ನಗರದ ರಾಯಲ್ ವೃತ್ತ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಆಟೋ ನಿಲ್ದಾಣಗಳ ನಾಮಫಲಕಗಳ ತೆರವಿಗೆ ಜೆಸಿಬಿ ಯಂತ್ರಗಳೊಂದಿಗೆ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪಾಲಿಕೆಯ ಪೂರ್ವಾನುಮತಿ ಪಡೆಯದೆ ಅಳವಡಿಸಿದ್ದ ನಾಮಫಲಕಗಳನ್ನು ಗುರುತಿಸಿ ತೆರವು ಕಾರ್ಯ ಕೈಗೊಂಡರು.

ಬಳ್ಳಾರಿ: ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಆಟೋ ನಿಲ್ದಾಣಗಳ ನಾಮಫಲಕಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆದ ಈ ಕಾರ್ಯಾಚರಣೆಗೆ ಆಟೋ ಚಾಲಕರು ಹಾಗೂ ಮಾಲೀಕರ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದ್ಯಾವುದನ್ನು ಲೆಕ್ಕಿಸದೆ ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸಲಾಯಿತು.

ನಗರದ ರಾಯಲ್ ವೃತ್ತ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಆಟೋ ನಿಲ್ದಾಣಗಳ ನಾಮಫಲಕಗಳ ತೆರವಿಗೆ ಜೆಸಿಬಿ ಯಂತ್ರಗಳೊಂದಿಗೆ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪಾಲಿಕೆಯ ಪೂರ್ವಾನುಮತಿ ಪಡೆಯದೆ ಅಳವಡಿಸಿದ್ದ ನಾಮಫಲಕಗಳನ್ನು ಗುರುತಿಸಿ ತೆರವು ಕಾರ್ಯ ಕೈಗೊಂಡರು.

ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೊಲೀಸ್ ಭದ್ರತೆಯೊಂದಿಗೆ ವಿವಿಧೆಡೆ ತೆರಳಿ ನಾಮಫಲಕಗಳನ್ನು ತೆರವುಗೊಳಿಸಿದರು.

ತೆರವು ಮುಂದುವರಿಕೆ: ಈ ಕುರಿತು ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್, ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಕೆಯ ಪೂರ್ವಾನುಮತಿ ಇಲ್ಲದೆ ಬ್ಯಾನರ್, ಫ್ಲೆಕ್ಸ್ ಹಾಗೂ ನಾಮಫಲಕಗಳನ್ನು ಅಳವಡಿಸುವಂತಿಲ್ಲ. ಅಧಿಸೂಚಿತವಲ್ಲದ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನಗರದ ವಿವಿಧೆಡೆ ಪಾಲಿಕೆಯ ಅನುಮತಿ ಪಡೆಯದೆ ಆಟೋ ನಿಲ್ದಾಣಗಳ ನಾಮಫಲಕಗಳನ್ನು ಅಳವಡಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಯಮಬಾಹಿರವಾಗಿ ಅಳವಡಿಸಿರುವ ನಾಮಫಲಕಗಳ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ಹಂತ ಹಂತವಾಗಿ ಇಂತಹ ಫಲಕಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಆಟೋ ನಿಲ್ದಾಣಗಳನ್ನು ಸ್ಥಾಪಿಸಲು 2001ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಜಾವೀದ್ ಅಕ್ತರ್ ಅವರು ಅನುಮತಿ ನೀಡಿದ್ದರು. ಅಂದಿನಿಂದಲೂ ಆಟೋ ಚಾಲಕರು ನಿಗದಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿದ್ದಾರೆ. ಹೀಗಿರುವಾಗ ಪಾಲಿಕೆಯವರು ನಾಮಫಲಕಗಳನ್ನು ಅನಧಿಕೃತವೆಂದು ಪರಿಗಣಿಸಿ ತೆರವುಗೊಳಿಸಿರುವುದು ಸರಿಯಲ್ಲ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಹುಂಡೇಕರ್ ರಾಜೇಶ್ ಆಕ್ಷೇಪಿಸಿದ್ದಾರೆ.

ಒಂದೆಡೆ ಸಾರ್ವಜನಿಕ ಸ್ಥಳಗಳಲ್ಲಿನ ಅನಧಿಕೃತ ನಾಮಫಲಕಗಳ ತೆರವಿಗೆ ಪಾಲಿಕೆ ಮುಂದಾಗಿದ್ದರೆ, ಮತ್ತೊಂದೆಡೆ ಆಟೋ ನಿಲ್ದಾಣಗಳಿಗೆ ಈ ಹಿಂದೆಯೇ ಅನುಮತಿ ನೀಡಲಾಗಿದೆ ಎಂದು ಚಾಲಕರ ಸಂಘಟನೆ ಪ್ರತಿಪಾದಿಸಿದೆ. ಇದರಿಂದ ನಾಮಫಲಕಗಳ ತೆರವು ವಿಚಾರ ಪಾಲಿಕೆ ಹಾಗೂ ಆಟೋ ಚಾಲಕರ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಆಟೋ ನಿಲ್ದಾಣಗಳ ನಾಮಫಲಕಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಿರುವ ಕ್ರಮವನ್ನು ಸ್ವಾಗತಿಸಿರುವ ಸಾರ್ವಜನಿಕರು ನಗರದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಸಂಚಾರಿ ಪೊಲೀಸರು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ನಗರದಲ್ಲಿ ಎಲ್ಲೆಂದರಲ್ಲಿ ಆಟೋಗಳು ಸೇರಿದಂತೆ ಖಾಸಗಿ ವಾಹನಗಳು ನಿಲುಗಡೆ ಮಾಡುತ್ತವೆ. ಇದರಿಂದ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದ್ದು, ಫುಟ್‌ಪಾತ್‌ಗಳಿಲ್ಲದೆ ರಸ್ತೆಯಲ್ಲಿ ಓಡಾಡುವ ಜನರು ಅಪಘಾತಗಳಿಗೆ ಸಿಲುಕುವಂತಾಗಿದೆ. ಸಂಚಾರಿ ಪೊಲೀಸರು ಕೂಡಲೇ ಸುಗಮ ಸಂಚಾರಕ್ಕೆ ಬೇಕಾದ ಪೂರಕ ಕ್ರಮಗಳನ್ನು ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.