ಬಿಐಟಿಎಂನಲ್ಲಿ ಯುವ ಸಂಸತ್ತು: ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಚರ್ಚೆ
ಕನ್ನಡಪ್ರಭ ವಾರ್ತೆ ಬಳ್ಳಾರಿಯುವಜನರಲ್ಲಿ ಪ್ರಜಾಪ್ರಭುತ್ವ, ಚುನಾವಣಾ ವ್ಯವಸ್ಥೆ ಹಾಗೂ ರಾಷ್ಟ್ರೀಯ ಮಹತ್ವದ ವಿಷಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ(ಮೈ ಭಾರತ) ಬಳ್ಳಾರಿ ಕೇಂದ್ರದ ಆಶ್ರಯದಲ್ಲಿ ನಗರದ ಬಿಐಟಿಎಂ ಕಾಲೇಜಿನಲ್ಲಿ ‘ವಿಕಸಿತ ಭಾರತ ಯುವ ನಾಯಕರು ಸಂವಾದ- 2047’ ಅಂಗವಾಗಿ ‘ವಿಕಸಿತ ಭಾರತ ಯುವ ಸಂಸತ್ತು’ ಕಾರ್ಯಕ್ರಮ ಜರುಗಿತು.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಷಯದ ಕುರಿತು ಯುವ ಸಂಸತ್ತು ಚರ್ಚಾ ಸ್ಪರ್ಧೆಯಲ್ಲಿ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಪರಿಕಲ್ಪನೆ, ಅದರ ಸಾಧಕ- ಬಾಧಕಗಳು, ಚುನಾವಣಾ ವೆಚ್ಚ ಹಾಗೂ ಆಡಳಿತಾತ್ಮಕ ಸ್ಥಿರತೆಯ ಕುರಿತು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಬಿಐಟಿಎಂ ಇಸಿಇ ವಿಭಾಗದ ಮುಖ್ಯಸ್ಥ ಡಾ. ಸದ್ಯೋಜಾತ ಕೆ.ಎಂ. ಮಾತನಾಡಿ, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಚುನಾವಣೆಗಳ ಪಾತ್ರ ಮಹತ್ವದ್ದಾಗಿದೆ. ಯುವಜನರು ಜವಾಬ್ದಾರಿಯುತ ಮತದಾನ ಹಾಗೂ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಸಮಗ್ರ ಅರಿವು ಹೊಂದಬೇಕು. ಪ್ರಜಾಪ್ರಭುತ್ವದ ಆಶಯಗಳನ್ನು ಅರ್ಥಮಾಡಿಕೊಂಡು ದೇಶದ ಭವಿಷ್ಯ ರೂಪಿಸುವ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಯು. ಶ್ರೀನಿವಾಸಮೂರ್ತಿ ಮಾತನಾಡಿ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯಿಂದ ಚುನಾವಣಾ ವೆಚ್ಚ ಕಡಿತಗೊಳಿಸುವುದರ ಜತೆಗೆ ಆಡಳಿತದಲ್ಲಿ ನಿರಂತರತೆ ಮತ್ತು ಸ್ಥಿರತೆ ಕಾಪಾಡಲು ಸಾಧ್ಯವಾಗಬಹುದು ಎಂದು ವಿವರಿಸಿದರು. ದೀಪಕ್ ಪಿ. ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ರಾಜ್ಯಮಟ್ಟಕ್ಕೆ ಮೂವರ ಆಯ್ಕೆ:
ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಷಯದ ಆಳವಾದ ಅಧ್ಯಯನ, ತಾರ್ಕಿಕ ಚಿಂತನೆ ಹಾಗೂ ಸ್ಪಷ್ಟ ಸಂವಹನದ ಮೂಲಕ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ತೀರ್ಪುಗಾರರ ಮೌಲ್ಯಮಾಪನದ ಬಳಿಕ ವಿಜೇತರನ್ನು ಘೋಷಿಸಲಾಯಿತು. ಕಿಷ್ಕಿಂದ ವಿಶ್ವವಿದ್ಯಾಲಯದ ಪಿ. ದೀಪಕ್ ಪ್ರಥಮ, ಬಳ್ಳಾರಿಯ ಬಿಬಿಸಿ ಕಾಲೇಜಿನ ಈರಣ್ಣ ಗೌಡ ದ್ವಿತೀಯ ಹಾಗೂ ವೀರಶೈವ ಕಾಲೇಜಿನ ಎಚ್. ಧರಣಿ ಕುಮಾರ ಗೌಡ ತೃತೀಯ ಬಹುಮಾನ ಪಡೆದರು. ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳು ರಾಜ್ಯಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.ಬಿಐಟಿಎಂ ಉಪಪ್ರಾಂಶುಪಾಲ ಡಾ. ಬಿ.ಎಸ್. ಖೇಣೇದ್, ಪ್ರೊ. ಡಿ. ಆರಾಧನಾ, ಬಸವರಾಜ ಬಿಸಲಹಳ್ಳಿ ಉಪಸ್ಥಿತರಿದ್ದು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಡಾ. ನಾಗರಾಜ ಬಣಕಾರ ಕಾರ್ಯಕ್ರಮ ನಿರ್ವಹಿಸಿದರು.