ಸುಸ್ಥಿರ ಭಾರತಕ್ಕಾಗಿ ಸಾಕ್ಷರರಾಗೋಣ: ಜಗದೀಶಪ್ಪ

| Published : Sep 09 2024, 01:37 AM IST

ಸುಸ್ಥಿರ ಭಾರತಕ್ಕಾಗಿ ಸಾಕ್ಷರರಾಗೋಣ: ಜಗದೀಶಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಅನಕ್ಷರಸ್ಥರನ್ನು ನವಸಾಕ್ಷರನ್ನಾಗಿ ಮಾಡುವ ಬಹುದೊಡ್ಡ ಜವಾಬ್ದಾರಿಯು ಸಾಕ್ಷರರ ಮೇಲಿದೆ.

ವಿಶ್ವ ಸಾಕ್ಷರತಾ ದಿನಾಚರಣೆಯ ಪ್ರಯುಕ್ತ ಸಾಕ್ಷರತಾ ಧ್ವಜಾರೋಹಣ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಅನಕ್ಷರಸ್ಥರನ್ನು ನವಸಾಕ್ಷರನ್ನಾಗಿ ಮಾಡುವ ಬಹುದೊಡ್ಡ ಜವಾಬ್ದಾರಿಯು ಸಾಕ್ಷರರ ಮೇಲಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ. ಜಗದೀಶಪ್ಪ ಹೇಳಿದರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆಯ ಪ್ರಯುಕ್ತ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಓದು, ಬರಹ ಮತ್ತು ಉತ್ತಮ ಗ್ರಹಿಕೆಯುಕ್ತ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ಅನಕ್ಷರಸ್ಥರನ್ನು ನವಸಾಕ್ಷರನ್ನಾಗಿಸುವ ಬಹುದೊಡ್ಡ ಜವಾಬ್ದಾರಿ ಸಾಕ್ಷರರ ಮೇಲಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದುರಿ ಮಾತನಾಡಿ, ಸದೃಢ ಭಾರತಕ್ಕಾಗಿ ಸಾಕ್ಷರತಾ ಭಾರತ ಕಾರ್ಯಕ್ರಮವು ಅತ್ಯವಶ್ಯಕವಾಗಿದೆ. ನಾಡಿನ ನಾಗರಿಕರು ಸಾಕ್ಷರರಾದಾಗ ಮಾತ್ರ ಸರ್ವಾಂಗಿಣ ವಿಕಾಸಕ್ಕೆ ದಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಅನಕ್ಷರಸ್ಥರನ್ನು ನವಸಾಕ್ಷರರನ್ನಾಗಿ ಮಾಡುವ ಬಹುದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ ಎಂದರು.

ಬಿಆರ್‌ಪಿ ಶರಣಪ್ಪ ತೆಮ್ಮಿನಾಳ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರ ಮನೆ ಮತ್ತು ಮನವನ್ನು ತಲುಪಿ ಮಹಿಳೆ ಮತ್ತು ಶಿಕ್ಷಣ ವಂಚಿತ ವರ್ಗದವರ ಕಲಿಕೆಗಾಗಿ ಈ ಕಾರ್ಯಕ್ರಮವು ಜನಾಂದೋಲನಗೊಳ್ಳಲು ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವ ಸಂಕಲ್ಪ ಮಾಡಬೇಕಾಗಿದೆ. 2015ರಲ್ಲಿ ವಿಶ್ವಸಂಸ್ಥೆಯ ಪ್ರಮುಖ 17 ಧ್ಯೇಯೋದ್ದೇಶಗಳಲ್ಲಿ ಸಾಕ್ಷರತೆಗೆ ಪ್ರಮುಖ ಸ್ಥಾನವಿರುವುದನ್ನು ಗಮನಿಸಬಹುದಾಗಿದೆ. ಅನಕ್ಷರಸ್ಥರೆಲ್ಲರೂ ಅಕ್ಷರ ಕಲಿತು ಸಾಕ್ಷರರಾದಾಗ ಪ್ರತಿಯೊಬ್ಬರ ಕೌಶಲ್ಯ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದರು.

ಬಿಆರ್‌ಪಿ ಡಾ. ಜೀವನಸಾಬ ವಾಲಿಕಾರ್ ಮಾತನಾಡಿ, ವಿಶ್ವ ಸಾಕ್ಷರತಾ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭ ಸಿಆರ್‌ಪಿ, ಬಿಆರ್‌ಪಿ ಸಂಘದ ಅಧ್ಯಕ್ಷ ಸೋಮಲಿಂಗಪ್ಪ ಗುರಿಕಾರ, ಇಸಿಒ ದಾವಲಸಾಬ ವಾಲಿಕಾರ, ಶಿವಾನಂದ ಪಂಪಣ್ಣವರ, ಬಿಆರ್‌ಪಿ ಶಾರದಾ ಅಣ್ಣಿಗೇರಿ, ಜಿ. ಲೋಕೇಶ, ಶಶಿಕಾಂತ ಧರಣಪ್ಪಗೌಡರ, ಶರಣಪ್ಪ ಉಪ್ಪಾರ, ಲಲಿತಾ ಕಾದಲ್, ಶರಣಮ್ಮ ಬಳ್ಳೊಳ್ಳಿ, ಶರಣಪ್ಪ ಗುಮಗೇರಿ, ಸೀಮಣ್ಣ ಹಳ್ಳಿ, ಮರಿಸ್ವಾಮಿ ಇಂಡಿ, ಸೋಮನಾಥ ಕಂಚಿ ಮುಂತಾದವರಿದ್ದರು. ಬಿಆರ್‌ಪಿ ಶ್ರೀಕಾಂತ್ ಬೆಟಗೇರಿ ಕಾರ್ಯಕ್ರಮ ನಿರ್ವಹಿಸಿದರು.