದರೆ ಬೆಂಗಳೂರಿನಂಥ ನಗರಕ್ಕೆ ಬೆಲ್ಲ, ಸಕ್ಕರೆ ಪೂರೈಕೆಸಲು ಮಂಡ್ಯದಲ್ಲಿ ಕಬ್ಬು ಬೆಳೆಯಲೇ ಬೇಕು. ಕಬ್ಬಿಗೆ ಬೇಡಿಕೆ ಹೆಚ್ಚಾಗಿ ಕಬ್ಬು ಬೆಳೆಯುವ ಪ್ರದೇಶವೂ ವಿಸ್ತರಿಸಿದೆ. ಇನ್ನು ರೈತರು ಹನಿ ನೀರಾವರಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಿ ಸಹಕರಿಸಬೇಕು.’

ಮಹೇಂದ್ರ ದೇವನೂರು