8, 9ರಂದು ಮಹಿಳಾ ಜಾನಪದ ಲೋಕೋತ್ಸವ

| Published : Feb 06 2025, 12:17 AM IST

ಸಾರಾಂಶ

ನಗರದ ಜಾನಪದ ಲೋಕದಲ್ಲಿ ಫೆ. 8 ಮತ್ತು 9 ರಂದು ಮಹಿಳಾ ಜಾನಪದ ಲೋಕೋತ್ಸವ-2025 ಆಯೋಜಿಸಲಾಗಿದೆ.ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮಹಿಳಾ ಜಾನಪದ ಲೋಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಜನಪದ ಕಲಾವಿದರೇ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಮಾಹಿತಿ । ಸಚಿವರು, ಶಾಸಕರು, ಸ್ವಾಮೀಜಿಗಳು ಭಾಗಿ

ಕನ್ನಡಪ್ರಭ ವಾರ್ತೆ ರಾಮನಗರನಗರದ ಜಾನಪದ ಲೋಕದಲ್ಲಿ ಫೆ. 8 ಮತ್ತು 9 ರಂದು ಮಹಿಳಾ ಜಾನಪದ ಲೋಕೋತ್ಸವ-2025 ಆಯೋಜಿಸಲಾಗಿದೆ.ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮಹಿಳಾ ಜಾನಪದ ಲೋಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಜನಪದ ಕಲಾವಿದರೇ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.8ರಂದು ಬೆಳಗ್ಗೆ 10.30ಕ್ಕೆ ಮಹಿಳಾ ಜಾನಪದ ಲೋಕೋತ್ಸವವನ್ನು ಕನ್ನಡ, ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದು, ಶ್ರೀ ಆದಿಚುಂಚನಗಿರಿ ಶಾಖಾ ಮಠಾಧೀಶ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಸಾನಿಧ್ಯವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಹಿರಿಯ ಜಾನಪದ ಸಂಶೋಧಕಿ ಡಾ. ಕೆ. ಆರ್. ಸಂಧ್ಯಾರೆಡ್ಡಿ ಆಗಮಿಸುವರು. ಯುವ ಜಾನಪದೋತ್ಸವದ ಉದ್ಘಾಟನೆಯನ್ನು ನಿವೃತ್ತ ಐ.ಎ.ಎಸ್ ಅಧಿಕಾರಿಗಳಾದ ಟಿ. ತಿಮ್ಮೇಗೌಡ ನೆರವೇರಿಸಲಿದ್ದಾರೆ ಎಂದರು.

ಕರಕುಶಲ ಮಳಿಗೆಗಳನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಉದ್ಘಾಟಿಸಲಿದ್ದು, ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸುವರು. ಕನ್ನಡ, ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಕೆ. ಧರಣೀದೇವಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಎಸ್ಪಿ ಶ್ರೀನಿವಾಸಗೌಡ , ಜಿಪಂ ಸಿಇಒ ಅನ್ಮೋಲ್ ಜೈನ್ ಭಾಗವಹಿಸುವರು. ಈ ಬಾರಿ ಪದ್ಮಶ್ರೀ ಪ್ರಶಸ್ತಿ ಭಾಜನರಾಗಿರುವ ರಾಮನಗರ ಜಿಲ್ಲೆಯ ಸಾಹಸ ಕಲಾವಿದ ಹಾಸನ ರಘುರನ್ನು ಅಭಿನಂದಿಸಲಾಗುತ್ತಿದೆ ಎಂದು ಹೇಳಿದರು.

ಮಧ್ಯಾಹ್ನ 2 ಗಂಟೆಗೆ ಕರ್ನಾಟಕ ಜಾನಪದ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ. ತಿಮ್ಮೇಗೌಡ ನೀಡಿರುವ ದತ್ತಿನಿಧಿಯ ಪ್ರಾಯೋಜನೆಯಿಂದ ಯುವಜನಪದ ಪ್ರತಿಭೆ ಪ್ರೋತ್ಸಾಹಿಸಲು ರಾಜ್ಯ ಮಟ್ಟದ ಜನಪದ ಕಲೆಗಳ ಯುವಜನೋತ್ಸವ ನಡೆಯಲಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬರುವ ಕಲಾವಿದರುಗಳಿಂದ ಕಲಾ ಪ್ರದರ್ಶನಗಳಿರುತ್ತವೆ. ಅದೇ ದಿನ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ರಾಜ್ಯದ ಎಲ್ಲ ಭಾಗಗಳಿಂದ ಬರುವ ಕಲಾವಿದರಿಂದ ವೈವಿಧ್ಯಮಯ ಜನಪದ ನೃತ್ಯ, ಕಲಾ ಪ್ರದರ್ಶನ ಹಾಗೂ ಗೀತಗಾಯನ ಕಾರ್ಯಕ್ರಮವಿರುತ್ತದೆ. ನಗಾರಿ, ಪೂಜಾ ಕುಣಿತ, ಗೊರವರ ಕುಣಿತ, ನೀಲಗಾರರ ಪದ, ವೀರಗಾಸೆ, ಜಡೆ ಕೋಲು, ಕೊಂಬು-ಕಹಳೆ ವಾದನ, ಕಂಸಾಳೆ ನೃತ್ಯ, ಜಗ್ಗಲಿಗೆ ಮೇಳ, ಹುಲಿ ವೇಷ, ಪಟಾ ಕುಣಿತ, ಕೀಲು ಕುದುರೆ, ಗೊರವರ ಕುಣಿತ ಮತ್ತು ಜನಪದ ಗೀತಗಾಯನ ಪ್ರದರ್ಶನವಿರುತ್ತದೆ ಎಂದು ತಿಳಿಸಿದರು.

