ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಮುಡಾ ಹಗರಣದಲ್ಲಿ ತಪ್ಪು ಮಾಡಿದ್ದಾರೆ. ಅದಕ್ಕೆ ಸೈಟ್ ವಾಪಸ್ ಕೊಟ್ಟಿದ್ದಾರೆ. ಸಿಎಂ ಯಾಕೆ ಸೈಟ್ ತಗೋಬೇಕಿತ್ತು? ರಾಮಕೃಷ್ಣ ಹೆಗಡೆಯವರಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಂಸದ ರಮೇಶ ಜಿಗಜಿಣಗಿ ಆಗ್ರಹಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆಯೇ ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಯೋಗ್ಯ ಎಂದು ಹೇಳಿದ್ದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮುಡಾ ಹಗರಣದಲ್ಲಿ ತಪ್ಪು ಮಾಡಿದ್ದಾರೆ. ಅದಕ್ಕೆ ಸೈಟ್ ವಾಪಸ್ ಕೊಟ್ಟಿದ್ದಾರೆ. ಸಿಎಂ ಯಾಕೆ ಸೈಟ್ ತಗೋಬೇಕಿತ್ತು? ರಾಮಕೃಷ್ಣ ಹೆಗಡೆಯವರಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಂಸದ ರಮೇಶ ಜಿಗಜಿಣಗಿ ಆಗ್ರಹಿಸಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆಯೇ ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಯೋಗ್ಯ ಎಂದು ಹೇಳಿದ್ದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಕೆಸರಿನಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಕೆಸರಿನಲ್ಲಿ ಸಿಕ್ಕು ಒದ್ದಾಡುವಾಗ ಯಾರು ಬದುಕಿಸುತ್ತಾರೆ? ಸೈಟ್ ತಗೊಂಡ ಮೇಲೆ ವಾಪಸ್ ಏಕೆ ಕೊಡಬೇಕು? ಸಿದ್ದರಾಮಯ್ಯ ಸಲಹೆಯಿಂದಲೇ ಅವರ ಪತ್ನಿ ಸೈಟ್ ವಾಪಸ್ ನೀಡಿದ್ದಾರೆ. ನಮ್ಮ ಮನೆಯಲ್ಲಿ ನಾನು ಹೇಳದೆ ನಮ್ಮ ಹೆಂಡತಿ ತೀರ್ಮಾನ ಮಾಡ್ತಾಳಾ? ಇದೆಲ್ಲ ನಾಟಕ ಸಾಕು ಎಂದು ಅವರು ವಾಗ್ದಾಳಿ ನಡೆಸಿದರು.ರಾಜಕಾರಣ ಗಬ್ಬೆದ್ದು ನಾರುತ್ತಿದೆ, ಎಲ್ಲ ಪಕ್ಷಗಳಲ್ಲೂ ಇದೆ ಸ್ಥಿತಿ ಇದೆ. ಎಲ್ಲರೂ ಸೇರಿಯೆ ರಾಜಕಾರಣವನ್ನು ಗಬ್ಬು ಹಿಡಿಸಿದ್ದೇವೆ. ಎಲ್ಲ ಪಕ್ಷಗಳು ನಿಷ್ಠೆಯಿಂದ ಕೆಲಸ ಮಾಡುತ್ತಿವೆ. ನಾವು ರಾಜಕಾರಣಿಗಳು ಗಬ್ಬು ಹಿಡಿಸಿದ್ದೇವೆ ಎಂದು ಸದ್ಯದ ರಾಜಕೀಯದ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಮುಡಾ ಸೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ದಲಿತ ನಾಯಕರ ಗುಪ್ತ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿಗಜಿಣಗಿ, ಕಾಂಗ್ರೆಸ್‌ನಲ್ಲಿ ದಲಿತ ಮುಖಂಡರು ಗುಪ್ತ ಸಭೆ ನಾಟೋದಿಲ್ಲ (ಪ್ರಯೋಜನಕ್ಕೆ ಬರೋದಿಲ್ಲ). ದೆಹಲಿಯಿಂದ ಏನು ಬರುತ್ತೊ ಅದೆ ನಾಟೋದು ಎಂದು ಹೇಳಿದ ಅವರು, ಈ ಜನ್ಮದಲ್ಲಿ ಕಾಂಗ್ರೆಸ್‌ನವರು ದಲಿತರನ್ನು ಸಿಎಂ ಮಾಡೋದಿಲ್ಲ, ಇದು ಸತ್ಯ. ಕಾಂಗ್ರೆಸ್‌ನಲ್ಲಿ ದಲಿತರು ಸಿಎಂ ಆಗುವ ಕನಸು ಕಾಣಬೇಕಷ್ಟೆ. ಮಹಾದೇವಪ್ಪ ಹುಚ್ಚ ಇದ್ದಾನೆ. ಪೈಪೋಟಿ ನಡೆಯುತ್ತೆ ಅದರಿಂದ ಏನು ಆಗೋಲ್ಲ. ತಾಕತ್ತು ಇದೆಯಾ ಎಂದು ದಲಿತ ನಾಯಕರನ್ನು ಪ್ರಶ್ನೆ ಮಾಡಿದರು.ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಹಿಂದೆಯೇ ಹೇಳಿದ್ದೇನೆ. ಈಗಲೂ ಹೇಳುತ್ತೇನೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಮಾಡುತ್ತಿರುವುದು ಸರಿಯಲ್ಲ. ಇನ್ಮೇಲೆ ರಾಜೀನಾಮೆ ನೀಡಿದರೂ ಸಿದ್ದರಾಮಯ್ಯಗೆ ಒಳ್ಳೆಯ ಹೆಸರು ಬರೋದಿಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ಇದ್ರೆ ಇಟ್ಟುಕೊಂಡು ಕೂರಲಿ. ನಾವಂತು ರಾಜೀನಾಮೆ ಕೊಡಿ ಎಂದು ಬೊಬ್ಬೆ ಹೊಡಿತಿದ್ದೇವೆ. ಇಟ್ಟುಕೊಂಡು ಕೂರಲಿ ಅವರಿಗೆ ಯಾರು ಬೇಡ ಅಂತಾರೆ ಎಂದು ಆಕ್ರೋಶ ಹೊರಹಾಕಿದರು.