ಬೆಂಗಳೂರು: ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಅಪರೂಪದ ಹಾಗೂ ಅಪಾಯಕಾರಿ ''ಇನ್‌ಫೆಂಟೈಲ್ ಫೈಬ್ರೊಸಾರ್ಕೋಮಾ'' ಕ್ಯಾನ್ಸರ್‌ನಿಂದ ಬಳಲುತ್ತಿದ್ದ 28 ದಿನದ ಹಸುಗೂಸೊಂದಕ್ಕೆ ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮರುಜೀವ ನೀಡಿದೆ. ಕೈ ಕತ್ತರಿಸುವುದೇ ಅಂತಿಮ ಮಾರ್ಗ ಎಂದು ಇತರ ಆಸ್ಪತ್ರೆಗಳು ಕೈಚೆಲ್ಲಿದ್ದ ಪ್ರಕರಣದಲ್ಲಿ, ಎಚ್‌ಸಿಜಿ ಆಸ್ಪತ್ರೆಯ 14-16 ಸೂಪರ್-ಸ್ಪೆಷಲಿಸ್ಟ್ ವೈದ್ಯರ ತಂಡವು ಸುಧಾರಿತ ತಂತ್ರಜ್ಞಾನದ ನೆರವಿನೊಂದಿಗೆ ಮಗುವಿನ ಜೀವ ಹಾಗೂ ಕೈ ಎರಡನ್ನೂ ಉಳಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು 30 ರಿಂದ 35 ಲಕ್ಷ ರೂಪಾಯಿ ವೆಚ್ಚದ ಈ ಅತ್ಯಾಧುನಿಕ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ ಪರದಾಡುತ್ತಿದ್ದ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ, ಆಸ್ಪತ್ರೆ, ದಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಒಗ್ಗೂಡಿ ಆರ್ಥಿಕ ನೆರವು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಬೇರೊಂದು ಆಸ್ಪತ್ರೆಯಲ್ಲಿ ಜನಿಸಿದ ಈ ಹೆಣ್ಣು ಮಗುವಿನ ಬಲ ಮುಂಗೈನಲ್ಲಿ ಆರಂಭದಲ್ಲಿ ಸಣ್ಣ ಊತವೊಂದಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದು ಬರೋಬ್ಬರಿ 11.3 x 9.8 ಸೆಂ.ಮೀ ಗಾತ್ರದ ಬೃಹತ್ ಟ್ಯೂಮರ್ ಆಗಿ ಬೆಳೆದುಬಿಟ್ಟಿತ್ತು. ಎಚ್‌ಸಿಜಿಗೆ ದಾಖಲಾದಾಗ ಮಗು ತೀವ್ರ ರಕ್ತಹೀನತೆಯಿಂದ ಬಳಲುತ್ತಿತ್ತು ಹಾಗೂ ವೇಗವಾಗಿ ಬೆಳೆಯುತ್ತಿದ್ದ ಟ್ಯೂಮರ್‌ನಿಂದಾಗಿ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಎಚ್‌ಸಿಜಿ ಆಸ್ಪತ್ರೆಯ ಆರ್ಥೋಪೆಡಿಕ್ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರಮೋದ್ ಎಸ್. ಚಿಂದರ್, ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ಸುನಿಲ್ ಕುಮಾರ್ ಹೆಚ್.