ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ವಿದ್ಯೆ ಇದ್ದರೆ ಧನ, ಕೀರ್ತಿ, ಸಮಾಧಾನ, ಶಾಂತಿ, ನೆಮ್ಮದಿ ಎಲ್ಲವೂ ಪ್ರಾಪ್ತಿಯಾಗುತ್ತದೆ. ವಿದ್ಯಾಹೀನರಾದರೇ ಜೀವನವೇ ವ್ಯರ್ಥವಾಗುತ್ತದೆ. ಹೀಗಾಗಿ ಜೀವನ ಸಾರ್ಥಕವಾಗಬೇಕಾದರೆ ವಿದ್ಯೆ ಪ್ರತಿಯೊಬ್ಬರಿಗೂ ಬಹುಮುಖ್ಯವಾಗಿದೆ ಎಂದು ಸುಕ್ಷೇತ್ರ ಇಂಚಲದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮಿಜಿ ಹೇಳಿದರು.ಇಲ್ಲಿಗೆ ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ಜರುಗಿದ ಡಾ.ಶಿವಾನಂದ ಭಾರತಿ ಸ್ವಾಮಿಜಿ ಅವರ 85ನೇ ವರ್ಷದ ವರ್ಧಂತಿ ಮಹೋತ್ಸವ, ಶ್ರೀಗಳ 55ನೇ ವರ್ಷದ ಪೀಠಾರೋಹಣ ಹಾಗೂ 55ನೇ ವರ್ಷದ ಅಖಿಲ ಭಾರತ ವೇದಾಂತ ಪರಿಷತ, ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ನಿಮಿತ್ಯ ಜರುಗಿದ ಸುವರ್ಣ ಭಾರತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನಿಗೆ ಬೇಕಾಗಿದ್ದು ಶಾಂತಿ ಸಮಾಧಾನ. ಅದು ಕೇವಲ ವಿದ್ಯೆಯಿಂದ ಮಾತ್ರ ಪ್ರಾಪ್ತಿಯಾಗುತ್ತದೆ ಎಂದರು.
ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಲ್ಲಿ ಮಠಾಧೀಶರ ಪಾತ್ರ ಹಿರಿದಾಗಿದೆ. ಅದರಲ್ಲಿ ಬೆಳಗಾವಿ ಜಿಲ್ಲೆಯ ಮಠಾಧೀಶರು ಗ್ರಾಮೀಣ ಭಾಗದ ಬಡ ಜನತೆಯ ಶಿಕ್ಷಣ ಅರಿವು ಕುರಿತು ಮನಗಂಡು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಪುಟ್ಟ ಹಳ್ಳಿ ಇಂಚಲ ಗ್ರಾಮದಲ್ಲಿ ಶಿಕ್ಷಣದಿಂದ ವಂಚಿತವಾಗಿದ್ದನ್ನು ಮನಗಂಡು ಶ್ರೀಗಳು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುತ್ತಿರುವ ಕಾರ್ಯ ಅವಿಸ್ಮರಣಿಯ. ಶ್ರೀಮಠದಲ್ಲಿ ನಿತ್ಯ ದಾಸೋಹ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇವರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ, ಲೆಫ್ಟಿನೆಂಟ್ ಕರ್ನಲ್ ಸಿದ್ದರಾಮ ಜಂಬಗಿ, ಅಂಚೆ ಇಲಾಖೆ ಅಧೀಕ್ಷಕ ವಿಜಯ ಆದೋನಿ ಮಾತನಾಡಿದರು. ಹಳೇ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆ ಕುರಿತು ತಮ್ಮ ಮನದಾಳದ ಮಾತುಗಳನ್ನು ಮಾರ್ಮಿಕವಾಗಿ ವಿವರಿಸಿದರು. ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಮಲ್ಲಾಪುರ ಗಾಳೇಶ್ವರಮಠದ ಚಿದಾನಂದ ಸ್ವಾಮೀಜಿ, ಹುಬ್ಬಳ್ಳಿ ಜಡಿಮಠದ ರಾಮಾನಂದ ಸ್ವಾಮೀಜಿ, ಗಣಪತಿ ಮಹಾರಾಜರು, ಸಚ್ಚಿದಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ, ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ,ಉದ್ಯಮಿ ವಿಜಯ ಮೆಟಗುಡ್ಡ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಡಾ.ಬಿ.ಎಸ್.ಮಹಾಂತಶೆಟ್ಟಿ, ಶಿವಾನಂದ ಬೆಳಗಾವಿ, ನಾಗಪ್ಪ ಮೇಟಿ, ಮಾಜಿ ಅಧ್ಯಕ್ಷ ಡಿ.ಬಿ.ಮಲ್ಲೂರ, ಎಸ್.ಎಂ.ರಾಹುತನವರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ, ಎ.ಎನ್ .ಪ್ಯಾಟಿ, ಬಳಿಗಾರ ಹಾಗೂ ಮುಂತಾದವರು ಇದ್ದರು.
ಇದೇ ವೇಳೆ ಭಾರತೀಯ ಅಂಚೆ ಇಲಾಖೆಯಿಂದ ಸುವರ್ಣ ಮಹೋತ್ಸವ ಅಂಚೆ ಲಕೋಟೆ, ಸದ್ಗುರು ದರ್ಶನ ಗ್ರಂಥವನ್ನು ಶ್ರೀಗಳು, ಗಣ್ಯಮಾನ್ಯರು ಬಿಡುಗಡೆಗೊಳಿಸಿದರು.ಇದಕ್ಕೂ ಮುಂಚೆ ಶಿವಯೋಗೀಶ್ವರ ಗ್ರಾಮೀಣ ಆರ್ಯುವೇದ ಮಹಾವಿದ್ಯಾಲಯದಲ್ಲಿರುವ ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಸಿ, ರಕ್ತದಾನ ಶಿಬಿರ, ನೇತ್ರ ಚಿಕಿತ್ಸಾ ಶಿಬಿರಗಳಿಗೆ ಚಾಲನೆ ನೀಡಿದರು. ನೂರಾರು ಯುವಕರು, ವಿದ್ಯಾರ್ಥಿಗಳು ಇದೆವೇಳೆ ರಕ್ತದಾನ ಮಾಡಿದರು.
ನಂತರ ಶ್ರೀಗಳನ್ನು ಎಲ್ಲ ಅಂಗ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ಬೆಳ್ಳಿ ಸಾರೋಟಿನಲ್ಲಿ ಭವ್ಯ ಮೆರವಣಿಗೆ ಮೂಲಕ ಶ್ರೀಗಳನ್ನು ವೇದಿಕೆಗೆ ಕರೆತರಲಾಯಿತು.ಇದೆ ವೇಳೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನಕ್ಕೆ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು. ಎಸ್.ಎಸ್.ಮೆಟಗಟ್ಟಿ ಸ್ವಾಗತಿಸಿದರು, ಮಹೇಶ ಹಾವೇರಿ ನಿರೂಪಿಸಿದರು, ಎಸ್.ಡಿ.ಗಂಗಣ್ಣವರ ವಂದಿಸಿದರು. ಶ್ರೀಗಳು ಹುಟ್ಟು ಹಾಕಿರುವ ಶಿಕ್ಷಣ ಸಂಸ್ಥೆಯ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.