ಕನ್ನಡಪ್ರಭ ವಾರ್ತೆ ಕುಂದಾಪುರ

ದಕ್ಷಿಣ ಕನ್ನಡದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ದುಃಖ ಇದೆ. ಇಲ್ಲಿ ಸಾಮಾಜಿಕ ಸಾಮರಸ್ಯ ಹೆಚ್ಚಾಗಬೇಕು ಎನ್ನುವ ಕಾಳಜಿ ಇದೆ. ಮಾನವೀಯತೆ ಮೇಲೆ ಸಮಾಜ ಕಟ್ಟಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.ನಗರದ ಹೊರವಲಯದ ಹಂಗಳೂರಿನ ಯುನಿಟಿ ಹಾಲ್‌ನಲ್ಲಿ ಭಾನುವಾರ ಸಹಬಾಳ್ವೆ ಕುಂದಾಪುರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಬರೆದ ಕರಾವಳಿ ಚರಿತ್ರೆಯಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.ವಾಟ್ಸ್ ಆ್ಯಪ್ ಯುನಿವರ್ಸಿಟಿಯ ಪ್ರಭಾವ ವಿದ್ಯಾವಂತರನ್ನು ಬಿಟ್ಟಿಲ್ಲ. ಸ್ವಾತಂತ್ರ್ಯ ನಂತರ ಸಾಮರಸ್ಯ ಕೆಡಿಸುವ ಎಷ್ಟೋ ಘಟನೆಗಳು ಆಕಸ್ಮಿಕವಲ್ಲ, ಹೆಚ್ಚಿನವು ಯೋಜಿತ ರೀತಿಯದ್ದು. ವ್ಯಕ್ತಿ ಹಾಗೂ ಸಿದ್ಧಾಂತಗಳನ್ನು ವಿಮರ್ಶೆ ಮಾಡದೆ ಒಪ್ಪಬಾರದು. ಕಟ್ಟು ಕಥೆಗಳನ್ನು ಕಟ್ಟಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸಗಳು ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಕಿಮ್ಮನೆ ಕಳವಳ ವ್ಯಕ್ತಪಡಿಸಿದರು.

ಮಹಿಳಾ ಮಸೂದೆ ನಿಜ ಉದ್ದೇಶವೇನು: ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ದೇಶದಲ್ಲಿ ಚುನಾವಣೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಹಿಳಾ ಮಸೂದೆಯನ್ನು ತಂದಿರುವ ನಿಜ ಉದ್ದೇಶದ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು. ಸಮಾಜಕ್ಕೆ ನೈಜ ಇತಿಹಾಸ ತಿಳಿಸುವ ಕೆಲಸಗಳು ನಡೆಯಬೇಕು ಎಂದರು.ಬೇರೆಯವರು ಹೇಳಿದ ಸುಳ್ಳು ಸಂಗತಿಗಳೇ ಸತ್ಯವಾಗುತ್ತಿದೆ. ಓದುವ ಅಭ್ಯಾಸ ಹೆಚ್ಚಾಗಬೇಕು. ವಿದ್ಯೆ ಕಲಿತವರೆಲ್ಲ ಜ್ಞಾನವಂತರಲ್ಲ, ಜ್ಞಾನವಂತರೆಲ್ಲ ವಿದ್ಯಾವಂತರೂ ಅಲ್ಲ. ಪುಸ್ತಕವನ್ನು ಓದುವ ಜೊತೆ ಇತರರೊಂದಿಗೆ ಪುಸ್ತಕದಲ್ಲಿನ ಒಳ್ಳೆಯ ಅಂಶಗಳ ಬಗ್ಗೆ ಚರ್ಚೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ರಾಜಕೀಯದ ದುರುದ್ದೇಶಕ್ಕಾಗಿ ವೈಯಕ್ತಿಕ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬಾರದು ಎಂದರು.ಪತ್ರಕರ್ತ ನವೀನ್ ಸೂರಿಂಜೆ ಕೃತಿ ಪರಿಚಯ ಮಾಡಿದರು.ಸಹಬಾಳ್ವೆ ಕುಂದಾಪುರ ಅಧ್ಯಕ್ಷ ರಾಮಕೃಷ್ಣ ಹೇರ್ಳೆ ಎ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಬಾಳ್ವೆ ಸಂಘಟನೆ ಅಧ್ಯಕ್ಷ ಪ್ರೊ.ಫಣಿರಾಜ್, ಜಿಲ್ಲಾ ಮುಸ್ಲಿಂ ಒಕ್ಕೂಟದ ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ದಸ್ತಗಿರಿ ಕಂಡ್ಲೂರು ಇದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ ಸ್ವಾಗತಿಸಿ, ನಿರೂಪಿಸಿದರು. ಆಶಾ ಕರ್ವೆಲ್ಲೋ ವಂದಿಸಿದರು.