ಆರ್ ಮತ್ತು ಪ್ಲಾಸ್ಟಿಕ್ ಸರ್ಜರಿ ತಂಡವು ಮಗುವಿನ ತಪಾಸಣೆ ನಡೆಸಿತು.ಟ್ಯೂಮರ್ ಪ್ರಮುಖ ರಕ್ತನಾಳ ಮತ್ತು ನರಗಳನ್ನು ಸಂಪೂರ್ಣವಾಗಿ ಆವರಿಸಿದ್ದರಿಂದ ಶಸ್ತ್ರಚಿಕಿತ್ಸೆ ಅತ್ಯಂತ ಹೈ-ರಿಸ್ಕ್ ಆಗಿತ್ತು. ಮಗುವಿಗೆ ಜೀನೋಮಿಕ್ ಟೆಸ್ಟಿಂಗ್ ನಡೆಸಿದಾಗ, ಲಕ್ಷದಲ್ಲಿ ಕೇವಲ 0.3 ಜನರಲ್ಲಿ ಕಾಣಿಸಿಕೊಳ್ಳುವ ''NTRK ಜೀನ್ ಫ್ಯೂಷನ್'' ಎಂಬ ಬದಲಾವಣೆ ಇರುವುದು ಪತ್ತೆಯಾಯಿತು. ಇದೇ ಕಾರಣದಿಂದ ಕ್ಯಾನ್ಸರ್ ಇಷ್ಟು ವೇಗವಾಗಿ ಬೆಳೆಯುತ್ತಿತ್ತು. ಈ ಸಂಕೀರ್ಣ ಸ್ಥಿತಿಯನ್ನು ನಿಭಾಯಿಸಲು ಇಟಲಿಯ ''ರಿಝೋಲಿ ಆರ್ಥೋಪೆಡಿಕ್ ಇನ್‌ಸ್ಟಿಟ್ಯೂಟ್''ನ ಖ್ಯಾತ ತಜ್ಞರಾದ ಡಾ. ಮಾರ್ಕೊ ಮ್ಯಾನ್‌ಫ್ರಿನಿ ಮತ್ತು ಡಾ. ಲಾರಾ ಕ್ಯಾಂಪನಾಚಿ ಅವರೊಂದಿಗೆ ಚರ್ಚಿಸಿ, ಮಗುವಿನ ಕೈ ಉಳಿಸುವ ಬಹು-ಹಂತದ ಶಸ್ತ್ರಚಿಕಿತ್ಸೆಯ ಯೋಜನೆಯನ್ನು ದೃಢಪಡಿಸಿಕೊಳ್ಳಲಾಯಿತು.ಮಗುವಿನ ದೇಹದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಒಂದು ವಾರದ ಮಲ್ಟಿ-ಸ್ಟೇಜ್ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಮೊದಲ ಹಂತವಾಗಿ ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಡಾ. ಇಂದು ಶೇಖರ್ ಅವರು ಮೈಕ್ರೋ-ಕ್ಯಾತಿಟರ್‌ಗಳ ಮೂಲಕ ''ಸೂಪರ್-ಸೆಲೆಕ್ಟಿವ್ ಎಂಬೋಲೈಸೇಶನ್'' ಮಾಡಿ ಟ್ಯೂಮರ್‌ಗೆ ರಕ್ತ ಪೂರೈಕೆಯಾಗುವುದನ್ನು ಯಶಸ್ವಿಯಾಗಿ ತಡೆದರು. ಇದು ಮುಂದಿನ ಹಂತದಲ್ಲಿ ಭಾರಿ ರಕ್ತಸ್ರಾವದ ಅಪಾಯವನ್ನು ತಪ್ಪಿಸಿತು. ಇಷ್ಟು ಸಣ್ಣ ಮಗುವಿಗೆ ಅನಸ್ತೇಷಿಯಾ ನೀಡುವುದು ಬಹುದೊಡ್ಡ ಸವಾಲಾಗಿದ್ದು, ಡಾ. ಸುನಿಲ್ ಕುಮಾರ್ ಹೆಚ್.