ಸಾರಾಂಶ
ಜಿಲ್ಲಾಧಿಕಾರಿಗೆ ಮನವಿ । ಮಸೂದೆ ಹಿಂಪಡೆಯುವಂತೆ ದೇವಸ್ಥಾನ-ಮಠ ಸಂಘ ಒತ್ತಾಯ
ಕನ್ನಡಪ್ರಭ ವಾರ್ತೆ ಹಾಸನಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ 2024ನ್ನು ರದ್ದು ಮಾಡುವಂತೆ ಹಾಸನದ ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಕರ್ನಾಟಕ ಸರ್ಕಾರವು ಫೆಬ್ರವರಿ 20 ರಂದು ಕರ್ನಾಟಕ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಆಧಿನಿಯಮ 1997ಕ್ಕೆ ಮತ್ತಷ್ಟು ತಿದ್ದುಪಡಿಯನ್ನು ಮಾಡಿದೆ. ಈ ತಿದ್ದುಪಡಿಯಲ್ಲಿ ಹಲವಾರು ದೋಷಗಳು ಇದ್ದು, ಅವುಗಳು ದೇವಸ್ಥಾನಗಳ ಪರಂಪರೆಯ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಹಾಗಾಗಿ ಈ ಕಲಂಗಳನ್ನು ರದ್ದು ಮಾಡಬೇಕೆಂದು ಸಂಘ ಆಗ್ರಹಿಸಿದೆ.ಮನವಿಯಲ್ಲಿ ಕಲಂ 69ರ ಪ್ರಕಾರ ಜಿಲ್ಲಾಮಟ್ಟದ ಮತ್ತು ರಾಜ್ಯ ಮಟ್ಟದ ಉನ್ನತ ಸಮಿತಿಗಳನ್ನು ರಚನೆ ಮಾಡಲಾಗಿದ್ದು ಅದರಲ್ಲಿ ಜಿಲ್ಲಾ ಮಟ್ಟದಲ್ಲಿ 9 ಜನರನ್ನು ಹಾಗೂ ರಾಜ್ಯಮಟ್ಟದಲ್ಲಿ 16 ಜನರ ಸಮಿತಿಯನ್ನು ಮಾಡಲಾಗಿದೆ. ಅದರಲ್ಲಿ ಸ್ಥಳೀಯ ಶಾಸಕರು, ಸಂಸದರು ಸೇರಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನು ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಇದರಲ್ಲಿ ಹಿಂದೂಗಳಲ್ಲದವರು ಇರುವ ಸಾಧ್ಯತೆ ಇರುವ ಕಾರಣದಿಂದ ಇದು ಅತ್ಯಂತ ಅಪಾಯಕಾರಿಯಾಗಿದೆ. ಕಲಂ 19ರಲ್ಲಿ ಸಾಮಾನ್ಯ ಸಂಗ್ರಹಣ ನಿಧಿಯ ಉಲ್ಲೇಖ ಮಾಡಲಾಗಿದ್ದು. ಈ ನಿಧಿಯನ್ನು ಇತರ ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ನೀಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅನ್ಯ ಸಮುದಾಯದವರಿಗೂ ಸಹ ಅನ್ವಯ ಮಾಡಲಾಗುವ ಸಾದ್ಯತೆ ಇದೆ ಎಂದು ಸಂಘ ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಕಲಂ 25 ರಲ್ಲಿ ಸಂಯೋಜಿತ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ರಚನೆ ಸಂದರ್ಭದಲ್ಲಿ ಹಿಂದೂಗಳಲ್ಲದವರನ್ನು ನೇಮಕ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದ್ದು ಇದು ದೇವಸ್ಥಾನಗಳ ಪರಂಪರೆ ರಕ್ಷಣೆಯ ವಿಷಯದಲ್ಲಿ ಅತ್ಯಂತ ಅಪಾಯಕಾರಿಯಾಗಿದೆ. ಕಲಂ 17 ರಲ್ಲಿ ಯಾವ ಸಂಸ್ಥೆಗಳ ಆದಾಯ 1 ಕೋಟಿ ರು. ಮೀರಿರುವುದೋ ಅವುಗಳ 10 % ನಿವ್ವಳ ಆದಾಯದ ಪ್ರತಿಶತ ಹಣವನ್ನು 5 ರಿಂದ 10 ಲಕ್ಷ ರು. ಇರುವ ಆದಾಯ ಇರುವ ದೇವಸ್ಥಾನಗಳ 5 ಶೇ ಹಣವನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ವರ್ಗಾವಣೆ ಮಾಡುವ ಬಗ್ಗೆ ಉಲ್ಲೇಖ ಮಾಡಿದ್ದು ಇದು ದೇವಸ್ಥಾನಗಳ ಹಣವನ್ನು ದೋಚುವ ಹುನ್ನಾರವಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ಈ ವಿಧೇಯಕವನ್ನು ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದು ದೇವಸ್ಥಾನದ ವಿಶ್ವಸ್ಥರು ಆಗ್ರಹಿಸಿದರು.ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ವೇದ, ಸುಜಾತ ನವೀನ್, ಉಮಾಮಹೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಪ್ರಸಾದ್, ಶ್ರೀ ಕಾಳಿಕಾಂಬ ದೇವಸ್ಥಾನದ ಟ್ರಸ್ಟಿ ರಾಜ ವೆಂಕಟೇಶ್, ಹೂವಿನಹಳ್ಳಿ ಕಾವಲ್‌ನ ಶ್ರೀ ಕಲ್ಯಾಣಿ ದುರ್ಗ ದೇವಸ್ಥಾನದ ಟ್ರಸ್ಟಿ ಮತ್ತು ಅರ್ಚಕ ಎಚ್. ಎಸ್. ಪುಟ್ಟಸ್ವಾಮಿ ಗೌಡ, ಹೇಮಾವತಿ ನಗರದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯದರ್ಶಿ ಗೋವಿಂದರಾಜು ಇದ್ದರು.ಹಾಸನ ಅಪರ ಜಿಲ್ಲಾಧಿಕಾರಿ ಅವರಿಗೆ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಮನವಿ ಸಲ್ಲಿಸಲಾಯಿತು.