ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರನ್ನು ವಿಧಾನ ಪರಿಷತ್‌ನಲ್ಲಿ ಪ್ರತಿನಿಧಿಸುವ ಅವಕಾಶ ಉಡುಪಿ ಜಿಲ್ಲೆಗೆ ಕೈತಪ್ಪಿದೆ. ಬಿಜೆಪಿಯ ಅಭ್ಯರ್ಥಿಯಾಗಿ ದ.ಕ. ಜಿಲ್ಲೆಯ ಪುತ್ತೂರಿನ ಕಿಶೋರ್ ಕುಮಾರ್ ಅವರಿಗೆ ಟಿಕೆಟ್ ಲಭಿಸಿದೆ.ಇಲ್ಲಿನ ವಿಧಾನ ಪರಿಷತ್‌ಗೆ 2 ಸ್ಥಾನಗಳ ಪೈಕಿ ಒಂದರಲ್ಲಿ ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಇದ್ದರೆ, ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾದ ಇನ್ನೊಂದು ಸ್ಥಾನಕ್ಕೆ ಇದೀಗ ಚುನಾವಣೆ ನಡೆಯುತ್ತಿದೆ.
ಸಂಸದರಾಗಿರುವ ಕೋಟ ಅವರು 3 ಬಾರಿ ಸ್ಥಳಿಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಅನಾಯಾಸವಾಗಿ ಗೆದ್ದಿದ್ದರು. ಅವರು ಉಡುಪಿಯವರಾದ್ದರಿಂದ ಅವರ ಸ್ಥಾನಕ್ಕೆ ಉಡುಪಿಯವರಿಗೆ ಟಿಕೆಟ್ ನೀಡಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿತ್ತು.ಅದರಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿಯಲ್ಲಿ ಅನೇಕ ಬಾರಿ ಟಿಕೆಟ್ ತಪ್ಪಿಸಿಕೊಂಡಿರುವ ಉದಯಕುಮಾರ್ ಶೆಟ್ಟಿ ಮತ್ತು ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಉಡುಪಿ ಜಿಲ್ಲೆಯಿಂದ ರೇಸಿನಲ್ಲಿದ್ದರು. ಆದರೆ ಬಿಜೆಪಿ ವರಿಷ್ಠರು ದ.ಕ. ಜಿಲ್ಲೆಯ ಕಿಶೋರ್ ಕುಮಾರ್ ಅವರಿಗೆ ಟಿಕೆಟ್ ನೀಡಿದ್ದಾರೆ.
ಲಾಗಾಯ್ತಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಒಂದೊಂದು ಸ್ಥಾನಗಳನ್ನು ಕೊಟ್ಟುಕೊಳ್ಳುವ ಪದ್ಧತಿ ಇಲ್ಲಿದೆ. ಅದರಂತೆ ಒಂದು ಸ್ಥಾನದಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ದ.ಕ. ಜಿಲ್ಲೆಯವರಾದ್ದರಿಂದ, ಇನ್ನೊಂದು ಸ್ಥಾನಕ್ಕೆ ಬಿಜೆಪಿಯ ಕಿಶೋರ್ ಕುಮಾರ್ ಗೆದ್ದರೆ ಎರಡೂ ದ.ಕ. ಜಿಲ್ಲೆಯವರೇ ವಿಧಾನ ಪರಿಷತ್ ಸದಸ್ಯರಾಗಲಿದ್ದಾರೆ.ಇತ್ತೀಚೆಗೆ ನಡೆದ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಕ್ಕೂ ಬಿಜೆಪಿಯಿಂದ ಉಡುಪಿಯ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿರಲಿಲ್ಲ. ಇದೀಗ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರಕ್ಕೂ ಬಿಜೆಪಿ ಉಡುಪಿಗೆ ನಿರಾಸೆ ಮಾಡಿದೆ.
* ಭಟ್ರು ಮಿಸ್ ಮಾಡ್ಕೊಂಡ್ರಾ!ಒಂದು ವೇಳೆ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಕಳೆದ ಬಾರಿ ಪದವೀಧರರ ಕ್ಷೇತ್ರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯದೇ ಇದ್ದಿದ್ದರೆ, ಈಗ ಸ್ಥಳೀಯಾಡಳಿತ ಪ್ರತಿನಿಧಿಯಾಗಿ ಅವರಿಗೆ ಬಿಜೆಪಿ ಟಿಕೆಟ್ ಸಿಗುತ್ತಿತ್ತು. ಪಕ್ಷದಿಂದ ಅಮಾನತಾಗಿರುವ ಅವರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರು ಎಂದು ಬಿಜೆಪಿಯ ನಾಯಕರೇ ಹೇಳುತ್ತಿದ್ದಾರೆ.------------ಬಿಲ್ಲವರೇ ನಿರ್ಣಾಯಕರು?
ಈ ಚುನಾವಣೆಯಲ್ಲಿ ಗ್ರಾ.ಪಂ., ತಾ.ಪಂ., ಜಿ.ಪಂ., ಪುರಸಭೆ, ಪ.ಪಂ., ನಗರಸಭೆ, ಮನಪಾ ಸದಸ್ಯರು ಮತದಾರರಾಗಿರುತ್ತಾರೆ. ಆದರೆ ತಾ.ಪಂ., ಜಿ.ಪಂ. ಆಡಳಿತ ಮಂಡಳಿ ಅಸ್ತಿತ್ವದಲ್ಲಿಲ್ಲ. ಇರುವ ಒಟ್ಟಾರೆ ಸ್ಥಳೀಯಾಡಳಿತ ಸದಸ್ಯರಲ್ಲಿ ಬಿಲ್ಲವರೇ ಹೆಚ್ಚಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಯಿಂದ ಗೀತಾಂಜಲಿ ಸುವರ್ಣ ಅವರ ಹೆಸರಿಗೆ ಪ್ರಾಮುಖ್ಯತೆ ಬಂದಿತ್ತು.ಇದೇ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ನಿಂದ ಉಡುಪಿಯ ಡಿ.ಆರ್.ರಾಜು ಮತ್ತು ರಾಜು ಪೂಜಾರಿ ಟಿಕೆಟ್ ಬಯಸಿದ್ದಾರೆ. ಉದ್ಯಮಿ ಹರಿಪ್ರಸಾದ್ ರೈ ಕೂಡ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.