ಇಒ ಅಪೂರ್ವ.ಎ.ಕುಲಕರ್ಣಿ ಹಾರೋಹಳ್ಳಿಗೆ ಬಂದಾಗಿನಿಂದ ಹೆಚ್ಚು ಆದಾಯ ಹೊಂದಿರುವ ಗ್ರಾಮ ಪಂಚಾಯಿತಿಗಳಿಗೆ ಇವರೇ ಆಡಳಿತ ಅಧಿಕಾರಿಯಾಗಿದ್ದಾರೆ. ನಂತರ ಹೆಚ್ಚು ಅದಾಯವುಳ್ಳ ಗ್ರಾಮ ಪಂಚಾಯಿತಿಗಳಿಗೆ ತಮಗೆ ಬೇಕಾದ ಪಿಡಿಒ ಗಳನ್ನು ನೇಮಕ ಮಾಡಿದ್ದಾರೆ. ಇದನ್ನು ಸಹ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ತಾಲೂಕು ಪಂಚಾಯಿತಿ ಅವ್ಯವಹಾರಗಳು ಮತ್ತು ಭ್ರಷ್ಟಾಚಾರ, ಆಡಳಿತ ವೈಫಲ್ಯವನ್ನು ವಿರೋಧಿಸಿ ಸಮತಾ ಸೈನಿಕ ದಳ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಂಚಾಯಿತಿ ಕಚೇರಿಯ ಎದುರು ತಮಟೆ ಚಳವಳಿ ನಡೆಸಿದರು.

