ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ರೋಟರಿ ಸಂಸ್ಥೆಯ ಸಾಮಾಜಿಕ ಕಾರ್ಯಗಳು ಮನೆ, ಮನೆಗೆ ತಲುಪುತ್ತಿತ್ತು. ಮುಂದೆ ಜನರ ಮನಸ್ಸಿಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದು ರೋಟರಿ ಕ್ಲಬ್ 3182 ರ ಜಿಲ್ಲಾ ನಿಯೋಜಿತ ರಾಜ್ಯಪಾಲ ವಸಂತ್ ಹೋಬಳಿದಾರ್ ಕರೆ ನೀಡಿದರು.

ಅವರು ಗುರುವಾರ ರಾತ್ರಿ ಸಿಂಸೆಯ ಕನ್ಯಕುಮಾರಿ ಕಂಪರ್ಟ್ ಹಾಲ್ ನಲ್ಲಿ ನಡೆದ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ ನ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಎನ್.ಆರ್.ಪುರ ರೋಟರಿ ಕ್ಲಬ್ 47 ವರ್ಷದ ಹಿಂದೆ ಪ್ರಾರಂಭವಾಗಿದ್ದು ಈಗಲೂ ಉತ್ತಮ ಕಾರ್ಯಕ್ರಮಗಳ ಮೂಲಕ ಮುನ್ನೆಡೆಯುತ್ತಿದೆ. ಕಳೆದ ಸಾಲಿನ ರೋಟರಿ ಅಧ್ಯಕ್ಷ ಕಣಿವೆ ವಿನಯ್ 35 ಲಕ್ಷ ರು. ಕರ್ಚು ಮಾಡಿ 140 ಕಾರ್ಯಕ್ರಮ ಮಾಡಿ ಸಾಧನೆ ಮಾಡಿದ್ದಾರೆ.1905 ರಲ್ಲಿ ಅಮೆರಿಕಾದಲ್ಲಿ ಸ್ನೇಹ, ಒಡನಾಟಕ್ಕೆ ಎಂದು 5 ಜನರು ಪ್ರಾರಂಭಿಸಿದ್ದ ರೋಟರಿ ಕ್ಲಬ್ ಇಂದು ಪ್ರಪಂಚದಾದ್ಯಂತ ಬೆಳೆದಿದೆ.ರೋಟರಿ ಕ್ಲಬ್ ಗುಣಮಟ್ಟದ ಶಾಶ್ವತ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಇನ್ನರ್ ವೀಲ್ 318 ರ ಜಿಲ್ಲಾಧ್ಯಕ್ಷೆ ಶಿವಮೊಗ್ಗದ ಸುಧಾ ಪ್ರಸಾದ್ ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಸಿಕೊಟ್ಟು ಮಾತನಾಡಿ, ಇನ್ನರ್ ವೀಲ್ ಕ್ಲಬ್ ಅಂತಾರಾಷ್ಟೀಯ ಸಂಸ್ಥೆಯಾಗಿದ್ದು ನೂರಾರು ದೇಶಗಳಲ್ಲಿ ಬೇರು ಬಿಟ್ಟಿದೆ.101 ವರ್ಷ ಮುಗಿಸಿ 102 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಇನ್ನರ್ ವ್ಹೀಲ್ ಸ್ನೇಹ ಹಾಗೂ ಸಕಾರಾತ್ಮಕ ಚಿಂತನೆ ಬೆಳೆಸುತ್ತದೆ. ಇನ್ನರ್ ವ್ಹೀಲ್ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದರು.


ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಪಿ.ಎಸ್. ವಿದ್ಯಾನಂದಕುಮಾರ್, ಕಾರ್ಯದರ್ಶಿಯಾಗಿ ಕೆ.ಪಿ. ಮನೋಜ್ ಕುಮಾರ್ ಅಧಿಕಾರ ಸ್ವೀಕಾರ ಮಾಡಿದರು. ಇನ್ನರ್ ವ್ಹೀಲ್ ನೂತನ ಅಧ್ಯಕ್ಷೆಯಾಗಿ ರಾಧಿಕಾ ಅರ್ಜುನ್, ಕಾರ್ಯದರ್ಶಿಯಾಗಿ ಸನ್ಮತಿ ರಕ್ಷಿತ್ ಅಧಿಕಾರ ಸ್ವೀಕಾರ ಮಾಡಿದರು.

ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ವಹಿಸಿದ್ದರು. ಅತಿಥಿಗಳಾಗಿ ರೋಟರಿ ವಲಯ 6ರ ಅಸಿಸ್ಟೆಂಟ್ ಗೌರ್ನರ್ ಎಚ್.ಎಸ್. ಮೋಹನ್, ಜೋನಲ್ ಲೆಫ್ಟಿನೆಂಟ್ ಬಿ.ಎಸ್.ದಿನೇಶ್, ರೋಟರಿ ಕ್ಲಬ್ ಕಾರ್ಯದರ್ಶಿ ಕಟಗಳಲೆ ಲೋಕೇಶ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಭವ್ಯ ಸಂತೋಷ್, ಕಾರ್ಯದರ್ಶಿ ನೀತಾ ಪ್ರದೀಪ್ ಇದ್ದರು.

ಎಸ್.ಎನ್. ಲೋಕೇಶ್ ಹಾಗೂ ನೀತಾ ಪ್ರದೀಪ್ ವರದಿ ವಾಚಿಸಿದರು. ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಶಕ್ತಿ ಎಂಬ ಸಂಚಿಕೆ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭ ರೋಟರಿ ಕ್ಲಬ್ ವತಿಯಿಂದ ಶೃಂಗೇರಿ ಶ್ರೀ ಮಠದ ಸಹಕಾರದೊಂದಿಗೆ ಆರ್ಥಿಕವಾಗಿ ಹಿಂದುಳಿದ 10 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಹಾಗೂ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಅವರನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಉಪ ರಾಜ್ಯಪಾಲ ರಾಜಗೋಪಾಲ ಜೋಷಿ ಅವರನ್ನು ಗೌರವಿಸಲಾಯಿತು. ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಡಿಸಿಎಂಸಿ ಶಾಲೆಯ ಉದ್ಯೋಗಿ ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು. ಬಡಕುಟುಂಬದ ವಿದ್ಯಾರ್ಥಿನಿಗೆ ಧನ ಸಹಾಯ ಮಾಡಲಾಯಿತು.

- - -

-ಫೋಟೋ:

ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ನಡೆಯಿತು.