ಆರ್ ಅವರು ಮೈಕ್ರೋ-ಡೋಸಿಂಗ್, ಥರ್ಮೊರೆಗ್ಯುಲೇಶನ್ ಹಾಗೂ ನಿರಂತರ ಹೀಮೋಡೈನಾಮಿಕ್ ಮಾನಿಟರಿಂಗ್ ಒಳಗೊಂಡ ''ನಿಯೋನೇಟಲ್ ಅನಸ್ತೇಷಿಯಾ ಪ್ರೋಟೋಕಾಲ್'' ಅನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದರು. ತದನಂತರ ಡಾ. ಪ್ರಮೋದ್ ಚಿಂದರ್ ನೇತೃತ್ವದಲ್ಲಿ 7–8 ಗಂಟೆಗಳ ಕಾಲ ''ಹೈ-ಪ್ರಿಸಿಷನ್ ಟ್ಯೂಮರ್ ರಿಸೆಕ್ಷನ್'' ನಡೆಯಿತು. ''ದಿ ಪರ್ಪಲ್ ಸ್ಪಾರ್ಕ್ ಬಯೋಎಂಜಿನಿಯರಿಂಗ್'' ರೂಪಿಸಿದ 3D-ಪ್ರಿಂಟೆಡ್ ಮಾಡೆಲ್‌ಗಳು ಹಾಗೂ ಡಿಜಿಟಲ್ ಟ್ವಿನ್ ತಂತ್ರಜ್ಞಾನದ ಮೂಲಕ MRI ಮತ್ತು CT ಸ್ಕ್ಯಾನ್ ಆಧರಿಸಿ 3D ವರ್ಚುವಲ್ ಇಮೇಜ್ ರೂಪಿಸಲಾಗಿತ್ತು. ಮೈಕ್ರೋ-ಇನ್‌ಸ್ಟ್ರುಮೆಂಟ್‌ಗಳನ್ನು ಬಳಸಿ ಕೀಲು ಮತ್ತು ನರಗಳಿಗೆ ಯಾವುದೇ ಹಾನಿಯಾಗದಂತೆ ಟ್ಯೂಮರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಶಸ್ತ್ರಚಿಕಿತ್ಸೆಯ ಎರಡು ದಿನಗಳ ಬಳಿಕ ಪ್ಲಾಸ್ಟಿಕ್ ಹಾಗೂ ರಿಕನ್‌ಸ್ಟ್ರಕ್ಟಿವ್ ಸರ್ಜರಿ ತಂಡವು, ಮಗುವಿನ ತೊಡೆಯ ಭಾಗದಿಂದ ಸಣ್ಣ ಫ್ಲ್ಯಾಪ್ ತೆಗೆದು ಮುಂಗೈಗೆ ಕಸಿ ಮಾಡಿತು. ಜಾಗತಿಕವಾಗಿ ಅತಿ ಕಿರಿಯ ವಯಸ್ಸಿನಲ್ಲಿ ನಡೆದ ''ಮೈಕ್ರೋವಾಸ್ಕ್ಯುಲರ್ ಫ್ರೀ ಫ್ಲ್ಯಾಪ್ ಸರ್ಜರಿ'' ಇದಾಗಿದ್ದು, ಮೈಕ್ರೋವಾಸ್ಕ್ಯುಲರ್ ಅನಾಸ್ಟೊಮೋಸಿಸ್ ಮೂಲಕ ರಕ್ತಸಂಚಾರವನ್ನು ಯಶಸ್ವಿಯಾಗಿ ಪುನಾರಂಭಿಸಲಾಯಿತು.ಈ ಅತ್ಯಾಧುನಿಕ ಚಿಕಿತ್ಸೆಗೆ ಸುಮಾರು 30–35 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಸುಮಾರು 300 ರಿಂದ 400 ದಾನಿಗಳು ಆರ್ಥಿಕವಾಗಿ ಸ್ಪಂದಿಸಿದ್ದಾರೆ. ದಿ ಯೆಲ್ಲೊ ರಿಬ್ಬನ್, ಎಚ್‌ಸಿಜಿ ಫೌಂಡೇಶನ್, ಆರೋಕೇರ್ ಫೌಂಡೇಶನ್, ಮಿಲಾಪ್ ಸಂಸ್ಥೆಗಳು ಕೈಜೋಡಿಸಿದರೆ, ಹತ್ತು ವಿದ್ಯಾರ್ಥಿಗಳು ತಮ್ಮ ಪಾಕೆಟ್ ಮನಿ ಉಳಿತಾಯದಿಂದ 20,000 ರೂಪಾಯಿ ದೇಣಿಗೆ ನೀಡಿದ್ದಾರೆ. ಡಾ. ಬಿ.