ಪಟ್ಟಣದ ವಿವೇಕಾನಂದ ಚಿತ್ರಮಂದಿರದ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಎದುರು ಜಮಾವಣೆಗೊಂಡ ನೂರಾರು ಮಂದಿ ಪ್ರತಿಭಟನಾಕಾರರು ಅಧಿಕಾರಿಗಳ ಆಡಳಿತ ವೈಫಲ್ಯವನ್ನು ಖಂಡಿಸಿ ತಾಪಂ ಅಧಿಕಾರಿ ಅಪೂರ್ವ.ಎ.ಕುಲಕರ್ಣಿ ಹಾಗೂ ಟಿ.ಹೊಸಹಳ್ಳಿ ಗ್ರಾಮಪಂಚಾಯಿತಿ ಕಾರ್ಯದರ್ಶಿ ಶಿವಪ್ರಸಾದ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯಿತಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ತಡೆದು ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುಳಾರವರ ಮೇಲೆ ವೈಯಕ್ತಿಕ ದ್ವೇಷದಿಂದ ಅವರನ್ನು ಬೇರೆಕಡೆ ವರ್ಗಾವಣೆ ಮಾಡುವ ಚಿತಾವಣೆಯನ್ನು ಖಂಡಿಸಿ ಪ್ರತಿಭಟನಾಕಾರರು ತಾಲೂಕು ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಹಾರೋಹಳ್ಳಿ ನೂತನ ತಾಲೂಕು ರಚನೆಯಾದಾಗಿನಿಂದ ಶಾಪಗ್ರಸ್ಥ ತಾಲೂಕ್ಕಾಗಿದೆ. ಇಲ್ಲಿನ ಎಲ್ಲಾ ತಾಲೂಕು ಕಚೇರಿಗಳು ರೈತ ಹಾಗೂ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಪ್ರಮುಖವಾಗಿ ನಮಗೆ ಜಿಲ್ಲಾಧಿಕಾರಿಯಾಗಿ ವಕ್ಕರಿಸಿರುವ ಯಶವಂತ್.ವಿ.ಗುರಿಕಾರ್ ಒಬ್ಬ ರಾಜಕೀಯ ಪಕ್ಷದ ಹಿಂಬಾಲಕನಂತೆ ಹಾಗೂ ಸರ್ವಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ತಾಲೂಕು ಪಂಚಾಯಿತಿ ಆಡಳಿತ ಸಮಪರ್ಕವಾಗಿಲ್ಲದ ಕಾರಣ ಗ್ರಾಮೀಣ ಪ್ರದೇಶದ ಜನರಿಗೆ ಅಭಿವೃದ್ಧಿ ಎನ್ನುವುದು ಕನಸಿನ ಮಾತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಟಿ.ಹೊಸಹಳ್ಳಿ ಗ್ರಾಪಂ ಪಿಡಿಒ ಮಂಜುಳಾ ವಿಶೇಷಚೇತನ ಮಹಿಳೆಯಾಗಿದ್ದು, ಅಲ್ಲಿನ ಕಾರ್ಯದರ್ಶಿಯ ಕರ್ಮಕಾಂಡವನ್ನು ಮುಚ್ಚಿಹಾಕಲು ಪಿಡಿಒಗೆ ಕಿರುಕುಳ ನೀಡಿ ಬೇರೆಡೆ ನಿಯೋಜನೆ ಮಾಡಲಾಗಿದೆ. ಇದರ ವಿರುದ್ಧ ಕೆ.ಎ.ಟಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಅದನ್ನು ಉಲ್ಲಂಘಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಇಲ್ಲಿನ ಗ್ರೇಡ್-1 ಕಾರ್ಯದರ್ಶಿ ಶಿವಪ್ರಸಾದ್, ಪ್ರಭಾರ ಪಿಡಿಒ ಆಡಳಿತ ಅವಧಿಯಲ್ಲಿ ಕುಡಿಯುವ ನೀರಿನ ಘಟಕಗ ನಿರ್ವಹಣೆಯ ₹25 ಲಕ್ಷ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡದೆ ವಂಚಿಸಿದ್ದಾರೆ. ಇವರ ಮೇಲಿರುವ ಹಾಗೂ ಈ ಪಂಚಾಯಿತಿಯಲ್ಲಿನ ನರೇಗಾ ಹಾಗೂ ಇತರೆ ಕಾಮಗಾರಿ ಮತ್ತು ಸವಲತ್ತುಗಳ ವಿತರಣೆಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಸಮಗ್ರ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇಒ ಅಪೂರ್ವ.ಎ.ಕುಲಕರ್ಣಿ ಹಾರೋಹಳ್ಳಿಗೆ ಬಂದಾಗಿನಿಂದ ಹೆಚ್ಚು ಆದಾಯ ಹೊಂದಿರುವ ಗ್ರಾಮ ಪಂಚಾಯಿತಿಗಳಿಗೆ ಇವರೇ ಆಡಳಿತ ಅಧಿಕಾರಿಯಾಗಿದ್ದಾರೆ. ನಂತರ ಹೆಚ್ಚು ಅದಾಯವುಳ್ಳ ಗ್ರಾಮ ಪಂಚಾಯಿತಿಗಳಿಗೆ ತಮಗೆ ಬೇಕಾದ ಪಿಡಿಒ ಗಳನ್ನು ನೇಮಕ ಮಾಡಿದ್ದಾರೆ. ಇದನ್ನು ಸಹ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವಿಶೇಷಚೇತನ ಪಿಡಿಒ ಮಂಜುಳಾರವರ ಮೇಲಿನ ಹಗೆತನವನ್ನು ಬಿಟ್ಟು ಕೂಡಲೇ ಅವರನ್ನು ಕರ್ತವ್ಯಕ್ಕೆ ನಿಯೋಜಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಸ್.ಎಸ್.ಡಿ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ, ರೈತ ಸಂಘಟನೆಯ ರಾಜ್ಯ ಸಲಹೆಗಾರ ಪ್ರಶಾಂತ್ ಹೊಸದುರ್ಗ, ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಪರಮೇಶ್, ನರೇಗ ಸಂಘಟನೆಯ ಅಧ್ಯಕ್ಷ ಹರೀಶ್, ಬಿಜೆಪಿ ಮುಖಂಡ ಚಂದ್ರು, ಬುಲೆಟ್ ಬಾಬು, ಎಂ.ಪಿ.ನಾರಾಯಣಸ್ವಾಮಿ, ಎಸ್.ಎಸ್.ಡಿ ಕಾಳರಾಜು, ಕನ್ನಡ ವೇದಿಕೆ ಮಂಜುನಾಥ್, ಸಿ.ವೆಂಕಟೇಶ್, ಮುತ್ತುರಾಜು, ಕುಮಾರ್, ಕಾಳಮುತ್ತಯ್ಯ, ರವಿ, ಅಶ್ವಿನಿ, ಗೌರಮ್ಮ, ಶಿವಮ್ಮ ಮತ್ತಿತರರು ಭಾಗವಹಿಸಿದ್ದರು.

ಹಿರಿಯ ಅಧಿಕಾರಿಗಳ ಆದೇಶಕ್ಕೆ ಸ್ಪಂದಿಸಿಲ್ಲ

ಟಿ.ಹೊಸಹಳ್ಳಿ ಗ್ರಾಮಪಂಚಾಯಿತಿ ಪಿಡಿಒ ಮಂಜುಳಾರವರು ಸಿಇಒ ನಿಯೋಜನೆ ಆದೇಶವನ್ನು ಧಿಕ್ಕರಿಸಿದ್ದಾರೆ. ಜೊತೆಗೆ ಸ್ಥಳೀಯ ಜನರ ದೂರುಗಳ ಹಿನ್ನೆಲೆ 5 ಬಾರಿ ನೋಟೀಸ್ ಜಾರಿ ನೀಡಿದ್ದರೂ ಉತ್ತರಿಸದೆ ಉದ್ಧಟತನ ತೋರಿದ್ದಾರೆ. ಆಡಳಿತದಲ್ಲಿ ಗೈರು ಹಾಜರಿಯಾಗಿದ್ದಾರೆ. ಜೊತೆಗೆ ಪ್ರಸ್ತುತ ನ್ಯಾಯಾಲಯದ ಆದೇಶದಂತೆ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

- ಅಪೂರ್ವ ಎ.ಕುಲಕರ್ಣಿ, ತಾಪಂ ಅಧಿಕಾರಿ, ಹಾರೋಹಳ್ಳಿ.