ಸ್ವಾವಲಂಬಿ ಜೀವನಕ್ಕೆ ಸ್ವಯಂ ಉದ್ಯೋಗ ದಾರಿದೀಪ: ನಾಗೇಶ

| Published : Dec 22 2024, 01:32 AM IST

ಸಾರಾಂಶ

ಸರ್ಕಾರಿ ಉದ್ಯೋಗಕ್ಕಾಗಿ ಜಾತಕ ಪಕ್ಷಿಯಂತೆ ಕಾಯುವವರ ಸ್ವಾವಲಂಬಿ ಜೀವನಕ್ಕೆ ಸ್ವಯಂ ಉದ್ಯೋಗ ದಾರಿದೀಪವಾಗಿದೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಸರ್ಕಾರಿ ಉದ್ಯೋಗಕ್ಕಾಗಿ ಜಾತಕ ಪಕ್ಷಿಯಂತೆ ಕಾಯುವವರ ಸ್ವಾವಲಂಬಿ ಜೀವನಕ್ಕೆ ಸ್ವಯಂ ಉದ್ಯೋಗ ದಾರಿದೀಪವಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಹೇಳಿದರು.

ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಗುರುವಾರ ಬೆಂಗಳೂರಿನ ಸೆಲ್ಕೋ ಫೌಂಡೇಶನ್ ಹಾಗೂ ವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣಾಭಿವೃದ್ದಿ ಸಂಸ್ಥೆ ಸಹಯೋಗದಲ್ಲಿ ನಡೆದ ವಿಶೇಷಚೇತನರ ಸೌರ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಜೀವನದಲ್ಲಿ ಛಲ ಇಟ್ಟುಕೊಂಡು ಸಾಧನೆ ಮಾಡುವವರಿಗೆ ಯಾವ ಉದ್ಯೋಗವಾದರೇನು? ಗುರಿ ಮುಟ್ಟುವ ಕಾಯಕ ನಿಷ್ಠೆ ನಮ್ಮದಾಗಿರಬೇಕು ಎಂದರು.ಸರ್ಕಾರ ವಿಶೇಷಚೇತನರಿಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದು ಅವುಗಳನ್ನು ವ್ಯರ್ಥವಾಗಿಸದೆ ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವ ಮೂಲಕ ನೆಮ್ಮೆದಿಯ ಜೀವನ ಸಾಗಿಸಬೇಕು ಎಂದು ಹೇಳಿದರು.

ಸೆಲ್ಕೋ ಇಂಡಿಯಾ ಏರಿಯಾ ಮ್ಯಾನೇಜರ ಮಂಜುನಾಥ ಭಾಗವತ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯಿಂದ ಅನೇಕ ವಿಶೇಷಚೇತನರಿಗೆ ಸ್ವಾವಲಂಬಿ ಜೀವನೋಪಾಯಕ್ಕೆ ನಾನಾ ಉದ್ಯೋಗವಕಾಶ ಕಲ್ಪಿಸಿಕೊಟ್ಟಿದ್ದೇವೆ. ವಿಶೇಷಚೇತನರು ಯಾರು ಅತಂಕಕ್ಕೆ ಒಳಗಾಗದೆ ಸಿಗುವ ಅವಕಾಶ ಸದ್ಬಳಕೆ ಮಾಡಿಕೊಂಡು ಸ್ವಯಂ ಉದ್ಯೋಗದಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ತಾಪಂ ಸಂಜೀವಿನ ಯೋಜನೆ ವ್ಯವಸ್ಥಾಪಕ ಉದಯಕುಮಾರ ಮಾತನಾಡಿದರು.

ಪೆಟ್ಟಿ ಅಂಗಡಿಯಲ್ಲಿ ಜೆರಾಕ್ಸ್, ಕಂಪ್ಯೂಟರ್, ಪ್ರಿಂಟರ್, ರೊಟ್ಟಿ ಯಂತ್ರ ಸೇರಿದಂತೆ ನಾನಾ ಉದ್ಯೋಗಗಳನ್ನು ಸೌರಶಕ್ತಿಯಿಂದ ನಡೆಸಲು ಸೆಲ್ಕೋ ಸಂಸ್ಥೆ ಆಸರೆಯಾಗಿದೆ ಎಂದು ವಿಶೇಷಚೇತನರಾದ ಇಟಗಿಯ ಜಯಶ್ರೀ ಗುಳಗಣ್ಣನವರ್, ಮಂಜುಳಾ, ದೇವಮ್ಮ ಅನಿಸಿಕೆ ಹಂಚಿಕೊಂಡರು.

ಅತಿಥಿಗಳಾಗಿ ಶ್ರೀ ವೀರಭದ್ರೇಶ್ವರ ವಿಶೇಷಚೇತನರ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಈರಪ್ಪ ಕರೆಕುರೆ, ಸೆಲ್ಕೋ ಫೌಂಡೇಶನ್‌ನ ಜಿಲ್ಲಾ ವ್ಯವಸ್ಥಾಪಕ ಎಚ್. ಮಂಜುನಾಥ, ಪ್ರಕಾಶ ಮೇಟಿ, ವೀರೇಶ ತಡದಾಳ, ಚಂದ್ರಶೇಖರ ಮಡಿವಾಳರ, ಮಮತಾ, ಶ್ರೀದೇವಿ ಮತ್ತಿತರರು ಇದ್ದರು.