ಎಸ್. ಅಜಯ್‌ಕುಮಾರ್ ಮತ್ತು ಕುಟುಂಬ, ಎಚ್‌ಸಿಜಿ ಫೌಂಡೇಶನ್, ಮನಿಶಾ ಕುಮಾರ್, ಆರೋಕೇರ್ ಮೂಲಕ ಡಾ. ಪ್ರಮೋದ್ ಚಿಂದರ್, ರತ್ನಮ್ಮ ಶೇಖರಪ್ಪ, ಗೀತಾ ಸ್ವಾಮಿ ಹಾಗೂ ಡಾ. ಕೃತಿಕಾ ಮುರುಗನ್ ಅವರ ವೈಯಕ್ತಿಕ ಕೊಡುಗೆಗಳು ಮಗುವಿನ ಚಿಕಿತ್ಸೆಯ ಆರ್ಥಿಕ ಹೊರೆಯನ್ನು ನೀಗಿಸಿದವು. ಶಸ್ತ್ರಚಿಕಿತ್ಸೆಯ ಬಳಿಕ, ಕ್ಯಾನ್ಸರ್ ಮರುಕಳಿಸದಂತೆ ತಡೆಯಲು ಮಗುವಿಗೆ ಸುರಕ್ಷಿತವಾದ ''ಎಂಟ್ರೆಕ್ಟಿನಿಬ್'' ಔಷಧಿಯನ್ನು ನೀಡಲಾಯಿತು. ಇದೀಗ ಒಂದೂವರೆ ವರ್ಷ ಕಳೆದಿದ್ದು, ಮಗು ಸಂಪೂರ್ಣವಾಗಿ ಗುಣಮುಖವಾಗಿದೆ. ಕ್ಯಾನ್ಸರ್ ಮತ್ತೆ ಕಾಣಿಸಿಕೊಂಡಿಲ್ಲ ಹಾಗೂ ಕೈಯ ಕಾರ್ಯಕ್ಷಮತೆ ಮರಳಿದ್ದು, ಇತರ ಸಾಮಾನ್ಯ ಮಕ್ಕಳಂತೆಯೇ ಮಗು ಆರೋಗ್ಯವಾಗಿ ಬೆಳೆಯುತ್ತಿದೆ.ಚಿಕಿತ್ಸೆಯ ಕುರಿತು ಮಾತನಾಡಿದ ಎಚ್‌ಸಿಜಿ ಆರ್ಥೋಪೆಡಿಕ್ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರಮೋದ್ ಎಸ್. ಚಿಂದರ್, 28 ದಿನದ ಮಗುವಿನ ಕೈಯನ್ನು ಆವರಿಸಿದ್ದ ಇನ್‌ಫೆಂಟೈಲ್ ಫೈಬ್ರೊಸಾರ್ಕೋಮಾಕ್ಕೆ ಚಿಕಿತ್ಸೆ ನೀಡುವುದು ಜೀವದ ಜೊತೆಗಿನ ಹೋರಾಟವೇ ಆಗಿತ್ತು ಎಂದಿದ್ದಾರೆ. ತ್ವರಿತವಾಗಿ NTRK ಜೀನ್ ಫ್ಯೂಷನ್ ಪತ್ತೆಯಾಗಿದ್ದು ಹಾಗೂ ಡಾ. ಸುನಿಲ್ ಅವರ ಅರಿವಳಿಕೆ ನಿರ್ವಹಣೆ ಈ ಹೈ-ರಿಸ್ಕ್ ಸರ್ಜರಿಯನ್ನು ಯಶಸ್ವಿಗೊಳಿಸಿದವು. ಇದು ವೈದ್ಯಕೀಯ ಆವಿಷ್ಕಾರದ ಗೆಲುವು ಎಂದು ಬಣ್ಣಿಸಿದ ಅವರು, ಇಂತಹ ಅಪರೂಪದ ಕ್ಯಾನ್ಸರ್ ಕಾಣಿಸಿಕೊಂಡಾಗ ಪೋಷಕರು ಗಾಬರಿಯಾಗದೆ, ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಕೇಂದ್ರಗಳಲ್ಲೇ ಚಿಕಿತ್ಸೆ ಪಡೆಯಬೇಕು, ಸರಿಯಾದ ಪರಿಣತ ಚಿಕಿತ್ಸೆಯಿಂದ ಅಂಗ ಕತ್ತರಿಸುವುದನ್ನು ತಪ್ಪಿಸಬಹುದು ಮತ್ತು ಆರ್ಥಿಕ ಕಾರಣಗಳಿಂದಾಗಿ ಚಿಕಿತ್ಸೆ ವಿಳಂಬವಾಗಬಾರದು ಎಂದು ಸಲಹೆ ನೀಡಿದರು.