ಫೆ.9ರಂದು ಬೆಳಗ್ಗೆ 10.30ಕ್ಕೆ ಜನಪದ ಗಾಯನ ಮತ್ತು ಕಲೆಯಲ್ಲಿ ಮಹಿಳೆಯರ ಪಾತ್ರ: ಸುಧಾರಣೆ ಮತ್ತು ಸಂರಕ್ಷಣೆ " ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮವಿದ್ದು, ಮಹಿಳಾ ವಿದ್ವಾಂಸರು ಮತ್ತು ಕಲಾವಿದರೊಂದಿಗೆ ಸಂವಾದವಿರುತ್ತದೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ.ಬೋರಲಿಂಗಯ್ಯ ಪ್ರಾಸ್ತಾವಿಕ ಮಾತುಗಳನ್ನು ಆಡಲಿದ್ದಾರೆ. ಲೇಖಕಿ ಎಚ್. ಆರ್. ಸುಜಾತ ಆಶಯ ನುಡಿಗಳನ್ನಾಡಲಿದ್ದು, ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ ವಿ.ಎಲ್. ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. 60 ಜನ ವಿದ್ವಾಂಸರು, ಸಾಹಿತಿಗಳು ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದ ದಿ. ಶ್ರೀ ಎಚ್. ಎನ್. ನಂಜರಾಜ್ ಮತ್ತು ದಿ. ಶ್ರೀಮತಿ ಇಂದಿರಾ ಬಾಲಕೃಷ್ಣ ಸ್ಮರಣಾರ್ಥ ಆಹ್ವಾನಿತ ಗ್ರಾಮೀಣ ಗಾಯಕರಿಂದ ಜನಪದ ಗೀತ ಗಾಯನೋತ್ಸವವು ನಡೆಯಲಿದೆ. ಜನಪದ ಹಾಡುಗಾರರಿಂದ ಜನಪದ ಸಂಗೀತ ವೈಭವವು ಅನಾವರಣಗೊಳ್ಳಲಿದೆ ಎಂದರು.

