ಸಾರಾಂಶ
ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವುದೇ ಕಷ್ಟವಾಗಿದೆ. ಇಂದು ಭ್ರಷ್ಟಾಚಾರ, ಲಂಚಾವತಾರ ಎಲ್ಲೆಡೆ ಮನೆಮಾತಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಗಾಂಧೀಜಿಯವರ ಬದುಕಿನ ಧ್ಯೇಯ ಮಂತ್ರವನ್ನು ಕಿಂಚಿತ್ತಾದರೂ ಪಾಲಿಸಬೇಕಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರ ಗುಣಗಾನ ಕಾಟಾಚಾರವಾಗದೆ ಮನೆ, ಮನಗಳಲ್ಲಿ ನಿರಂತರವಾಗಿ ನಡೆಯಬೇಕು ಎಂದು ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ತಿಳಿಸಿದರು.ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್ ಶ್ರೀ ಬಾಲಾಜಿ ವಿದ್ಯಾ ಸೇವಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ 155ನೇ ಗಾಂಧೀಜಿ ಹಾಗೂ 120ನೇ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯಲ್ಲಿ ಮಾತನಾಡಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆ ಕನಸಾಗಿಯೇ ಉಳಿದಿದೆ ಎಂದು ವಿಷಾದಿಸಿದರು.
ದೇಶ ಪ್ರೇಮ, ಸ್ವಾಭಿಮಾನ ಮೂಡದೆ ದೇಶದ ಸಮಸ್ಯೆ ಬಗೆಹರಿಯಲಾರದು. ಗಾಂಧೀಜಿಯವರು ಹಾಕಿಕೊಟ್ಟ ಸತ್ಯ, ಅಹಿಂಸೆ, ಸನ್ನಡತೆ, ರಾಷ್ಟ್ರಪ್ರೇಮ, ಗ್ರಾಮ ಶುಚಿತ್ವವನ್ನು ಮೈಗೂಡಿಸಿಕೊಳ್ಳದೆ ದೇಶದ ಸಮಸ್ಯೆ ಪರಿಹಾರ ಸಾಧ್ಯವೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಎಳೆಯ ಮನಸ್ಸುಗಳಲ್ಲಿ ಮೊಬೈಲ್ ಹಾವಳಿಯಿಂ ಹುತಾತ್ಮರಾದ ಮಹನೀಯರ ಸ್ಮರಣೆ ಮರೆಯಾಗುತ್ತಿದೆ. ವಿದ್ಯಾವಂತ ಪೋಷಕರು ಜಯಂತಿ ಆಚರಣೆ ಹಿನ್ನೆಲೆ, ಉದ್ದೇಶವನ್ನು ತಿಳಿಸಬೇಕಿದೆ ಎಂದರು.
ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವುದೇ ಕಷ್ಟವಾಗಿದೆ. ಇಂದು ಭ್ರಷ್ಟಾಚಾರ, ಲಂಚಾವತಾರ ಎಲ್ಲೆಡೆ ಮನೆಮಾತಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಗಾಂಧೀಜಿಯವರ ಬದುಕಿನ ಧ್ಯೇಯ ಮಂತ್ರವನ್ನು ಕಿಂಚಿತ್ತಾದರೂ ಪಾಲಿಸಬೇಕಿದೆ ಎಂದು ವಿನಂತಿಸಿದರು.ಲಾಲ್ ಬಹದ್ದೂರ್ ಶಾಸ್ತ್ರೀಜಿ ಅಂದು ದೇಶ ಆಹಾರ ಕ್ಷಾಮದಲ್ಲಿ ಬಸವಳಿಯುತ್ತಿದ್ದಾಗ ವಾರದ ಒಂದು ಹೊತ್ತಿನ ಊಟ ಬಿಡಲುಕರೆ ನೀಡಿದರು. ಆಹಾರ, ಹಸಿರು ಕ್ರಾಂತಿ ಜೊತೆಗೆ ನೆರೆಯ ಶತ್ರುಗಳ ಆಕ್ರಮಣವನ್ನು ಹಿಮ್ಮೆಟಿಸಿದರು. ಉಪವಾಸ ಆಚರಣೆ ವಾರದ ಒಂದು ದಿನ ಮಾಡಿದರೆ ಆರೋಗ್ಯಕ್ಕೂ ಪೂರಕವಾಗಲಿದೆ. ಶಾಸ್ತ್ರೀಜಿ ಜಯಂತಿಗೆ ಅರ್ಥ ಸಿಗಲಿದೆ ಎಂದರು.
ಮಕ್ಕಳು ಗಾಂಧಿ, ಶಾಸ್ತ್ರೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವ್ಯಯಕ್ತಿಕ ಸ್ವಚ್ಛತೆಗೆ ಮುಂದಾಗುವುದಾಗಿ ಪ್ರತಿಜ್ಞೆ ಮಾಡಿದರು. ಕವಿತಾ ದೇಶಭಕ್ತಿ ಗೀತೆ ಮಕ್ಕಳೊಂದಿಗೆ ಹಾಡಿದರು.