ರೋಣ: ಮನುಷ್ಯ ಜನ್ಮ ಪರಿಪೂರ್ಣತೆಯಿಂದ ಇರಬೇಕಾದಲ್ಲಿ ಶಾಂತ ಸ್ಥಿತಿಯಿಂದ ಅನಂತ ಸ್ಥಿತಿಯಡೆಗೆ ಸಾಗಬೇಕು. ಅಂದಾಗ ಅಂತರಂಗ ಶುದ್ಧಿಯಾಗುವುದು. ಇದಕ್ಕೆ ಅಧ್ಯಾತ್ಮ, ಧರ್ಮ ಕಾರ್ಯ ಸೂಕ್ತ ಮಾರ್ಗವಾಗಲಿದೆ ಎಂದು ತುಮಕೂರು ರಾಮಕೃಷ್ಣ ಆಶ್ರಮದ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಶನಿವಾರ ಸಂಜೆ ಪಟ್ಟಣದ ಶಾರದಾ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಸಿದ್ಧಾರೂಢ ಮಹಿಳಾ ಭಜನಾ ಕಲಾವಿದ ಸಂಘ, ಸಿದ್ಧಾದ್ದಾರೂಢ ಸಮಸ್ತ ಸದ್ಭಕ್ತ ಮಂಡಳಿ ವತಿಯಿಂದ 3 ದಿನಗಳ ಕಾಲ ಅಧ್ಯಾತ್ಮ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂತರಂಗ ಶುದ್ದಿ ಮಾಡದಿದ್ದರೇ ಬದುಕು ಪರಿಪೂರ್ಣವಾಗುವುದು. ವಿವೇಕಯುತ ಜೀವನ ಸಾಗಿಸಲು ಧರ್ಮ ಮಾರ್ಗದಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಅಧ್ಯಾತ್ಮ ಶಿಕ್ಷಣ ಮುಖ್ಯವಾಗಿದೆ. ಮನುಷ್ಯನಾಗಿ ಬದುಕಲು ಉತ್ತಮ ದಾರಿಯನ್ನು ಹುಡುಕಿಕೊಳ್ಳಬೇಕು ಎಂದರು.ಸತ್ಸಂಗ ಮೂಲಕ ಮನಸ್ಸನ್ನು ಗಟ್ಟಿ ಮಾಡಿಕೊಂಡವರು ಯಾವುದಕ್ಕೂ ಭಯಪಡಬೇಕಾಗಿಲ್ಲ. ಮನುಷ್ಯ ಪ್ರಪಂಚದೊಂದಿಗೆ ಬದುಕುವ ಅನಿವಾರ್ಯತೆಯಿದೆ. ಈ ಹಂತದಲ್ಲಿ ಮನುಷ್ಯ ತನ್ನ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಇದಕ್ಕಾಗಿ ಅಧ್ಯಾತ್ಮ, ಧರ್ಮಮಾರ್ಗ ಅನುಸರಿಸಬೇಕು ಎಂದರು.
ಆಧ್ಯಾತ್ಮಿಕ ವಿಕಾಸವಾಗಲು ಸಾಕಷ್ಟು ಸವಾಲುಗಳು, ಏರಿಳಿತ, ತಿರುವುಗಳು ಬರುತ್ತವೆ. ಅಂತಹ ಸವಾಲುಗಳನ್ನು ಎದುರಿಸಬೇಕು. ಆಧ್ಯಾತ್ಮಿಕ ಚಿಂತನೆಗಳ ಬಲದಿಂದ ಮೃಗದಂಥ ಮನಸನ್ನು ಮಾನವತ್ವ ಕಡೆ, ಮಾನವತ್ವದಿಂದ ದೈವತ್ವದೆಡೆಗೆ ಕೊಂಡೊಯ್ಯುವ ಸಾಮರ್ಥ್ಯ ಭಗವಂತ ಮನುಷ್ಯನಿಗೆ ಕರುಣಿಸಿದ್ದಾನೆ. ಧರ್ಮ ಎಂಬುದು ದೈವತ್ವ ಸಂಪಾದಿಸುವುದಾಗಿದೆ. ಧರ್ಮ ಎಂಬುದು ತತ್ವ, ಸದಾಚಾರ, ಬದುಕನ್ನು ಪರಿಪೂರ್ಣವಾಗಿಸುವುದಾಗಿದೆ ಎಂದರು.ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಅಧ್ಯಾತ್ಮ ಪ್ರವಚನದಿಂದ ಆತ್ಮ ಮತ್ತು ಅಂತರಂಗ ಶುದ್ಧವಾಗುವುದು. ಮನುಷ್ಯನಾಗಿ ಬದುಕಲು ಉತ್ತಮ ದಾರಿಯನ್ನು ಹುಡುಕಿಕೊಳ್ಳಬೇಕು. ಧಾರ್ಮಿಕ ನಡೆ, ನುಡಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಮನುಷ್ಯ ಜೀವನ ಸಾರ್ಥಕ ಹೊಂದಲು ಸದಾ ಸತ್ಸಂಗಿಯಾಗಬೇಕು. ಪರೋಪಕಾರ, ದಾನ, ಧರ್ಮಾದಿ ಕಾರ್ಯಗಳಲ್ಲಿ ತೊಡಗಬೇಕು. ನಿರಂತರ ಕಾಯಕ, ಆತ್ಮ, ಮನಸ್ಸು ಶುದ್ಧಿ ಪಡೆಯಬೇಕು. ಈ ಮೂಲಕ ಶರಣ, ಸಂತರ, ದಾರ್ಶನಿಕರು, ಮಹನೀಯರ, ಸದ್ಗುರುಗಳ ಹಿತ ನುಡಿ, ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಧ್ಯಾತ್ಮ ಚಿಂತನ, ಮಂಥನ, ಪ್ರವಚನಗಳಲ್ಲಿ ಪಾಲ್ಗೊಂಡು ಸದ್ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಶಿವಾನಂದ ಮಠದ ಶ್ರವಣಕುಮಾರ ಸ್ವಾಮೀಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.