ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು ಪ್ರತಿಯೊಬ್ಬರೂ ರಸ್ತೆ ನಿಯಮಗಳ ಬಗ್ಗೆ ತಿಳುವಳಿಕೆ ಹೊಂದಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ವಾಹನ ಚಲಾಯಿಸುವವರು ತಮ್ಮ ಸುರಕ್ಷತೆ ಜೊತೆಗೆ ರಸ್ತೆಯಲ್ಲಿ ಸಂಚರಿಸುವವರ ಸುರಕ್ಷತೆ ಬಗ್ಗೆಯೂ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು. ಸಾರಿಗೆ ಇಲಾಖೆ, ರಸ್ತೆ ಸುರಕ್ಷತಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಬುಧವಾರ ನಗರದ ಆರ್‌ಟಿಓ ಕಚೇರಿ ಆವರಣದಲ್ಲಿ ಸಂಚಾರ ಸುರಕ್ಷತಾ ಜಾಗೃತಿಯ ನಡಿಗೆಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಚಾರ ನಿಯಮಗಳ ಜಾಗೃತಿ ನಿತ್ಯದ ಮಂತ್ರವಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು. ಈ ಬಾರಿ ರಸ್ತೆ ಸುರಕ್ಷಿತಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ, ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಕೆಲಸ. ವಾಹನ ಚಲಾವಣೆ ಮಾಡುವವರ ದೃಷ್ಟಿ ಆರೋಗ್ಯಕರವಾಗಿರಬೇಕು. ವಯೋವೃದ್ಧರಿಗೆ ಕಣ್ಣಿನ ಸಮಸ್ಯೆ ಬರಬಹುದು ಅಂತಹವರು ನೇತ್ರ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವಂತೆ ತಿಳಿಸಿದರು. ತಮ್ಮ ಆರೋಗ್ಯದ ಜೊತೆಗೆ ವಾಹನದ ಆರೋಗ್ಯವೂ ಮುಖ್ಯ. ವಾಹನವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ವಾಹನ ಚಲಾವಣೆ ಪರವಾನಗಿ, ವಾಹನದ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು. ಸೂಚನಾ ಫಲಕಗಳ ಸೂಚನೆಗಳನ್ನು ಅನುಸರಿಸಬೇಕು. ನಿಯಮ ಉಲ್ಲಂಘನೆ ಮಾಡದಂತೆ ಎಚ್ಚರ ವಹಿಸಬೇಕು ಎಂದು ಶುಭ ಕಲ್ಯಾಣ್ ತಿಳಿಸಿದರು.ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಎನ್.ಜಿ.ಗಾಯತ್ರಿದೇವಿ, ಸುರಕ್ಷಿತ ಸಂಚಾರ ಪ್ರತಿಯೊಬ್ಬರ ಗುರಿಯಾಗಬೇಕು. ವಾಹನ ಚಲಾಯಿಸುವಾಗ ನಿಯಮಗಳನ್ನು ಪಾಲನೆ ಮಾಡಿಕೊಂಡು ಎಚ್ಚರವಹಿಸಬೇಕು. ೨೦೨೩ರಲ್ಲಿ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ೬೪ ಜನ ಮೃತಪಟ್ಟಿದ್ದರು. ೨೦೨೪ರಲ್ಲಿ ೪೨ ಮಂದಿ ಮೃತಪಟ್ಟ ವರದಿ ಇದೆ. ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿರುವುದು ಪೊಲೀಸ್, ಆರ್‌ಟಿಓ ಹಾಗೂ ಸಂಬಂಧಿಸಿದ ಇಲಾಖೆಗಳು ಕೈಗೊಂಡ ಸುರಕ್ಷಿತಾ ಕ್ರಮ ಹಾಗೂ ಚಾಲಕರ ಎಚ್ಚರಿಕೆಯ ಚಾಲನೆ ಕಾರಣ ಎಂದರು. ಬೇಡಿಕೆಗೆ ತಕ್ಕಂತೆ ನಮ್ಮಲ್ಲಿ ರಸ್ತೆಗಳ ಅಭಿವೃದ್ಧಿಯಾಗುತ್ತಿದೆ. ರಸ್ತೆ ನಿರ್ಮಾಣ, ನಿರ್ವಹಣಾ ಇಲಾಖೆಗಳ ಅದಿಕಾರಿಗಳು ರಸ್ತೆಗಳಲ್ಲಿ ಅಗತ್ಯವಿರುವ ಕಡೆ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು. ವಾಹನ ಚಲಾವಣೆ ಆರಂಭಿಸುವ ಮುನ್ನ ಸಂಬಂಧಿಸಿದ ದಾಖಲಾತಿಗಳು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವದನ್ನು ತಪ್ಪದೇ ಮಾಡಬೇಕು. ರಸ್ತೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆಯಿಂದ ಚಲಾಯಿಸಬೇಕು ಎಂದು ಹೇಳಿದರು.ಸಂಚಾರಿ ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ಗುರುನಾಥ್, ಮನಶಾಸ್ತ್ರಜ್ಞ ಡಾ.ಕುಮಾರ್, ಶಿಕ್ಷಕ ರೇಣುಕಾರಾಧ್ಯ ಅವರು ರಸ್ತೆ ಸುರಕ್ಷತೆ, ವಾಹನ ಚಾಲಕರ ಆರೋಗ್ಯಕರ ಮನಸ್ಥಿತಿ, ಸುರಕ್ಷತೆ ಬಗ್ಗೆ ಉಪನ್ಯಾಸ ನೀಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ.ಪ್ರಸಾದ್, ಹಿರಿಯ ಮೋಟಾರ್ ನಿರೀಕ್ಷಕ ಶರೀಫ್, ಸಿದ್ಧಗಂಗಾ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಸ್.ಪರಮೇಶ್, ಜಿಲ್ಲಾ ಮೋಟಾರ್ ವಾಹನ ತರಬೇತಿ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಅಣ್ಣೆನಹಳ್ಳಿ ಶಿವಕುಮಾರ್, ರಾಜ್ಯ ಕಾರ್ಯದರ್ಶಿ ಟಿ.ಆರ್.ಸದಾಶಿವಯ್ಯ, ಐಎಂಎ ಜಿಲ್ಲಾ ಅಧ್ಯಕ್ಷ ಡಾ.ನಾಗಭೂಷಣ್, ಕಾರ್ಯದರ್ಶಿ ಡಾ.ಪ್ರದೀಪ್, ರೋಟರಿ ತುಮಕೂರು ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಅಬ್ದುಲ್ ಖಾದರ್, ನರಸಿಂಹಮೂರ್ತಿ, ಆಟೋ ಚಾಲಕರ ಸಂಘದ ಅಧ್ಯಕ್ಷ ನಟರಾಜೇಗೌಡ ಮೊದಲಾದವರು ಭಾಗವಹಿಸಿದ್ದರು. ಇದರ ಅಂಗವಾಗಿ ಆರ್‌ಟಿಓ ಕಚೇರಿ ಆವರಣದಲ್ಲಿ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಿಂದ ಆರೋಗ್ಯ ತಪಾಸಣೆ ಹಾಗು ವಾಸನ್ ಐ ಕೇರ್‌ನಿಂದ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.