ಹಳ್ಳಿಮೈಸೂರು ಸುತ್ತಮುತ್ತಲ ಹಳ್ಳಿಗಳಿಗೆ ಪ್ರಮುಖ ಆಡಳಿತಾತ್ಮಕ ಹಾಗೂ ವಾಣಿಜ್ಯ ಕೇಂದ್ರವಾಗಿದ್ದು, ಹೊಸ ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದೆ ಎಂದರು. ಆದರೆ ಹೋಬಳಿಗೆ ಸಂಬಂಧಿಸಿದ ಆಡಳಿತಾತ್ಮಕ ಕೆಲಸಗಳಿಗಾಗಿ ಜನರು ದೂರದ ಹೊಳೆನರಸೀಪುರ ತಾಲೂಕು ಕೇಂದ್ರಕ್ಕೆ ತೆರಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದು, ಇದರಿಂದ ರೈತರು, ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಕಳೆದ ಸುಮಾರು ೨೦ ವರ್ಷಗಳಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿಕೊಂಡಿರುವ ಹಳ್ಳಿಮೈಸೂರು ಹೋಬಳಿಯ ಜನರು ಆಡಳಿತಾತ್ಮಕವಾಗಿ ಹೊಳೆನರಸೀಪುರ ತಾಲೂಕಿಗೆ ಅವಲಂಬಿತರಾಗಿರುವುದರಿಂದ ದಿನನಿತ್ಯ ನರಕ ಅನುಭವಿಸುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿ ಕೇಂದ್ರವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ, ಹಳ್ಳಿಮೈಸೂರು ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಸೋಮಶೇಖರ್‌ ಮಾತನಾಡಿ, ಹಳ್ಳಿಮೈಸೂರು ಹೋಬಳಿಯು ಹಾಸನ ಜಿಲ್ಲೆಯಲ್ಲಿಯೇ ಅತಿದೊಡ್ಡ ಹೋಬಳಿಗಳಲ್ಲೊಂದು ಆಗಿದ್ದು, ಸುಮಾರು ೧೦೦ಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡಿದೆ. ಸುಮಾರು ೧೫ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ವಿಸ್ತಾರ ಹೊಂದಿರುವ ಈ ಹೋಬಳಿಯಲ್ಲಿ ಅಂದಾಜು ೧.೫ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹಾಗೂ ಹೆಚ್ಚಿನ ಸಂಖ್ಯೆಯ ಮತದಾರರು ವಾಸಿಸುತ್ತಿದ್ದಾರೆ. ರೈತರು, ಕಾರ್ಮಿಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸರ್ಕಾರದ ನಿತ್ಯ ಕೆಲಸ ಕಾರ್ಯಗಳಿಗಾಗಿ ಪ್ರತಿದಿನವೂ ಹಳ್ಳಿಮೈಸೂರಿಗೆ ಆಗಮಿಸುತ್ತಾರೆ. ಹಳ್ಳಿಮೈಸೂರು ಹೋಬಳಿಯಲ್ಲಿ ಈಗಾಗಲೇ ನಾಡಕಚೇರಿ, ಪೊಲೀಸ್ ಠಾಣೆ, ಬ್ಯಾಂಕುಗಳು, ಕೃಷಿ ಇಲಾಖೆ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಕಸ್ತೂರಿಬಾ ವಸತಿ ಶಾಲೆ, ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಅನೇಕ ಸರ್ಕಾರಿ ಹಾಗೂ ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಕಾರಣದಿಂದ ಹಳ್ಳಿಮೈಸೂರು ಸುತ್ತಮುತ್ತಲ ಹಳ್ಳಿಗಳಿಗೆ ಪ್ರಮುಖ ಆಡಳಿತಾತ್ಮಕ ಹಾಗೂ ವಾಣಿಜ್ಯ ಕೇಂದ್ರವಾಗಿದ್ದು, ಹೊಸ ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದೆ ಎಂದರು. ಆದರೆ ಹೋಬಳಿಗೆ ಸಂಬಂಧಿಸಿದ ಆಡಳಿತಾತ್ಮಕ ಕೆಲಸಗಳಿಗಾಗಿ ಜನರು ದೂರದ ಹೊಳೆನರಸೀಪುರ ತಾಲೂಕು ಕೇಂದ್ರಕ್ಕೆ ತೆರಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದು, ಇದರಿಂದ ರೈತರು, ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಕಳೆದ ಸುಮಾರು ೨೦ ವರ್ಷಗಳಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿಕೊಂಡಿರುವ ಹಳ್ಳಿಮೈಸೂರು ಹೋಬಳಿಯ ಜನರು ಆಡಳಿತಾತ್ಮಕವಾಗಿ ಹೊಳೆನರಸೀಪುರ ತಾಲೂಕಿಗೆ ಅವಲಂಬಿತರಾಗಿರುವುದರಿಂದ ದಿನನಿತ್ಯ ನರಕ ಅನುಭವಿಸುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಹಳ್ಳಿಮೈಸೂರು ಹೋಬಳಿ ಕೇಂದ್ರವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಮೂಲಕ ಲಕ್ಷಾಂತರ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು. ಇದೇ ವೇಳೆ ಗ್ರಾಮಸ್ಥರಾದ ಎಚ್.ಎಸ್. ಮಂಜುನಾಥ್, ಎಂ.ಎನ್. ವಿಶ್ವನಾಥ್, ಸೋಮಶೇಖರ್, ಬಾಲಗಂಗಾಧರ್, ನಾಗರಾಜಪ್ಪ, ಡಾ. ಪ್ರಕಾಶ್, ಚಿಕ್ಕೇಗೌಡ ಅಂಗಡಿ, ರವಿ ತೇಜೂರು, ಮಹಾದೇವಪ್ಪ, ಎಚ್.ಬಿ. ಮಂಜುನಾಥ್, ಮಲ್ಲೇಶ್ ಕೇಬಲ್, ಶಾಂತವೀರಪ್ಪ ಆನೆಕನ್ನಂಬಾಡಿ, ಶ್ರೀಕಂಠ ಮೂರ್ತಿ, ರವಿಕುಮಾರ್ ಗೊಹಳ್ಳಿ, ಮಧು ಹೊಸಕೊಪ್ಪಲು, ಚೇತನ್ ಶಿವರುದ್ರಪ್ಪ, ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.