ಸಾರಾಂಶ
ರೋಣ: ನಿತ್ಯವೂ ಸನ್ಮಾರ್ಗದಿಂದ ನಡೆದಲ್ಲಿ ಬದುಕು ಹಸನಗೊಳ್ಳುವುದರ ಜೊತೆಗೆ, ಜೀವಕ್ಕೆ ಮುಕ್ತಿ ದೊರೆಯಲಿದೆ ಎಂದು ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು. ಅವರು ತಾಲೂಕಿನ ಕೊತಬಾಳ ಗ್ರಾಮದ ಅಡವಿಸಿದ್ದೇಶ್ವರ ಮಠದ ಆವರಣದಲ್ಲಿ ಶ್ರೀ ಅಡವಿಸಿದ್ದೇಶ್ವರ ಪುರಾಣ- ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಸಾಧು, ಸಂತ, ಶರಣ ಹಿತ ನುಡಿ, ತತ್ವ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ ಶುದ್ಧ ಕಾಯಕದಿಂದ ನಡೆಯಬೇಕು. ಅನ್ಯಾಯ, ಅನಾಚಾರ, ದುರ್ಗುಣಗಳನ್ನು ತ್ಯಜಿಸಿ ಸನ್ಮಾರ್ಗಿಗಳಾಗಬೇಕು. ಆತ್ಮ ಮತ್ತು ಮನಸ್ಸು ಶುದ್ಧಿಯಾಗಿ ಪುರಾಣ, ಪ್ರವಚನಗಳನ್ನು ಆಲಿಸಬೇಕು. ಪವಾಡ ಪುರುಷ ಅಂಕಲಗಿ ಅಡವಿ ಸಿದ್ದೇಶ್ವರರ ಜೀವನ ಚರಿತ್ರೆ ಮತ್ತು ಪವಾಡಗಳನ್ನು ಜನರಿಗೆ ಮನ ಮುಟ್ಟುವಲ್ಲಿ ಭಕ್ತಿಪೂರ್ವಕವಾಗಿ ಹೇಳುತ್ತಿರುವ ಆಶುಕವಿ ಅಂತೂರ- ಬೆಂತೂರ ಕುಮಾರ ದೇವರ ವಾಕ್ ಚಾತುರ್ಯ ಮೆಚ್ಚುವಂತದ್ದಾಗಿದೆ ಎಂದರು. ಪುರ್ತಗೇರಿ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆತ್ಮ ಸಾಕ್ಷಾತ್ಕಾರಕ್ಕೆ ಗುರುವಿನ ಆಶೀರ್ವಾದ ಅತೀ ಮುಖ್ಯವಾಗಿದೆ. ಗುರು ಇದ್ದರೆ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಂಕಲಗಿ ಅಡವಿ ಸಿದ್ದೇಶ್ವರ ಶ್ರೀಗಳು ಮಾರ್ಗದರ್ಶಕರಾಗಿ, ಗುರುವಾಗಿ ಸಮಾಜದ ಸದ್ಗತಿಗೆ ಶ್ರಮಿಸಿದ್ದಾರೆ ಎಂದರು. ಸಂಭ್ರಮದ ತೊಟ್ಟಿಲೋತ್ಸವ ಕಾರ್ಯಕ್ರಮ:ಅಡವಿಸಿದ್ದೇಶ್ವರ ಜೀವನ ಚರಿತ್ರೆ ಕುರಿತು ಕಳೆದೊಂದು ವಾರದಿಂದ ಆಶುಕವಿ ಅಂತೂರ- ಬೆಂತೂರ ಕುಮಾರ ದೇವರು ಅವರಿಂದ ಪುರಾಣ- ಪ್ರವಚನ ಜರುಗಿತು. ಅಂಕಲಗಿ ಅಡವಿ ಸಿದ್ದೇಶ್ವರ ಶ್ರಿಗಳ ಜನನ ಕುರಿತು , ನಾಮಕರಣದ ತೊಟ್ಟಿಲೋತ್ಸವ ಕಾರ್ಯಕ್ರಮದ ಸನ್ನಿವೇಶವನ್ನು ಜನರಿಗೆ ಮನ ಮುಟ್ಟುವಂತೆ ಸಂಭ್ರಮ,ಸಡಗರದಿಂದ ಪ್ರಸ್ತುತ ಪಡಿಸಲಾಯಿತು. ಪ್ರವಚನಕಾರರಾದ ಶ್ರೀ ಕುಮಾರ ದೇವರು ತೊಟ್ಟಿಲು ಶಾಸ್ತ್ರದ ಹಿಂದಿನ ಅರ್ಥ, ಸಂಪ್ರದಾಯಗಳ ಕುರಿತು ವಿವರಿಸಿದರು.ಡೋಲಕ ವಾದಕರಾಗಿ ಮೋಹನ ಮೆಹರವಾಡೆ, ತಬಲಾ ವಾದಕರಾಗಿ ಬಸವರಾಜ ಗೊರವರ, ದ್ಯಾಮಣ್ಣ ಕುರಹಟ್ಟಿ ಅವರಿಂದ ಸಂಗೀತ ಸೇವೆ ಜರುಗಿತು.ಕಾರ್ಯಕ್ರಮದಲ್ಲಿ ಕೊತಬಾಳ ಶ್ರೀಮಠದ ಗಂಗಾಧರ ಸ್ವಾಮೀಜಿ ಸೇರಿದಂತೆ ಕೊತಬಾಳ, ಕುರಹಟ್ಟಿ, ಮುಗಳಿ, ಹೊನ್ನಿಗನೂರ, ಹಿರೇಹಾಳ, ತಳ್ಳಿಹಾಳ, ರೋಣ, ಮುದೇನಗುಡಿ, ಹುಲ್ಲೂರ, ಮಾಡಲಗೇರಿ, ನೈನಾಪೂರ ಸೇರಿದಂತೆ ಸುತ ಮುತ್ತಲಿನ ಸಾವಿರಾರು ಸದ್ಭಕ್ತರು ಪಾಲ್ಗೊಂಡಿದ್ದರು. ಮಂಜುನಾಥ ದೇಸಾಯಿ ನಿರೂಪಿಸಿದರು.