ಕರ್ನಾಟಕ ಏಕೀಕರಣಕ್ಕೆ ಗದಗ ಪರಿಸರದ ಕೊಡುಗೆ ಅಪಾರವಾಗಿದೆ. ಭಾಷಾ ಬೆಳವಣಿಗೆಯಲ್ಲಿ ಶಾಲೆಗಳ ಪಾತ್ರ ಮಹತ್ವದ್ದಾಗಿರುವದರಿಂದ ಕನ್ನಡ ಶಾಲೆಗಳ ಸಬಲೀಕರಣ ಅಗತ್ಯ.
ಕನ್ನಡಪ್ರಭ ವಾರ್ತೆ ಗದಗ
ಕರ್ನಾಟಕ ಏಕೀಕರಣಕ್ಕೆ ಗದಗ ಪರಿಸರದ ಕೊಡುಗೆ ಅಪಾರವಾಗಿದೆ. ಭಾಷಾ ಬೆಳವಣಿಗೆಯಲ್ಲಿ ಶಾಲೆಗಳ ಪಾತ್ರ ಮಹತ್ವದ್ದಾಗಿರುವದರಿಂದ ಕನ್ನಡ ಶಾಲೆಗಳ ಸಬಲೀಕರಣ ಅಗತ್ಯ. ಶಿಕ್ಷಕರ ನೇಮಕ, ಮೂಲಭೂತ ಸೌಕರ್ಯಗಳ ಒದಗಿಸುವಿಕೆಯ ಕಡೆಗೆ ಸರಕಾರ ಗಮನ ನೀಡಬೇಕು. ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸುವ ಹಂಬಲ ಪಾಲಕರಲ್ಲಿ ಹೆಚ್ಚಾಗಬೇಕು ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಭು ಶಿರಹಟ್ಟಿ ಅವರು ರಚಿಸಿದ ಚೈತನ್ಯ ಪ್ರಭೆ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಐಟಿಬಿಟಿ, ಉನ್ನತ ಶಿಕ್ಷಣ, ಸಂಶೋಧನಾ ಕ್ಷೇತ್ರದಲ್ಲಿ ರಾಜ್ಯ ಗಮನಾರ್ಹ ಪ್ರಗತಿ ಸಾಧಿಸಿದ್ದರೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಸಾಧನೆ ಕೆಳಮಟ್ಟದಲ್ಲಿರುವದು ಆತಂಕದ ವಿಷಯವಾಗಿದೆ ಎಂದರು.
ನಿವೃತ್ತ ಉಪನ್ಯಾಸಕ ಕೆ.ಪಿ. ಸಾಲಿಮಠ ಮಾತನಾಡಿ, ಕರ್ನಾಟಕ ಭೌಗೋಳಿಕ ವೈವಿಧ್ಯಮಯ ಪರಿಸರವನ್ನು ಹೊಂದಿದೆ. ಆಯಾ ಜಿಲ್ಲೆಗಳಲ್ಲಿ ವಿಭಿನ್ನ ಹಾಗೂ ವಿಶಿಷ್ಠ ಸಂಸ್ಕೃತಿಗಳ ಆಚರಣೆಯೊಂದಿಗೆ ಬಹುತ್ವದ ಕರ್ನಾಟಕವನ್ನು ಕಾಣಬಹುದಾಗಿದೆ. ಸಾಹಿತ್ಯ, ಸಂಗೀತ, ರಂಗಭೂಮಿ, ಸೌಹಾರ್ದತೆಗೆ ಗದಗ ಜಿಲ್ಲೆ ಹೆಸರುವಾಸಿಯಾಗಿದೆ. ಕವಿಗಳು, ಸಾಹಿತಿಗಳು ತಮ್ಮ ಸೃಜನಶೀಲ ಬರಹದಿಂದ ಸಾಹಿತ್ಯ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಡೆಪ್ಯುಟಿ ಚನ್ನಬಸಪ್ಪನವರು ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಈ ಭಾಗದಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸುವ ಮೂಲಕ ಕರ್ನಾಟಕ ಏಕೀಕರಣಕ್ಕೆ ಭದ್ರ ಅಡಿಪಾಯವನ್ನು ಹಾಕಿದರು. ಅವರ ಭಾವಚಿತ್ರವನ್ನು ಸರಕಾರ ಎಲ್ಲ ಶಾಲೆಗಳಲ್ಲಿ ಅಳವಡಿಸುವ ಆದೇಶ ಹೊರಡಿಸಬೇಕು. ಕನ್ನಡ ಚಳವಳಿ ಇದು ನಿರಂತರವಾಗಿದ್ದು ಇಂದು ಆಂಗ್ಲ ಮಾಧ್ಯಮ ವ್ಯಾಮೋಹದಿಂದ ಪೋಷಕರನ್ನು ಹೊರತರಬೇಕಾದ ಅಗತ್ಯವಿದೆ. ಸರಕಾರಿ ಶಾಲೆಗಳ ಉಳಿವಿಕೆ ಮತ್ತು ಸಮಗ್ರ ವಿಕಾಸಕ್ಕೆ ಜನಾಂದೋಲನ ರೂಪಗೊಳ್ಳಬೇಕೆಂದು ತಿಳಿಸಿದರು.
