ವೈವಿಧ್ಯಮಯ ಸಂಸ್ಕೃತಿ ಸರ್ವರ ಜನಾಂಗದ ಶಾಂತಿಯ ತೋಟದಂತಿರುವ ಕರುನಾಡಿನಲ್ಲಿ ನಾವಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಉಪ ವಿಭಾಗಾಧಿಕಾರಿ ಸಮೀರಪ್ರಕಾಶ ಕೋಡೆ ಹೇಳಿದರು.

ಸವಣೂರು: ವೈವಿಧ್ಯಮಯ ಸಂಸ್ಕೃತಿ ಸರ್ವರ ಜನಾಂಗದ ಶಾಂತಿಯ ತೋಟದಂತಿರುವ ಕರುನಾಡಿನಲ್ಲಿ ನಾವಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಉಪ ವಿಭಾಗಾಧಿಕಾರಿ ಸಮೀರಪ್ರಕಾಶ ಕೋಡೆ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಎಲ್ಲ ರಂಗಗಳಲ್ಲಿ ಕರ್ನಾಟಕವು ಇತರೆ ರಾಜ್ಯಗಳಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ, ಉದ್ಯೋಗ, ಕೃಷಿ, ಸಂಸ್ಕೃತಿ, ಕ್ರೀಡೆಗಳಲ್ಲಿ ನಾವೇ ಉತ್ತಮ ಸಾಧನೆ ತೋರುತ್ತಿರುವುದಕ್ಕೆ ತಾಯಿ ಭುವನೇಶ್ವರಿ ದೇವಿಯ ಆಶೀರ್ವಾದವೇ ಕಾರಣ. ಕನ್ನಡ ಧ್ವಜದ ಬಣ್ಣದಲ್ಲಿಯೂ ಸಹ ಅರಿಶಿಣ, ಕುಂಕುಮದ ಪ್ರತಿಬಿಂಬ ಅಡಗಿದೆ. ಪ್ರಪಂಚದಾದ್ಯಂತ ಇರುವ ಕನ್ನಡಿಗರು ಒಗ್ಗೂಡಿಕೊಂಡು ನ. 1ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಭರಮಲಿಂಗೇಶ್ವರ ವೃತ್ತದಿಂದ ತಾಯಿ ಭುವನೇಶ್ವರಿ ದೇವಿ ಸ್ತಬ್ಧಚಿತ್ರ, ಕನ್ನಡಕ್ಕಾಗಿ ಹೋರಾಟ ಮಾಡಿದ ಮಹನೀಯರ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳ ಮೆರವಣಿಗೆ ವಿವಿಧ ವಾದ್ಯ ವೈಭವಗಳೊಂದಿಗೆ ನಗರದಾದ್ಯಂತ ಸಂಚರಿಸಿ ತಾಲೂಕು ಕ್ರೀಡಾಂಗಣಕ್ಕೆ ತಲುಪಿತು. ನಂತರ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಪತಸಂಚಲನ, ಸಾಮೂಹಿಕ ಕವಾಯತ್, ಕನ್ನಡದ ಭಾಷಾ ಪ್ರೇಮವನ್ನು ಹೆಚ್ಚಿಸುವ ಹಾಡುಗಳಿಗೆ ನೃತ್ಯ ಪ್ರದರ್ಶನ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಹಸೀಲ್ದಾರ್ ರವಿಕುಮಾರ ಕೊರವರ ಅಧ್ಯಕ್ಷತೆ ವಹಿಸಿದ್ದರು.

ಸಿಡಿಪಿಒ ಉಮಾ ಕೆ.ಎಸ್., ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಮಂಜುನಾಥ ಉಳಾಗಡ್ಡಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಜೆ.ಮುಲ್ಲಾ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ಹರೀಶಗೌಡ ಪಾಟೀಲ, ಪರಶುರಾಮ ಈಳಗೇರ, ರವಿ ಕರಿಗಾರ, ಮಹೇಶ ಸಾಲಿಮಠ, ಶಿವಯೋಗಿ ಆಲದಕಟ್ಟಿ, ಈರಯ್ಯ ಸಂಕೀನಮಠ, ಸಿ.ಎನ್. ಪಾಟೀಲ, ಜೀವನ್ ಪಮ್ಮಾರ, ವಿಶ್ವನಾಥ ಹಾವಣಗಿ ಹಾಗೂ ಇತರರು ಪಾಲ್ಗೊಂಡಿದ್ದರು. ಬಿಇಒ ಎಂ.ಎಫ್. ಬಾರ್ಕಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯಕ್ರಮ ನಿರ್ವಹಿಸಿದರು.