ಹುಬ್ಬಳ್ಳಿ:

ಮಹದಾಯಿ, ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ಜಾರಿಗೆ ಸಂಬಂಧಿಸಿ ಚರ್ಚಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸರ್ವ ಸದಸ್ಯರ ವಿಶೇಷ ಸಭೆ ಕರೆಯಬೇಕು ಎಂದು ಆಗ್ರಹಿಸಿ ರೈತಾ ಸೇನಾ ಕರ್ನಾಟಕ ಸಂಘಟನೆ ಸದಸ್ಯರು ಸೋಮವಾರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ನಡುವೆ ಮಹಾನಗರ ಪಾಲಿಕೆಯೂ ರೈತರೊಂದಿಗೆ ಎಲ್ಲ ಸದಸ್ಯರ ಸಭೆಯನ್ನು ನ.19ಕ್ಕೆ ನಡೆಸಲಾಗುವುದು ಎಂದು ಭರವಸೆ ನೀಡಿದೆ.

ಮೂರುಸಾವಿರ ಮಠದ ಆವರಣದಿಂದ ಮಹಾನಗರ ಪಾಲಿಕೆ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಪಾಲಿಕೆ ಸದಸ್ಯರ ವಿಶೇಷ ಸಭೆ ಕರೆಯುವ ಕುರಿತು ಆಯುಕ್ತರು ಭರವಸೆ ನೀಡಬೇಕು. ಇಲ್ಲದಿದ್ದರೆ ಪಾಲಿಕೆ ಆವರಣದಲ್ಲಿಯೇ ಅಹೋರಾತ್ರಿ ಧರಣಿ ನಡೆಸಲಾಗುವುದಾಗಿ ಎಚ್ಚರಿಕೆ ನೀಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನೀರಿನ ಬಳಕೆ ಮಾಹಿತಿ ಕೊಡಿ:

ರೈತ ಮುಖಂಡ ವೀರೇಶ ಸೊಬರದಮಠ ಮಾತನಾಡಿ, ಮಲಪ್ರಭಾ ಜಲಾಶಯದ ಅಚ್ಚುಕಟ್ಟಿನ ಸುಮಾರು 2.25 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತಿದೆ. ಕೃಷಿ ಉದ್ದೇಶಕ್ಕಾಗಿ ನಿರ್ಮಿಸಲಾದ ಈ ಜಲಾಶಯದ ನೀರನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಕೈಗಾರಿಕಾ ಕಂಪನಿಗಳು ಬಳಸಿಕೊಳ್ಳುತ್ತಿರುವುದಕ್ಕೆ ವಿರೋಧವಿಲ್ಲ. ಆದರೆ, ಮಹಾನಗರಕ್ಕೆ ಯಾವ ಮೂಲದಿಂದ ನೀರು ಪೂರೈಸಲಾಗುತ್ತಿದೆ. ಕೈಗಾರಿಕೆಗಳಿಗೆ ಯಾವ ಮೂಲದಿಂದ ನೀರು ನೀಡಲಾಗುತ್ತಿದೆ ಹಾಗೂ ಈ ಸಂಬಂಧ ಸಂಗ್ರಹವಾಗಿರುವ ತೆರಿಗೆಯ ವಿವರಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸೊಬರದಮಠ ಆಗ್ರಹಿಸಿದರು.

ಮಹದಾಯಿ ಕುಡಿಯುವ ನೀರಿನ ಯೋಜನೆ ಜಾರಿಗೆ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಕುರಿತು ಪಾಲಿಕೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಮಗ್ರ ಚರ್ಚೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಸೆ. 21ರಂದು ಹಾಗೂ ಅ. 9ರಂದು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ವಿಶೇಷ ಸಭೆಗೆ ದಿನಾಂಕ ನಿಗದಿಪಡಿಸಿಲ್ಲ. ಭೀಕರ ಬರಗಾಲ ಉಂಟಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡಿ, ವಿಳಂಬ ಮಾಡದೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕಾಂಗೆಸ್‌, ಬಿಜೆಪಿ ನಾಯಕರು ಯೋಜನೆ ಕುರಿತು ಒಬ್ಬರ ಮೇಲೆ ಒಬ್ಬರು ಬೆರಳು ತೋರಿಸುತ್ತ ಕಾಲಹರಣ ಮಾಡುತ್ತಿದ್ದಾರೆ. ಮಹದಾಯಿ ನದಿ ನೀರು ಬಳಸುವ ಪಾಲಿಕೆಯ 82 ಮಂದಿ ಸದಸ್ಯರು ನಮಗೆ ಬೆಂಬಲ ನೀಡಬೇಕು, ಇಲ್ಲವೇ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಆಗ್ರಹಿಸಿದರು.