ಡಾ. ಅಪ್ಪಣ್ಣ ಹಂಜೆ ಮಾತನಾಡಿದರು. ಮಂಜುಳಾ ವೆಂಕಟೇಶಯ್ಯ, ಎಲ್. ತಿಪ್ಪಾನಾಯ್ಕ, ಅಕ್ಕಮಹಾದೇವಿ ಹಾರೋಗೇರಿ ಕವನ ವಾಚಿಸಿದರು. ಶ್ರೀನಿವಾಸ ಕುಲಕರ್ಣಿ, ಶಿಲ್ಪಾ ಕುರಹಟ್ಟಿ, ಲತಾಮಾಂಡ್ರೆ ಅವರಿಂದ ಕನ್ನಡ ಗೀತೆಗಳ ಗಾಯನ ಜರುಗಿತು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನ ಸನ್ಮಾನಿಸಿ, ಗೌರವಿಸಲಾಯಿತು. ಪುಸ್ತಕದ ಲೇಖಕ ಪ್ರಭು ಶಿರಹಟ್ಟಿ ಚೈತನ್ಯ ಪ್ರಭೆ ಪುಸ್ತಕ ಕುರಿತು ಮಾತನಾಡಿದರು.
ಚಂದ್ರಶೇಖರ ವಸ್ತ್ರದ, ಜಿ.ಬಿ. ಪಾಟೀಲ, ಅಂದಾನಪ್ಪ ವಿಭೂತಿ, ಧನೇಶ ದೇಸಾಯಿ, ತಯಬಲಿ ಹೊಂಬಳ, ಗೋಪಾಲ ದಾಸರ, ಯಲ್ಲಪ್ಪ ಹಂದ್ರಾಳ, ಸತೀಶ ಕುಲಕರ್ಣಿ, ಜೆ.ಎ. ಪಾಟೀಲ, ನಿರ್ಮಲಾ ಪಾಟೀಲ, ಸಿ.ಕೆ.ಎಚ್ ಕಡಣಿಶಾಸ್ತ್ರ, ವಿ.ಎಸ್. ದಲಾಲಿ, ಭಾರತಿ ಕೋಟಿ, ಮೋಹನ ಕೋಟಿ, ಎನ್.ವಿ. ಜೋಶಿ, ಈರಣ್ಣ ಹುಂಬಿ, ಎನ್.ಐ. ಮಕಾನದಾರ, ಬಿ.ಎಸ್. ವಣಗೇರಿ, ಎಸ್.ಬಿ. ಕಣವಿ, ಉಮಾದೇವಿ ಕಣವಿ, ಕೆ.ಜಿ. ಹೊನ್ನಾದೇವಿ, ಗಿರಿಜಾ ಹಸಬಿ, ಸುಜಾತಾ ವಾರದ, ಮಲ್ಲಿಕಾರ್ಜುನ ನಿಂಗೋಜಿ, ಅನಂತ ಮೋಹನ ಭಟ್, ಶಂಕರ ಬಡಿಗೇರ ಮೊದಲಾದವರು ಇದ್ದರು. ದತ್ತಪ್ರಸನ್ನ ಪಾಟೀಲ, ರಕ್ಷಿತಾ ಗಿಡ್ನಂದಿ ನಿರೂಪಿಸಿದರು. ಡಿ.ಎಸ್. ಬಾಪುರಿ ಪರಿಚಯಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡರ ವಂದಿಸಿದರು.