ಸಂಜೆ 5.30ಕ್ಕೆ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಸಿ.ಪಿ. ಯೋಗೇಶ್ವರ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ. ಎಂ. ನಾಗರಾಜ್, ಕುಲಪತಿ ಡಾ. ನಾಗೇಶ್ ವಿ. ಬೆಟ್ಟಕೋಟೆ, ಬುಡಕಟ್ಟು ಕಲಾವಿದೆ ಡಾ. ರತ್ನಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಾನಪದ ಲೋಕದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಗಿರಿಜನ ಲೋಕದ ನಿರ್ಮಾಣ ಕಲಾವಿದ ಶ್ರೀ ಹರ್ಷ ಸೊಲಬಕ್ಕನವರ್ ಅವರಿಗೆ ಗೌರವಾರ್ಪಣೆ ಇರುತ್ತದೆ ಎಂದರು.ಸಂಜೆ 7 ಗಂಟೆಯಿಂದ ಮಹಿಳಾ ಯಕ್ಷಗಾನ ಪ್ರಸಂಗ ಶ್ರೀ ಕೃಷ್ಣಲೀಲೆ, ಗೋರುಕನ ಕುಣಿತ, ಡಮಾಮಿ ಕುಣಿತ, ತರ‍್ಲೆ ಕುಣಿತ, ಅಂಟಿಕೆ-ಪಂಟಿಕೆ, ಪಟ ಕುಣಿತ, ತಮಟೆ, ಹುಲಿ ವೇಷ, ಲಂಬಾಣಿ ನೃತ್ಯ, ಗೊರವರ ಕುಣಿತ, ಜಗ್ಗಲಿಗೆ ಮುಂತಾದ ವೈವಿಧ್ಯಮಯ ಪ್ರದರ್ಶನವೂ ಇರುತ್ತದೆ ಹಾಗೂ ಈ ಎರಡು ದಿನಗಳಂದು ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಬೋರಲಿಂಗಯ್ಯ ತಿಳಿಸಿದರು.ಯಾವ ಪ್ರಶಸ್ತಿಗೆ ಯಾರು ಭಾಜನರಾಗಿದ್ದಾರೆ: ನಾಡೋಜ ಎಚ್.ಎಲ್. ನಾಗೇಗೌಡ-ಜಾನಪದ ಲೋಕಶ್ರೀ ಪ್ರಶಸ್ತಿಗೆ ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್, ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿಗೆ ಜಾನಪದ ವಿದ್ವಾಂಸ ಡಾ. ಕ್ಯಾತನಹಳ್ಳಿ ರಾಮಣ್ಣ, ನಾಡೋಜ ಡಾ. ಜಿ. ನಾರಾಯಣ - ಜಾನಪದ ಲೋಕ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಏಕತಾರಿ ಕಲಾವಿದ ಅಡಿವೆಪ್ಪ ಸಣ್ಣಬೀರಪ್ಪ ಕುರಿಯವರ, ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಬುರಾಕತಾ ಕಲಾವಿದ ಬಸಮ್ಮ, ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿಗೆ ರಾಮನಗರ ಜಿಲ್ಲೆಯ ತಮಟೆ ವಾದನ ಕಲಾವಿದ ದೊಡ್ಡ ಕಟುಕಯ್ಯ ಮತ್ತು ಜನಪದ ರಂಗಭೂಮಿ ನಿರ್ದೇಶಕ ಬೈರನಹಳ್ಳಿ ಶಿವರಾಮು ಭಾಜನರಾಗಿದ್ದಾರೆ.

ಜಾನಪದ ಲೋಕ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ತತ್ವಪದ ಕಲಾವಿದರಾದ ನಿಂಬೆವ್ವ ಶಿವಗೊಂಡ ಬಿರಾದಾರ, ಬೆಂಗಳೂರು ನಗರ ಜಿಲ್ಲೆಯ ತಮಟೆ ವಾದನ ಕಲಾವಿದರಾದ ಟಿ. ಯೋಗನರಸಿಂಹಮೂರ್ತಿ, ಬಳ್ಳಾರಿ ಜಿಲ್ಲೆಯ ಗಣೆ ವಾದನ ಕಲಾವಿದರಾದ ದಳವಾಯಿ ಚಿತ್ತಪ್ಪ, ಚಾಮರಾಜನಗರ ಜಿಲ್ಲೆಯ ಗೊರವ ಕುಣಿತ ಕಲಾವಿದರಾದ ಶಿವರಾಮೇಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಜನಪದ ವಸ್ತು ಸಂಗ್ರಹಾಲಯ ತಜ್ಞರಾದ ಡಾ. ತುಕರಾಮ್ ಪೂಜಾರಿ, ಬೆಂಗಳೂರು ನಗರ ಜಿಲ್ಲೆಯ ತಂಬೂರಿ ಕಲಾವಿದರಾದ ಎಂ.ಕೆ. ರಾಮಯ್ಯ, ಬಳ್ಳಾರಿ ಜಿಲ್ಲೆಯ ಹಗಲುವೇಷ ಕಲಾವಿದರಾದ ವೈ. ಚಿನ್ನಸ್ವಾಮಿ, ತುಮಕೂರು ಜಿಲ್ಲೆಯ ಸೋಬಾನೆ ಕಲಾವಿದರಾದ ಸೋಬಾನೆ ರಾಮಯ್ಯ, ಶಿವಮೊಗ್ಗ ಜಿಲ್ಲೆಯ ಅಂಟಿಗೆ-ಪಂಟಿಗೆ ಕಲಾವಿದ ಯೋಗೇಂದ್ರ, ಕಲಬುರ್ಗಿ ಜಿಲ್ಲೆಯ ಜಾನಪದ ವಿದ್ವಾಂಸರಾದ ಎ.ಕೆ. ರಾಮೇಶ್ವರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಕಲಾವಿದರಾದ ಲಕ್ಷ್ಮಿ ಬುದ್ದುಗೌಡ ಆಯ್ಕೆಯಾಗಿದ್ದಾರೆ. ಲೋಕ ಸರಸ್ವತಿ ಗ್ರಂಥ ಪ್ರಶಸ್ತಿಗೆ ಆನೆಗೊಂದಿ ಪೇಟೆಯೊಳಗೆ ಪುಸ್ತಕದ ಲೇಖಕರಾದ ಡಾ. ಅಮ್ಮಸಂದ್ರ ಸುರೇಶ್ ಭಾಜರಾಗಿದ್ದಾರೆ.