ಎಚ್‌ಸಿಜಿ ಆಸ್ಪತ್ರೆಯ (ಕರ್ನಾಟಕ) ಸಿಒಒ ಮನಿಶಾ ಕುಮಾರ್ ಅವರು ಪ್ರತಿಕ್ರಿಯಿಸಿ, ಈ ಅಸಾಧಾರಣ ಪ್ರಕರಣವು ಬಹು-ವಿಭಾಗೀಯ ಪರಿಣತಿ ಮತ್ತು ಸುಧಾರಿತ ತಂತ್ರಜ್ಞಾನಕ್ಕೆ ಕನ್ನಡಿಯಾಗಿದೆ. ರೋಗಿಯ ವಯಸ್ಸು ಅಥವಾ ಆರ್ಥಿಕ ಸ್ಥಿತಿ ಏನೇ ಇರಲಿ, ವಿಶ್ವದರ್ಜೆಯ ಚಿಕಿತ್ಸೆ ನೀಡಲು ಎಚ್‌ಸಿಜಿ ಬದ್ಧವಾಗಿದೆ. ನಮ್ಮ ಸಿಬ್ಬಂದಿ, ಫೌಂಡೇಶನ್‌ಗಳು ಹಾಗೂ ಸಾರ್ವಜನಿಕರ ಬೆಂಬಲದಿಂದಾಗಿ ಆರ್ಥಿಕ ಕೊರತೆಯು ಈ ಮಗುವಿನ ಚಿಕಿತ್ಸೆಗೆ ಅಡ್ಡಿಯಾಗಲಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.ಗುಣಮುಖವಾದ ಮಗುವಿನ ಪೋಷಕರು ತಮ್ಮ ಸಂತಸ ಹಂಚಿಕೊಂಡು, ಕೈ ಕತ್ತರಿಸಬೇಕು ಎಂದು ಹೇಳಿದಾಗ ನಾವು ಸಂಪೂರ್ಣವಾಗಿ ಹತಾಶರಾಗಿದ್ದೆವು. ಭರವಸೆ ಕಳೆದುಕೊಂಡಿದ್ದ ನಮಗೆ ಎಚ್‌ಸಿಜಿ ವೈದ್ಯರು ಆಶಾಕಿರಣವಾದರು. ಇಂದು ನಮ್ಮ ಮಗಳು ಬೆರಳುಗಳನ್ನು ಆಡಿಸುತ್ತಾ, ಇತರ ಮಕ್ಕಳಂತೆ ಬೆಳೆಯುತ್ತಿರುವುದನ್ನು ನೋಡುವುದೇ ನಮ್ಮ ಪಾಲಿನ ದೊಡ್ಡ ಪವಾಡ. ನಮಗೆ ನೆರವಾದ ವೈದ್ಯರಿಗೆ ಮತ್ತು ಪ್ರತಿಯೊಬ್ಬರಿಗೂ ನಾವು ಸದಾ ಋಣಿಯಾಗಿದ್ದೇವೆ ಎಂದು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು.
28 ದಿನದ ಹಸುಗೂಸಿಗೆ ಜೀವರಕ್ಷಕ ಶಸ್ತ್ರಚಿಕಿತ್ಸೆ: ಅಪರೂಪದ ಫೈಬ್ರೊಸಾರ್ಕೋಮಾ ಟ್ಯೂಮರ್ ನಿವಾರಣೆ
ಚಿಕಿತ್ಸಾ ವೆಚ್ಚ ಭರಿಸಲಾಗದೆ ಪರದಾಡುತ್ತಿದ್ದ ಕುಟುಂಬಕ್ಕೆ ಆಸ್ಪತ್ರೆ, ಸ್ನೇಹಿತರು ಹಾಗೂ ಹಿತೈಷಿಗಳ ನೆರವಿನಿಂದ 30-35 ಲಕ್ಷ ರೂ.ಗಳ ಆರ್ಥಿಕ ಸ್ಪಂದನೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.