ಅ.4ರಂದು ಪಿಡಿಒಗಳ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

| Published : Oct 02 2024, 01:15 AM IST

ಸಾರಾಂಶ

ಅ.4ರಿಂದ ರಾಜ್ಯಾದ್ಯಂತ ಗ್ರಾಪಂ ಸೇವೆಗಳನ್ನು ಸ್ಥಗಿತಗೊಳಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ

ಹೊಸಪೇಟೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.4ರಿಂದ ರಾಜ್ಯಾದ್ಯಂತ ಗ್ರಾಪಂ ಸೇವೆಗಳನ್ನು ಸ್ಥಗಿತಗೊಳಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಎಲ್.ಚಂದ್ರನಾಯ್ಕ ತಿಳಿಸಿದರು.ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯ 137 ಗ್ರಾಪಂಗಳಲ್ಲಿ ಬರೀ 87 ಪಿಡಿಒಗಳಿದ್ದಾರೆ. ಪಿಡಿಒ, ಕಾರ್ಯದರ್ಶಿಗಳಿಗೆ ಕಾರ್ಯಭಾರದ ಒತ್ತಡ ಹೆಚ್ಚಿದೆ. 1993ರ ಪಂಚಾಯತ್‌ ರಾಜ್‌ ಅಧಿನಿಯಮದ ಪ್ರಕಾರ ಹುದ್ದೆಗಳನ್ನು ಮಂಜೂರು ಮಾಡಲಾಗುತ್ತಿದೆ. ಈಗ ಗ್ರಾಮಗಳಲ್ಲಿ ಜನಸಂಖ್ಯೆ ಬೆಳೆದಿದೆ. ಇನ್ನೂ ಪಂಚಾಯಿತಿಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗುತ್ತಿದೆ. ಹಾಗಾಗಿ ಗ್ರಾಪಂಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗದಂತೆ ಕ್ರಮವಹಿಸಬೇಕು ಎಂದರು.

ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮ ಕೈಬಿಡಬೇಕು. ವರ್ಗಾವಣೆ ನಿಯಮಗಳ ಬದಲಾವಣೆಗೆ ಮುನ್ನ ಸಂಘದ ಸಲಹೆ ಪಡೆಯಬೇಕು. ಪಿಡಿಒ ಹುದ್ದೆಯನ್ನು ಗ್ರೂಪ್ ಬಿ.ಗೆ ಉನ್ನತೀಕರಿಸಬೇಕು. ಪಿಡಿಒ ಹುದ್ದೆ ಸೃಜನೆಯಾಗಿ 15ನೇ ವರ್ಷವಾದರೂ ಉನ್ನತೀಕರಿಸಿಲ್ಲ. ಹುದ್ದೆಗಳ ಭರ್ತಿ ಮತ್ತು ಪದೋನ್ನತಿಯಲ್ಲಿ ನ್ಯಾಯ ಸಿಕ್ಕಿಲ್ಲ. ಕಳೆದ ಐದು ವರ್ಷಗಳಿಂದ ಪದೋನ್ನತಿ ಇಲ್ಲದೆ ಒಂದೇ ಹುದ್ದೆಯಲ್ಲಿ ಕೆಲಸ ಮಾಡುವಂತಾಗಿದೆ. ಗ್ರಾಪಂನಲ್ಲಿ ಕೆಡಿಪಿ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸುತ್ತಾರೆ. ಆದರೆ, ಅವರು ಗ್ರೂಪ್ ಬಿ ಮತ್ತು ನಾವು ಸಿ ಆಗಿರುತ್ತೇವೆ. ಇದರಿಂದ ತ್ವರಿತ ಆಡಳಿತಕ್ಕೂ ತೊಂದರೆಯಾಗುತ್ತಿದೆ ಎಂದರು.

ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಉಮೇಶ್ ಜಹಗಿರದಾರ ಮಾತನಾಡಿ, ರಾಜ್ಯದಲ್ಲಿ ವರ್ಷದಲ್ಲಿ ಸುಮಾರು 21 ಪಿಡಿಒಗಳು ಮೃತಪಟ್ಟಿದ್ದಾರೆ. ಕೆಲಸದ ಒತ್ತಡದಲ್ಲಿ ನರಳುತ್ತಿದ್ದಾರೆ. ಸುಮಾರು ಎರಡು ವರ್ಷಗಳಿಂದ ಕಾರ್ಯದರ್ಶಿ ಗ್ರೇಡ್ -1 ವೃಂದದಿಂದ ಪಿಡಿಒ ವೃಂದಕ್ಕೆ ಮುಂಬಡ್ತಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸಾವಿರಕ್ಕೂ ಅಧಿಕ ವಿವಿಧ ವೃಂದದ ನೌಕರರು ಮುಂಬಡ್ತಿಯಿಂದ ವಂಚಿತರಾಗಿದ್ದು, ಕಾಲಮಿತಿಯೊಳಗೆ ಮುಂಬಡ್ತಿಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂಗಳಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಜಿಲ್ಲಾ ಪಂಚಾಯಿತಿ ಎಫ್‌ಡಿಎ ಹುದ್ದೆಗಳಿಗೆ ಪರಿಗಣಿಸಬೇಕು. ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಕರವಸೂಲಿಗಾರ, ನೀರಗಂಟಿ, ಜವಾನರು, ಸ್ವಚ್ಛತಾಗಾರರನ್ನು ಪದೋನ್ನತಿ ಸಿಗದೆ ಕೊನೆಯ ಐದು ವರ್ಷಗಳ ನಿವೃತ್ತಿ ಹಂತದಲ್ಲಿ ಗ್ರೇಡ್-2 ಕಾರ್ಯದರ್ಶಿ ಸಮನಾಂತರ ವೇತನ ಶ್ರೇಣಿ ನಿಗದಿಪಡಿಸಬೇಕು ಎಂದರು.

ಸಂಘದ ಮಹಿಳಾ ಜಿಲ್ಲಾ ಉಪಾಧ್ಯಕ್ಷೆ ಕವಿತಾ ಕರಣಂ, ಪಿಡಿಒ ಸಂಘದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ, ಖಜಾಂಚಿ ಶಶಿಧರ್, ಮಂಜುನಾಥ, ಕೆ.ನಾಗಪ್ಪ, ರತ್ನಮ್ಮ ಇದ್ದರು.