ಮನವಿ ಸ್ವೀಕರಿಸಿದ ಮೇಯರ್‌ ದುರ್ಗಮ್ಮ ಬಿಜವಾಡ, ಮಹದಾಯಿ ಹೋರಾಟಗಾರರ ನೋವು ಅರ್ಥವಾಗುತ್ತದೆ. ಮಹದಾಯಿ ಯೋಜನೆ ಅನುಷ್ಠಾನ ಹೋರಾಟಕ್ಕೆ ಕೈ ಜೋಡಿಸುವಂತೆ ಹಾಗೂ ನೀರು ಬಳಕೆ ಮತ್ತು ಕರ ಪಾವತಿ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ಹೋರಾಟಗಾರರು ವಿನಂತಿಸಿದ್ದಾರೆ, ನ.19ರಂದು ಸವಾಯಿ ಗಂಧರ್ವ ಸಭಾಭವನದಲ್ಲಿ ಪಾಲಿಕೆ ಸದಸ್ಯರು ಹಾಗೂ ರೈತರ ಮುಖಂಡರ ಸಭೆ ಕರೆಯಲು ನಿರ್ಧರಿಸಿದ್ದೇವೆ. ಅದಕ್ಕೂ ಮೊದಲು ಹೋರಾಟಕ್ಕೆ ಬೆಂಬಲ ನೀಡುವ ಕುರಿತು 16ರಂದು ಸಾಮಾನ್ಯಸಭೆ ಕರೆದು ವಿಸ್ತೃತ ಸಭೆ ನಡೆಸಿ ತೀರ್ಮಾನಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ರಾಜಗುರು ಸ್ವಾಮೀಜಿ, ಗುರು ರಾಯನಗೌಡ್ರ, ಶಿವಪ್ಪ ಹೊರಕೇರಿ, ಮಲ್ಲಿಕಾರ್ಜುನ ಅಲೇಕರ್‌, ರವೀಂದ್ರ ಚಾಕಲಬ್ಬಿ, ಗುರುಶಾಂತಪ್ಪ ಕೌರಿ, ಖಂಡೋಬಾ ಕಳಸನಣ್ಣವರ, ಗುರುಶಿದ್ದಪ್ಪ ಅಂಗಡಿ, ಸಹದೇವ ಬೇವಿನಗಿಡದ, ಬಸನಗೌಡ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.

1961ರಿಂದ ಈ ವರೆಗೆ ಮಲಪ್ರಭಾ ಜಲಾಶಯದಿಂದ ಕುಡಿಯುವ ನೀರಿನ ಲೆಕ್ಕ ಮತ್ತು ಕರ ಸಂಗ್ರಹದ ಮಾಹಿತಿ ಕೇಳಿದ್ದಾರೆ. ನೀರಾವರಿ ಇಲಾಖೆ, ಜಲಮಂಡಳಿ, ಎಲ್‌‍ ಆ್ಯಂಡ್‌ ಟಿ ಹಾಗೂ ಇತರ ಇಲಾಖೆ ಜತೆ ಚರ್ಚಿಸಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಹೋರಾಟಕ್ಕೆ ಪಾಲಿಕೆ ಸಾಥ್‌ ನೀಡಬೇಕೆಂಬುದರ ಜನಪ್ರತಿನಿಧಿಗಳು ನಿರ್ಧರಿಸಬೇಕು.ಡಾ. ರುದ್ರೇಶ ಘಾಳಿ, ಹು-ಧಾ ಪಾಲಿಕೆ ಆಯುಕ್ತರು