ಸಾರಾಂಶ
ಚಿತ್ರದುರ್ಗ: ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಬದುಕು ಸುಂದರ ಹಾಗೂ ಸುಸೂತ್ರವಾಗಿ ನಡೆಯುತ್ತದೆ ಎಂದು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.
ಚಿತ್ರದುರ್ಗ: ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಬದುಕು ಸುಂದರ ಹಾಗೂ ಸುಸೂತ್ರವಾಗಿ ನಡೆಯುತ್ತದೆ ಎಂದು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಸಂಶೋಧನಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಎಂಟು ದಿನಗಳ ಕಾಲ ನಡೆದ 1895ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ದುಶ್ಚಟದಿಂದ ದೂರವಿದ್ದರೆ ಬದುಕು ಸುಖಮಯವಾಗಿರುತ್ತದೆ. ಮದ್ಯಪಾನಕ್ಕೆ ದಾಸರಾಗಿದ್ದ ನೀವುಗಳು ಎಂಟು ದಿನಗಳ ಶಿಬಿರದಲ್ಲಿ ಭಾಗವಹಿಸಿ ಸಂಕಲ್ಪ ಮಾಡಿದಂತೆ ಇನ್ನು ಮುಂದೆ ಮದ್ಯಪಾನ ನಿಮ್ಮ ಹತ್ತಿರ ಸುಳಿಯಬಾರದು. ಎಲ್ಲದಕ್ಕೂ ಮನಸ್ಸು ಕಾರಣ. ಹಾಗಾಗಿ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ದುಶ್ಚಟದಿಂದ ದೂರವಿದ್ದು, ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕು ಕಟ್ಟಿಕೊಳ್ಳಿ ಎಂದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕಿ ಗೀತಾ ಮಾತನಾಡಿ, ಒಮ್ಮೆ ಜೀವನದಲ್ಲಿ ಎಡವಿದರೆ ಮೇಲೇಳುವುದು ತುಂಬಾ ಕಷ್ಟ. ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡ ನೀವುಗಳು ಉಸಿರಿರುವತನಕ ಮತ್ತೆ ಮದ್ಯ ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೀರ. ಅದರಂತೆ ನಡೆದುಕೊಳ್ಳಿ ಎಂದರು.
ಪುರುಷನನ್ನು ಸರಿದಾರಿಗೆ ತರುವ ಶಕ್ತಿ ಹೆಣ್ಣಿನಲ್ಲಿದೆ. ಅದಕ್ಕಾಗಿ ನೀವುಗಳು ಫ್ಯಾಶನ್ ಜೀವನಕ್ಕೆ ಮರುಳಾಗಬೇಡಿ. ಪಬ್, ಕ್ಲಬ್‍ಗಳಲ್ಲಿ ಹೆಣ್ಣಿನ ಹಾವಳಿ ಹೆಚ್ಚಾಗಿದೆ. ದುಶ್ಚಟ ಜೀವನವನ್ನು ಸರ್ವನಾಶಗೊಳಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಕಷ್ಟ-ಸುಖ ಬರುತ್ತದೆ. ಎಲ್ಲವನ್ನು ಧೈರ್ಯದಿಂದ ಸ್ವೀಕರಿಸಬೇಕು. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕೆ.ಆರ್.ಮಂಜುನಾಥ್ ಮಾತನಾಡಿ, ಮದ್ಯವರ್ಜನ ಶಿಬಿರದಲ್ಲಿ ಎಂಟು ದಿನಗಳ ಕಾಲ ಮದ್ಯದಿಂದಾಗುವ ದುಷ್ಪರಿಣಾಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಇನ್ನು ಮುಂದೆಯಾದರೂ ಕುಡಿತ ಬಿಟ್ಟು ಹೆಂಡತಿ, ಮಕ್ಕಳೊಂದಿಗೆ ಸಂಸಾರ ನಡೆಸಿ ಸಂತೋಷವಾಗಿರಿ. ಹೊಸ ಜೀವನ ಕಂಡುಕೊಳ್ಳುವ ಶಕ್ತಿ ನಿಮ್ಮಲ್ಲಿದೆ ಎಂದು ಹೇಳಿದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಮಂಜಪ್ಪ ಮಾತನಾಡಿ, ಕುಡಿತದಿಂದ ಒಬ್ಬರ ಆರೋಗ್ಯ ಹಾಳಾಗುವುದಲ್ಲದೆ ಇಡೀ ಸಂಸಾರದಲ್ಲಿ ನೆಮ್ಮದಿಯಿಲ್ಲದಂತಾಗುತ್ತದೆ. ಕುಟುಂಬ ಹಾಳಾಗಲು ಮಹಿಳೆಯರು ಬಿಡಬಾರದು. ನಿಮ್ಮ ಪುರುಷರನ್ನು ಸರಿದಾರಿಗೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು. ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ರೂಪ ಜನಾರ್ಧನ್, ಮಾಳಪ್ಪನಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಮಾತನಾಡಿದರು.ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್, ರೀನ ವೀರಭದ್ರಪ್ಪ, ಕೆಇಬಿ ಷಣ್ಮುಖಪ್ಪ ವೇದಿಕೆಯಲ್ಲಿದ್ದರು.ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದ ಎಪ್ಪತ್ತು ಪುರುಷರು ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲವೆಂದು ಸಂಕಲ್ಪ ತೊಟ್ಟರು. ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕ ನಾಗರಾಜ್ ಕುಲಾಲ್, ದಿವಾಕರ್ ಪೂಜಾರಿ, ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್, ಮೇಲ್ವಿಚಾರಕ ಬಾಲಕೃಷ್ಣ ಎಂ.ಸೌಮ್ಯ ಮಂಜುನಾಥ್ ಹಾಜರಿದ್ದರು.