ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಹಲವು ವರ್ಷಗಳ ಸಂಸಾರ ನಡೆಸಿ ಎರಡು ಮಕ್ಕಳನ್ನು ಪತ್ನಿಯ ಕೈಗಿಟ್ಟ ಗಂಡನೋರ್ವ ನಾಪತ್ತೆಯಾಗಿ ಮಕ್ಕಳು ಹಾಗೂ ಪತ್ನಿಯನ್ನು ಅನಾಥರನ್ನಾಗಿಸುವ ಅಮಾನವೀಯ ಘಟನೆ ಲಿಂಗಸುಗೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.ಯುವತಿ ಮೂಲತಃ ಹಟ್ಟಿ ಚಿನ್ನದಗಣಿ ಪಟ್ಟಣದ ಅಮೃತ, ದರ್ಶನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದಳು. ಈ ವೇಳೆ ಅಂಗಡಿ ಮಾಲೀಕ ದರ್ಶನ ಹಾಗೂ ಅಮೃತ ನಡುವೆ ಪ್ರೀತಿಯಾಗಿದೆ. ಪೊಲೀಸರ ಮದ್ಯೆಸ್ಥಿಕೆಯಲ್ಲಿ ತಾಲೂಕಿನ ಗುರುಗುಂಟಾ ಅಮರೇಶ್ವರದಲ್ಲಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಅವರಿಗೆ ಎರಡು ಮಕ್ಕಳು ಇದ್ದಾರೆ.
ಇತ್ತಿಚೆಗೆ ಅಮೃತ ಹಾಗೂ ಮಕ್ಕಳನ್ನು ಪತಿ ದರ್ಶನ ತವರು ಮನೆಗೆ ಕಳಿಸಿ ನಾಪತ್ತೆಯಾಗಿದ್ದಾನೆ. 2 ವರ್ಷಗಳು ಕಳೆದರು ಪತಿ ಹಿಂದಿರುಗದೇ ಇರುವುದರಿಂದ ಅಮೃತ ಪತಿಗಾಗಿ ಹುಡುಕಾಡಿದ್ದಾಳೆ. ಆದರೆ ಪತಿ ಸಿಗದೇ ಇದ್ದಾಗ ಅದು ಗಂಡನ ಮನೆಯವರ ಕುತಂತ್ರ ಎಂದು ಅರಿತ ಅಮೃತ ಪತಿಗಾಗಿ ಲಿಂಗಸುಗೂರು ಪಟ್ಟಣದಲ್ಲಿ ಇರುವ ರಾಜೇಂದ್ರ ಜೈನ್ ಹಾರ್ಡ್‌ವೇರ್ ಅಂಗಡಿ ಮುಂದೆ ಮಕ್ಕಳ ಸಮೇತ ರಾತ್ರಿ ಧರಣಿ ಕುಳಿತಿದ್ದಾರೆ. ಸುದ್ದಿ ತಿಳಿದ ಲಿಂಗಸುಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಅಮೃತ ತನಗೆ ಗಂಡ ಬೇಕು ಎಂದು ಅಲವತ್ತುಕೊಂಡಿದ್ದಾರೆ.ದೂರು ನೀಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಲಿಂಗಸುಗೂರು ಪೊಲೀಸರು ಹೇಳಿದ್ದಾರೆ. ಆದರೆ ಪತ್ನಿ ಅಮೃತ ದೂರು ನೀಡಲು ಹಿಂದೇಟು ಹಾಕಿದ್ದಾರೆ.
